ಅಭ್ಯರ್ಥಿ ಭವಿಷ್ಯ ಬರೆಯಲಿರುವ ಮತದಾರ

| Published : May 07 2024, 01:06 AM IST

ಸಾರಾಂಶ

ಮಂಗಳವಾರ ಮತದಾನ ಪ್ರಕ್ರಿಯೆಯೂ ಚುರುಕಿನಿಂದ ನಡೆಯುವ ಸಾಧ್ಯತೆ ಇದೆ. ಬಿರುಬಿಸಿಲು ಇರುವುದರಿಂದ ಬೆಳಗ್ಗೆ 11 ಗಂಟೆ ಒಳಗಡೆ ಹಾಗೂ ಸಂಜೆ 4 ಗಂಟೆಯಿಂದ ಮತದಾನ ಮುಕ್ತಾಯವಾಗುವ ತನಕ ಹೆಚ್ಚು ಮತದಾನ ಆಗುವ ನಿರೀಕ್ಷೆ ಇದೆ.

ಕಾರವಾರ: ಮತದಾರರನ್ನು ಓಲೈಸುವ ರಾಜಕೀಯ ಪಕ್ಷಗಳ ಪ್ರಚಾರದ ಸಮರ ಅಂತ್ಯವಾಗಿದೆ. ಮಂಗಳವಾರ ಬೆಳಗ್ಗೆಯಿಂದ ಮತದಾರ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾನೆ. ಮತದಾನಕ್ಕೆ ಎಲ್ಲವೂ ಅಣಿಯಾಗಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಮತದಾನ ಈ ಬಾರಿ ತುರುಸಿನಿಂದ ನಡೆಯುವ ಸಾಧ್ಯತೆ ಇದೆ. ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯಲ್ಲಿ ಹಾಗೂ ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್ ಖಾನಾಪುರದಲ್ಲಿ ಮತದಾನ ಮಾಡಲಿದ್ದಾರೆ.

ಹಾಗೆ ನೋಡಿದರೆ ಚುನಾವಣಾ ಕಣದಲ್ಲಿ ಒಟ್ಟೂ 13 ಅಭ್ಯರ್ಥಿಗಳು ಇದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇದೆ. ಉಳಿದ ಅಭ್ಯರ್ಥಿಗಳು ಎಷ್ಟು ಮತಗಳನ್ನು ಪಡೆಯಲಿದ್ದಾರೆ ಎನ್ನುವ ಕುತೂಹಲ ಮಾತ್ರ ಇದೆ.

ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಈ ಬಾರಿ ಭಾರಿ ಕಸರತ್ತು ನಡೆಸಿದೆ. ಗ್ಯಾರಂಟಿ ಅಸ್ತ್ರವನ್ನು ಪ್ರಯೋಗಿಸಿ ಗೆಲುವಿನ ಲೆಕ್ಕಾಚಾರ ಹಾಕಿದೆ. ಎಂದಿನ ಅಭ್ಯರ್ಥಿಯಾದ ಅನಂತಕುಮಾರ ಹೆಗಡೆ ಬದಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಮೋದಿ ಅಸ್ತ್ರವನ್ನು ಪ್ರಯೋಗಿಸಿ ಗೆಲುವಿನ ಕನಸು ಕಾಣುತ್ತಿದೆ.

ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಸ್ವತಃ ಶಿರಸಿಗೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ, ಪ್ರಹ್ಲಾದ ಜೋಶಿ, ಸುನೀಲಕುಮಾರ, ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ರೂಪಾಲಿ ಎಸ್. ನಾಯ್ಕ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಮತ್ತಿತರರು ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ ಮಾರ್ಗರೆಟ್ ಆಳ್ವ, ರಮಾನಾಥ ರೈ, ವಿನಯಕುಮಾರ ಸೊರಕೆ, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್ ಮತ್ತಿತರರು ಪ್ರಚಾರ ನಡೆಸಿದ್ದಾರೆ.

ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಕಾಂಗ್ರೆಸ್‌ನಿಂದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಬಿಜೆಪಿಯಿಂದ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ವ್ಯಾಪಕ ಪ್ರಚಾರ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಮಂಗಳವಾರ ಮತದಾನ ಪ್ರಕ್ರಿಯೆಯೂ ಚುರುಕಿನಿಂದ ನಡೆಯುವ ಸಾಧ್ಯತೆ ಇದೆ. ಬಿರುಬಿಸಿಲು ಇರುವುದರಿಂದ ಬೆಳಗ್ಗೆ 11 ಗಂಟೆ ಒಳಗಡೆ ಹಾಗೂ ಸಂಜೆ 4 ಗಂಟೆಯಿಂದ ಮತದಾನ ಮುಕ್ತಾಯವಾಗುವ ತನಕ ಹೆಚ್ಚು ಮತದಾನ ಆಗುವ ನಿರೀಕ್ಷೆ ಇದೆ. ಮತದಾನದ ಜಾಗೃತಿಗೂ ಈ ಬಾರಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಅನಂತಕುಮಾರ ಹೆಗಡೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ್ ಸ್ಪರ್ಧಿಸಿದ್ದರು. ಆಗ ಶೇ. 74.07ರಷ್ಟು ಮತದಾನವಾಗಿತ್ತು. ಈ ಬಾರಿ ಅದಕ್ಕಿಂತ ಮತದಾನದ ಪ್ರಮಾಣ ಹೆಚ್ಚಾಗಲಿದೆಯೇ ಎನ್ನುವ ಕುತೂಹಲ ಉಂಟಾಗಿದೆ.