ಬಿಸಿಲು ಸೋಲಲಿ- ಮತದಾನ ಗೆಲ್ಲಲ್ಲಿ

| Published : May 07 2024, 01:05 AM IST

ಸಾರಾಂಶ

ಕಳೆದೊಂದು ತಿಂಗಳಿಂದ ಕಲಬುರಗಿ ಜಿಲ್ಲಾದ್ಯಂತ ಉಷ್ಣ ಮಾರುತಗಳ ಹಾವಳಿ, ಪಾದರಸ 47 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದರಿಂದ ಜಿಲ್ಲೆ ಕಾದ ಕಾವಲಿಯಂತಗಿದೆ. ಜನ ಬೆಳಗಿನ 7ಕ್ಕೆ ಮನೆ ಬಿಟ್ಟು ಹೊರಬಾರದಂತಹ ಪರಿಸ್ಥಿತಿ ಇಲ್ಲಿ ಎದುರಾಗಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದೊಂದು ತಿಂಗಳಿಂದ ಕಲಬುರಗಿ ಜಿಲ್ಲಾದ್ಯಂತ ಉಷ್ಣ ಮಾರುತಗಳ ಹಾವಳಿ, ಪಾದರಸ 47 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದರಿಂದ ಜಿಲ್ಲೆ ಕಾದ ಕಾವಲಿಯಂತಗಿದೆ. ಜನ ಬೆಳಗಿನ 7ಕ್ಕೆ ಮನೆ ಬಿಟ್ಟು ಹೊರಬಾರದಂತಹ ಪರಿಸ್ಥಿತಿ ಇಲ್ಲಿ ಎದುರಾಗಿದೆ.

ಇಂತಹ ಬಿಸಿಲಾಘಾತದ ಸನ್ನಿವೇಶದಲ್ಲೇ ಲೋಕ ಸಮರದ ಮತದಾನ ಮೇ 7ರ ಮಂಗಳವಾರ ನಡೆಯಲಿದ್ದು ಅದೆಲ್ಲಿ ಮತದಾನ ಪ್ರಮಾಣ ತಗ್ಗುವುದೋ ಎಂಬ ಆತಂಕ ಎದುರಾಗಿದೆ.

ಏತನ್ಮಧ್ಯೆ ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್‌ ಸಮೀತಿ, ಶಾಲೆ, ಕಾಲೇಜುಗಳ ಮಕ್ಕಳೊಂದಿಗೆ ಕೂಡಿಕೊಂಡು ಮತದಾನ ಯಾವ ಕಾರಣಕ್ಕು ತಗ್ಗದಂತೆ ಮಾಡಲು ಹರಸಾಹಸಕ್ಕೆ ಮುಂದಾಗಿದ್ದಾರೆ. ಚುನಾವಣೆ ಘೋಷಣೆ ದಿನದಿಂಲೇ ನಿರಂತರ ಮತದಾನ ಜಾಗೃತಿ, ಅದರ ಮಹತ್ವ ಸಾರುವುದು, ಯುವ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಎಲ್ಲ ಕಸರತ್ತುಗಳನ್ನು ನಡೆಸಲಾಗಿದೆ.

ಮತಗಟ್ಟೆಗಳಲ್ಲಿ ನೀರು- ನೆರಳು, ಆ್ಯಂಬುಲೆನ್ಸ್‌: ಏತನ್ಮಧ್ಯೆ ಕಳೆದೊಂದು ವಾರದಿಂದ ಬಿಸಿಗಾಳಿ ಇನ್ನೂ ತೀವ್ರಗೊಂಡಿದ್ದರಿಂದ ಜಿಲ್ಲಾಡಳಿತ ಮತಗಟ್ಟೆಗೆ ಬಂದು ಹೋಗುವ ಮತದಾರರಿಗೆ ನೀರಿನ ಸವಲತ್ತು, ನೆರಳು, ಸರತಿಯಲ್ಲಿ ನಿಂತವರಿಗೆ ಮೇಲೆ ಶ್ಯಾಮಿಯಾನಾ ಸವಲತ್ತು, ಆರೋಗ್ಯದಲ್ಲಿ ಹೆಚ್ಚುಕಮ್ಮಿ ಆದಲ್ಲಿ ತಕ್ಷಣ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್‌, ದಾಹದಿಂದಾಗಿ ಸಮಸ್ಯೆ ಕಾಡಿದಲ್ಲಿ ಓಆರ್‌ಎಸ್‌ ಪಾಕೀಟುಗಳು ಇತ್ಯಾದಿ ವ್ಯವಸ್ಥೆ ಕೂಡಾ ಮಾಡಿದೆ. ಮತದಾರರು ಬಿಸಲು ಎಂದು ಮನೆಯಲ್ಲೇ ಇರದೆ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವಂತೆಯೂ ಜಿಲ್ಲಾಡಳಿತ ಜಿಲ್ಲಾಂದ್ಯಂತ ಸ್ವೀಪ್‌ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಯತ್ನ ಮಾಡಿದೆ.

