ಲೋಕಸಮರಕ್ಕೆ ಸಿದ್ಧರಾದ ಚುನಾವಣಾ ಸಿಬ್ಬಂದಿ

| Published : May 07 2024, 01:05 AM IST

ಲೋಕಸಮರಕ್ಕೆ ಸಿದ್ಧರಾದ ಚುನಾವಣಾ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನ ಹೆಚ್ಚಳಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 5 ಸಖಿ ಮತಗಟ್ಟೆಗಳು, 1 ಯುವ ಜನರ ಮತಗಟ್ಟೆ, 1 ವಿಶೇಷ ಚೇತನರ ಮತಗಟ್ಟೆ. 1 ಸಾಂಪ್ರದಾಯಿಕ ಮತಗಟ್ಟೆ, 1 ಧ್ಯೇಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.

ಹುಬ್ಬಳ್ಳಿ:

ಧಾರವಾಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹು-ಧಾ ಕೇಂದ್ರ ಹಾಗೂ ಹು-ಧಾ ಪೂರ್ವ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಸಿಬ್ಬಂದಿ ತಮ್ಮ ಇವಿಎಂ ಯಂತ್ರವನ್ನು ಸೋಮವಾರ ಪರಿಶೀಲಿಸಿಕೊಂಡು ಮತಗಟ್ಟೆಗಳತ್ತ ಹೆಜ್ಜೆಹಾಕಿದರು.ನಗರದ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಸೆಂಟ್ರಲ್ ಕ್ಷೇತ್ರದ 260 ಮತಗಟ್ಟೆ ಹಾಗೂ ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಹು-ಧಾ ಪೂರ್ವ ವಿಧಾನಸಭಾ ಮತಕ್ಷೇತ್ರದ 217 ಮತಗಟ್ಟೆಗಳಿಗೆ ತೆರಳುವ ಚುನಾವಣಾ ಸಿಬ್ಬಂದಿಗಳಿಗೆ ಚುನಾವಣಾ ಕಾರ್ಯಕ್ಕೆ ಬೇಕಾದ ಅಗತ್ಯ ಪರಿಕರಗಳನ್ನು ಪೂರೈಸಲಾಯಿತು. ಚುನಾವಣಾ ಕರ್ತವ್ಯಕ್ಕೆ ನೇಮಕವಾಗಿರುವ ಸಿಬ್ಬಂದಿಗಳು ಬೆಳಗ್ಗೆಯೇ ಆಗಮಿಸಿ ತಮಗೆ ನಿಗದಿಗೊಳಿಸಲಾಗಿದ್ದ ಕೊಠಡಿಗಳಲ್ಲಿ ಇವಿಎಂ ಯಂತ್ರ ಪರಿಶೀಲನೆ ಮಾಡಿಕೊಂಡರು.ಪ್ರತಿಯೊಬ್ಬ ಬೂತ್‌ಗೆ ಸಿಬ್ಬಂದಿ ಹಾಗೂ ಪೊಲೀಸ್ ನಿಯೋಜನೆ ಮಾಡುವ ದೃಶ್ಯಗಳು ಕಂಡು ಬಂದವು. ಚುನಾವಣೆಗೆ ತೆರಳುವ ಮುನ್ನ ಸಿಬ್ಬಂದಿಗಳು ಅಂಚೆ ಮತದಾನ ಮಾಡಿ ತೆರಳಿದರು. ಒಂದು ಮತಗಟ್ಟೆಗೆ ಓರ್ವ ಪಿಆರ್‌ಓ, ಓರ್ವ ಎಪಿಆರ್‌ಓ, ಇಬ್ಬರು ಪೂಲಿಂಗ್ ಆಫೀಸರ್ ಸೇರಿದಂತೆ ಒಟ್ಟು 4 ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ. ಇವರ ಮೇಲೆ ಒಬ್ಬರು ವೀಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ. ಒಂದು ಮತಗಟ್ಟೆಯಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಇರಲಿದ್ದಾರೆ. ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ತಲುಪಿಸಲು ಬಸ್‌, ಟ್ರ್ಯಾಕ್ಸ್‌, ಮ್ಯಾಕ್ಸಿಕ್ಯಾಬ್‌ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮತದಾನ ಹೆಚ್ಚಳಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 5 ಸಖಿ ಮತಗಟ್ಟೆಗಳು, 1 ಯುವ ಜನರ ಮತಗಟ್ಟೆ, 1 ವಿಶೇಷ ಚೇತನರ ಮತಗಟ್ಟೆ. 1 ಸಾಂಪ್ರದಾಯಿಕ ಮತಗಟ್ಟೆ, 1 ಧ್ಯೇಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.

ಮಸ್ಟರಿಂಗ್‌ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಗಳು ಬೆಳಗ್ಗೆಯೇ ಬೇಗ ಆಗಮಿಸಿದ ಹಿನ್ನೆಲೆಯಲ್ಲಿ ಅವರಿಗೆ ಅಚ್ಚುಕಟ್ಟಾದ ಅಲ್ಪಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ದೂರದ ಮತಗಟ್ಟೆ ಹೊಂದಿರುವ ಕೆಲವು ಸಿಬ್ಬಂದಿಗಳು ಮಧ್ಯಾಹ್ನ ಊಟ ಮಾಡಿ ತೆರಳಿದರೆ ಮತ್ತೆ ಕೆಲವರು ಊಟದ ಪೊಟ್ಟಣಗಳೊಂದಿಗೆ ಮತಕೇಂದ್ರಗಳಿಗೆ ತೆರಳಿ ಊಟ ಮಾಡಿದರು. ಮಂಗಳವಾರದಂದು ನಡೆಯುವ ಲೋಕಸಭಾ ಚುನಾವಣೆ ನಡೆಯುವ ಮತಗಟ್ಟೆಗಳಿಗಾಗಿ ಈಗಾಗಲೇ ಅಗತ್ಯ ಬಂದೋಬಸ್ತ್‌ ಮಾಡಲಾಗಿದ್ದು, ಮತದಾನ ಪ್ರಕ್ರಿಯೆ ಯಶಸ್ವಿಗೊಳಿಸಲು ಬೇಕಾದ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ.