ಬರ ನಿರ್ವಹಣೆ: ಜಿಲ್ಲೆಯಲ್ಲಿ ಹಣದ ಕೊರತೆ ಇಲ್ಲ

| Published : May 07 2024, 01:02 AM IST

ಸಾರಾಂಶ

ಚಿಕ್ಕಮಗಳೂರು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆಗೆ ಸರ್ಕಾರದಿಂದ ಈವರೆಗೆ 12 ಕೋಟಿ ರು. ಬಿಡುಗಡೆಯಾಗಿದೆ. ಬರ ನಿರ್ವಹಣೆಗೆ ಜಿಲ್ಲೆಯಲ್ಲಿ ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

ಸರ್ಕಾರದಿಂದ ₹ 12 ಕೋಟಿ । ಹಲವು ಮುಂಜಾಗ್ರತಾ ಕ್ರಮ । ಅಜ್ಜಂಪುರ ತಾಲೂಕಲ್ಲಿ ಸಮಸ್ಯೆ ಗಂಭೀರ । ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾಹಿತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆಗೆ ಸರ್ಕಾರದಿಂದ ಈವರೆಗೆ 12 ಕೋಟಿ ರು. ಬಿಡುಗಡೆಯಾಗಿದೆ. ಬರ ನಿರ್ವಹಣೆಗೆ ಜಿಲ್ಲೆಯಲ್ಲಿ ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋರ್ ವೆಲ್ ಅಳಪಡಿಸುವುದು, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಸೇರಿದಂತೆ ಇತರೆ ಕಾಮಗಾರಿಗಳಿಗೆ ಈವರೆಗೆ 84 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಇನ್ನು 30 ಲಕ್ಷ ರು. ಬಿಲ್ ಪಾವತಿಸಬೇಕಿದೆ ಎಂದು ತಿಳಿಸಿದರು.ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ವರ್ಷದಲ್ಲಿ ಜನವರಿಯಿಂದ ಈವರೆಗೆ ಬಿದ್ದಿರುವ ಮಳೆಯಲ್ಲಿ ಶೇ. 6 ರಷ್ಟು ಕೊರತೆ ಕಂಡು ಬಂದಿದೆ. ಹಾಗಾಗಿ ಹಿಂಗಾರಿನಲ್ಲಿ ಬಿತ್ತನೆ ಗುರಿ ತಲುಪಲು ಆಗಿಲ್ಲ. ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ ಎಂದ ಅವರು, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಕೆಲವು ದಿನಗಳ ಹಿಂದೆ ಮಳೆ ಬಂದಿದೆ. ಆದರೆ, ಇನ್ನುಳಿದ ತಾಲೂಕುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ ಎಂದರು.ಅಜ್ಜಂಪುರ, ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಎದುರಾಗಿದೆ. ಜಿಲ್ಲೆಯ 436 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತು ಮಾಡಲಾಗಿದೆ. ಅಜ್ಜಂಪುರ ತಾಲೂಕಿ ನಲ್ಲಿ ಕೆಲವು ದಿನಗಳಿಂದ ಅಂತರ್ಜಲ ಮಟ್ಟ 18 ರಿಂದ 20 ಮೀಟರ್‌ಗೆ ಕುಸಿದಿದೆ ಎಂದು ಹೇಳಿದರು.39 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 95 ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿನ ಅಭಾವ ಎದುರಾಗಿದೆ. ಅಜ್ಜಂಪುರ ತಾಲೂಕಿನ 20, ತರೀಕೆರೆಯ 24, ಚಿಕ್ಕಮಗಳೂರಿನ 14 ಹಾಗೂ ಕಡೂರಿನ ಒಂದು ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದ ಅವರು, 36 ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆಯಲಾಗುತ್ತಿದೆ. ಇವರಲ್ಲಿ 6-7 ಜನ ಉಚಿತವಾಗಿ ನೀರು ಕೊಡುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರಿಗೆ , ಹೊಸದಾಗಿ ಬೋರ್ ವೆಲ್ ಕೊರೆಯುವ ಕಾರ್ಯ ಹಾಗೂ ಪೈಪ್ ಲೈನ್ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಮೇವಿನ ಕೊರತೆ ಉಂಟಾಗಬಾರದೆಂಬ ಉದ್ದೇಶದಿಂದ ಈವರೆಗೆ 25 ಸಾವಿರ ಮೇವಿನ ಕಿಟ್ ವಿತರಣೆ ಮಾಡಲಾಗಿದೆ. 23 ವಾರಗಳಿಗೆ ಬೇಕಾಗುವಷ್ಟು ಮೇವು ಲಭ್ಯವಿದೆ. ಮುಂಜಾಗ್ರತಾ ಕ್ರಮವಾಗಿ ಅಮೃತಾಮಹಲ್ ಕಾವಲ್‌ನಲ್ಲಿ 50 ಟನ್ ಮೇವು ಬೆಳೆಸಲು ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿ ಕೊಳ್ಳುವಂತೆ ಗ್ರಾಮ ಪಂಚಾಯ್ತಿ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಗೋಕಟ್ಟೆ ಗುರುತಿಸಿ ಅಲ್ಲಿ ನೀರಿನ ವ್ಯವಸ್ಥೆ ಯಾಗುವಂತೆ ಹೇಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, 89 ಸಾವಿರ ಮೇವಿನ ಕಿಟ್ ಬೇಡಿಕೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈವರೆಗೆ 36 ಸಾವಿರ ಕಿಟ್ ಬಂದಿವೆ. ಇದರ ಜತೆಗೆ ಹೆಚ್ಚುವರಿಯಾಗಿ 17 ಸಾವಿರ ಕಿಟ್ ಬಂದಿದೆ ಎಂದು ಹೇಳಿದರು.ಕೆರೆ ಒತ್ತುವರಿ ಸರ್ವೆ:ಜಿಲ್ಲೆಯ ಹಲವು ಕೆರೆಗಳು ನೀರಿಲ್ಲದೆ ಒಣಗಿವೆ. ಇಂತಹ ಸಂದರ್ಭದಲ್ಲಿ ಒತ್ತುವರಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆದ್ಯತೆ ಮೇಲೆ ಸರ್ವೆ ಮಾಡಿ ಭದ್ರಪಡಿಸಲಾಗುವುದು, ಹಾಗೆನಾದರೂ ಒತ್ತುವರಿ ಕಂಡು ಬಂದರೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.ಮಳೆ ಕೊರತೆಯಿಂದ ಹಿಂಗಾರಿನಲ್ಲಿ ಬಿತ್ತನೆ ಕುಂಠಿತವಾಗಿದೆ. ಈವರೆಗೆ 8900 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದ ಲಾಗಿತ್ತು. ಆದರೆ, 1524 ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ ಎಂದರು.