2019ರಲ್ಲಿ ಬಿಸಿಲಲ್ಲೇ ಲೋಕ ಸಮರ ನಡೆದಿತ್ತು, ಆಗ ಜಿಲ್ಲಾದ್ಯಂತ ಶೇ.60.89ರಷ್ಟು ಮತದಾನವಾಗಿತ್ತು. ಈ ಬಾರಿ ಸ್ವೀಪ್‌ ಸಮಿತಿ ಶೇ.80ಕ್ಕೆ ಮತದಾನ ಹೆಚ್ಚಿಸುವ ಗುರಿಯೊಂದಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಈ ಬಾರಿ ಜಿಲ್ಲೆಯ ಮತದಾನ ಅದೆಲ್ಲಿಗೆ ತಲುಪುವುದೋ ಎಂದು ಕಾದು ನೋಡಬೇಕಾಗಿದೆ.

ಶಿಂಗಾರಗೊಂಡಿವೆ ಮತಗಟ್ಟೆಗಳು: ಬಿಸಿಲು ಬಿಸಿ ಮಾರುತಗಳ ಮಧ್ಯೆಯೇ ಲೋಕಸಭಾ ಚುನಾವಣೆ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ತಮ್ಮೆಲ್ಲ ನಾನಾ ತರಹದ ಕಸರತ್ತುಗಳ ಮುಂದುವರೆದ ಭಾಗವಾಗಿ ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ಜಿಲ್ಲೆಯಾದ್ಯಂತ ಸಖಿ, ಥೀಮ್, ಯುವ ಹಾಗೂ ವಿಶೇಷಚೇತನರನ್ನು ಗುರಿಯಾಗಿಸಿ ಆಕರ್ಷಕ ಮತಗಟ್ಟೆಗಳನ್ನು ಸ್ಥಾಪಿಸಿವೆ.

ಈ ಮತಗಟ್ಟೆಗಳಿಗೆ ಸುಣ್ಣ-ಬಣ್ಣ ಬಳಿಯಲಾಗಿದೆ. ಅನೇಕ ಕಡೆ ಜಾಗೃತಿ ಘೋಷವಾಕ್ಯಗಳನ್ನು ಬರೆಯಲಾಗಿದೆ. ಮೇ 7ರ ಮತದಾನಕ್ಕಾಗಿ ಇಂತಹ ನೂರಾರು ಮತಗಟ್ಟೆಗಳು ಕಾದು ಕೆಂಡವಾಗಿರುವ ಕಲಬುರಗಿ ಜಿಲ್ಲಾದ್ಯಂತ ಮಧುವಣಗಿತ್ತಿಯಂತೆ ಸಿಂಗಾರಗೊಂಡು ಮತದಾರರನ್ನು ಆಕರ್ಷಿಸಲು ಸಜ್ಜಾಗಿವೆ.

ಜಿಲ್ಲೆಯಲ್ಲಿ 72 ವಿಶೇಷ ಬೂತ್‍ಗಳು: ಜಿಲ್ಲೆಯಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಬೂತ್, ತಲಾ ಒಂದು ಯುವ, ಪಿ.ಡಬ್ಲ್ಯೂ.ಡಿ. ಹಾಗೂ ಥೀಮ್ ಬೇಸ್ಡ್ ಬೂತ್ ಸ್ಥಾಪಿಸಲಾಗುತ್ತಿದೆ.

ಒಟ್ಟಾರೆ 45 ಸಖಿ ಪಿಂಕ್ ಬೂತ್, ತಲಾ 9 ಯುವ, ಥೀಮ್ ಹಾಗೂ ಪಿ.ಡಬ್ಲ್ಯೂ.ಡಿ. ಸೇರಿ ಒಟ್ಟಾರೆ 72 ಬೂತ್ ಮತದಾರರ ಸ್ನೇಹಿಯಾಗಿ ಸಿದ್ಧಗೊಳಿಸಲಾಗುತ್ತಿದೆ. ಮತಗಟ್ಟೆಗೆ ಬಂದು ಮತ ಚಲಾಯಿಸಲೆಂದು ಪ್ರೇರೇಪಿಸುವುದು ಇದರ ಉದ್ದೇಶವೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದ್ದಾರೆ.

