ಎಂಪಿ ಚುನಾವಣೆ: ಜಿಲ್ಲಾದ್ಯಂತ ಕಲಂ 144 ಅಡಿ ಪ್ರತಿಬಂಧಕಾಜ್ಞೆ ಜಾರಿ

| Published : May 07 2024, 01:06 AM IST

ಸಾರಾಂಶ

ಮತದಾನವು ಮುಕ್ತಾಯಗೊಳ್ಳುವ ಅವಧಿಯ 48 ಗಂಟೆಗಳ ಪೂರ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಮತದಾನವು ಸುಗಮವಾಗಿ ಮುಕ್ತವಾಗಿ ಜರುಗಿಸುವ ಹಿತದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಆದೇಶ

ಕನ್ನಡಪ್ರಭ ವಾರ್ತೆ ಯಾದಗಿರಿ

ಚುನಾವಣೆ ಹಿನ್ನೆಲೆಯಲ್ಲಿ ಮೇ 7ರಂದು ಮತದಾನ ಜರುಗಲಿದ್ದು, ಮತದಾನವು ಮುಕ್ತಾಯಗೊಳ್ಳುವ ಅವಧಿಯ 48 ಗಂಟೆಗಳ ಪೂರ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಮತದಾನವು ಸುಗಮವಾಗಿ ಮುಕ್ತವಾಗಿ ಜರುಗಿಸುವ ಹಿತದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಆದೇಶ ಹೊರಡಿಸಿದ್ದಾರೆ.

ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಅಭ್ಯರ್ಥಿ, ಬೆಂಬಲಿಗರು ಸೇರಿ 5 ಜನರಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರತಕ್ಕದ್ದಲ್ಲ. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ ಡೊಣ್ಣಿ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.

ಮತಗಟ್ಟೆಗಳ 100 ಮೀಟರ್ ಒಳಗೆ ಚುನಾವಣೆ ಪ್ರಚಾರ ನಿಷೇಧಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಬುಕ್‌ಸ್ಟಾಲ್, ಸೈಬರ್ ಕೆಫೆ ನಿರ್ಬಂಧಿಸಲಾಗಿದೆ. ಕಲ್ಲುಗಳನ್ನು, ಕ್ಷಾರ ಪದಾರ್ಥ ಇಲ್ಲವೆ ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಈ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.

ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ, ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಈ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುದಾಗಲಿ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.

ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್-19 ಕಾರ್ಯಗಳಿಗೆ ಈ ಆಜ್ಞೆ ಅನ್ವಯಿಸುದಿಲ್ಲ. ಮದುವೆ ಮತ್ತು ಇತರ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ನಿಯಮಗಳನ್ನು ಪಾಲಿಸುವುದು.

ಮೊಬೈಲ್‌ ಫೋನ್‌ ನಿಷೇಧ: ಮತಗಟ್ಟೆಗಳ ಸುತ್ತಲೂ 100 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್, ಕಾರ್ಡಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾಧಿಕಾರಿ ಅವರಿಂದ ಅನುಮತಿ ಪಡೆದ ಅಧಿಕಾರಿಗಳು, ಸಿಬ್ಬಂದಿ ಈ ಆದೇಶದಿಂದ ಹೊರತುಪಡಿಸಲಾಗಿದೆ.

ಮತಗಟ್ಟೆಗಳ ಸುತ್ತ 100 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ. ಈ ಅವಧಿಯಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ. ಈ ಅವಧಿಯಲ್ಲಿ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಹೋಗತಕ್ಕದ್ದು, ಕಲ್ಯಾಣ ಮಂಟಪ, ಸಮುದಾಯ ಭವನ, ಹೋಟೆಲ್‌ ಮತ್ತು ಅತಿಥಿಗೃಹ ವಾಸ್ತವ್ಯ ಹೊಡಿದವರ ಪರಿಶೀಲನೆ ಮಾಡಿ ಮತದಾರರಲ್ಲದವರನ್ನು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸಲು ಕ್ರಮ ವಹಿಸುವಂತೆ ಅವರು ತಿಳಿಸಿದ್ದಾರೆ.