2 ಲಾರಿ ಸೀಜ್:

ಬೋರ್‌ವೆಲ್ ಕೊರೆಯುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕೆಂದು ಬೋರ್‌ವೆಲ್ ಲಾರಿಗಳ ಮಾಲೀಕರಿಗೆ ಹಾಗೂ ಏಜೆಂಟರಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಆದರೂ ಕೂಡ ನಿಯಮ ಉಲ್ಲಂಘನೆ ಮಾಡಿರುವ ಎರಡು ಬೋರ್‌ವೆಲ್ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಹೇಳಿದರು.ಬೋರ್‌ವೆಲ್ ಕೊರೆಸುವ ಸಂದರ್ಭದಲ್ಲಿ ಜನರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ದರ ನಿಗದಿ ಪಡಿಸಲಾಗಿದೆ. ಇದರ ಜತೆಗೆ ಗ್ರಾಮೀಣ ಭಾಗದಲ್ಲಿ ಬೋರ್‌ವೆಲ್ ಕೊರೆಸಲು ಗ್ರಾಮ ಪಂಚಾಯ್ತಿ ಪಿಡಿಒಗಳಿಂದ ಎನ್‌ಒಸಿ ಪಡೆಯುವುದು ಕಡ್ಡಾಯ, ನಗರ ಪ್ರದೇಶದಲ್ಲಿ ಜ್ಯೂನಿಯರ್ ಎಂಜಿನಿಯರ್‌ಗಳಿಂದ ಎನ್‌ಒಸಿ ಪಡೆಯಬೇಕು. ಬೋರ್‌ಗಳು ವಿಫಲವಾದರೆ ಅವುಗಳನ್ನು ವ್ಯವಸ್ಥಿತವಾಗಿ ಮುಚ್ಚಬೇಕೆಂದು ತಿಳಿಸಲಾಗಿದೆ ಎಂದರು.ಸರ್ಕಾರಿ ಕಚೇರಿಗಳ ಕಟ್ಟಡಗಳ ಹೊರ ಭಾಗದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. 6 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್‌ ಹಾಗೂ ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.