ಸಖಿ ಪಿಂಕ್ ಬೂತ್: ಮಹಿಳಾ ಮತದಾರರೆ ಹೆಚ್ಚಿರುವ ಸಖಿ ಪಿಂಕ್ ಬೂತ್‍ನಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿ ಎಲ್ಲರು ಮಹಿಳೆಯರೇ ಆಗಿರಲಿದ್ದಾರೆ. ಸಂಪೂರ್ಣ ಮತಗಟ್ಟೆ ಮಹಿಳಾ ಸಿಬ್ಬಂದಿಯಿಂದ ನಿರ್ವಹಣೆಗೆ ಒಳಪಟ್ಟಿದ್ದು, ಎಲ್ಲವು ಮಹಿಳಾಮಯವಾಗಿರಲಿದೆ. ಗುಲಾಬಿ ಬಣ್ಣದ ಸೀರೆಯಲ್ಲಿ ಮಹಿಳಾ ಸಿಬ್ಬಂದಿ ಕಂಗೊಳಿಸಿದರೆ, ಮತಗಟ್ಟೆ ಕಟ್ಟಡಕ್ಕೆ ಪಿಂಕ್‌ ಬಣ್ಣ ಬಳಿಯಲಾಗಿದೆ.

ಯುವ ಬೂತ್: ವಿಶೇಷವಾಗಿ ಮೊದಲನೇ ಬಾರಿಗೆ ಮತದ ಹಕ್ಕು ಚಲಾಯಿಸುವ ಯುವ ಮತದಾರರನ್ನು ಗುರಿಯಾಗಿಸಿ ಕ್ಷೇತ್ರಕ್ಕೊಂದು “ಯುವ ಬೂತ್” ಸ್ಥಾಪಿಸಲಾಗುತ್ತಿದ್ದು, ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಚುನಾವಣೆ ಮತ್ತು ಮತದ ಮಹತ್ವ ಅದರ ಪ್ರಕ್ರಿಯೆ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವುದೇ ಮತಗಟ್ಟೆಯ ಮುಖ್ಯ ಉದ್ದೇಶವಾಗಿದೆ.

ಪಿ.ಡಬ್ಲ್ಯೂ.ಡಿ. ಮತಗಟ್ಟೆ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅತೀ ಹೆಚ್ಚು ಅಂಗವಿಕಲರು ಇರುವಂತಹ ಪ್ರದೇಶದಲ್ಲಿ “ಪಿ.ಡಬ್ಲ್ಯೂ.ಡಿ.” ಮತಗಟ್ಟೆ ಸ್ಥಾಪಿಸಿ ಅಲ್ಲಿ ವಿಶೇಷ ಚೇತನರಿಗಾಗಿ ಮತ ಚಲಾಯಿಸಲು ಅನುಕೂಲವಾಗುವಂತೆ ರ್‍ಯಾಂಪ್‌, ವ್ಹೀಲ್ ಚೇರ್, ವೇಟಿಂಗ್, ಶಾಮಿಯಾನ ಹಾಕಲಾಗುತ್ತಿದೆ.

ಮಾದರಿ (ಥೀಮ್) ಮತಗಟ್ಟೆ: ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ ಬಗ್ಗೆ ಪರಿಚಯ ನೀಡುವುದೇ ಈ ಮಾದರಿ (ಥೀಮ್) ಮತಗಟ್ಟೆ ಮುಖ್ಯ ಉದ್ದೇಶ. ಮತಕ್ಷೇತ್ರದ ವಿಶೇಷತೆ ಆ ಮತಗಟ್ಟೆಯ ಗೋಡೆ ಬರಹದಲ್ಲಿ ಪ್ರತಿಬಿಂಬವಾಗಲಿದೆ. ಈ ಮೂಲಕ ಸ್ಥಳೀಯ ವಿಶೇಷತೆಯನ್ನು ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಮತ ಚಲಾಯಿಸುವಂತೆ ಪ್ರೇರೇಪಿಸುವುದಾಗಿದೆ.

ಅಫಜಲ್ಪುರ ಟಿ.ಪಿ.ಎಸ್. ಮೀಟಿಂಗ್ ಹಾಲ್ ಮತಗಟ್ಟೆ ಸಂ.169ರಲ್ಲಿ ಜಿಲ್ಲೆಯ ಜೀವ ಜಲ ಭೀಮಾ ನದಿ, ಬ್ಯಾರೇಜ್ ಹಾಗೂ ಕಬ್ಬು, ಜೇವರ್ಗಿಯ ರಾಜವಾಳ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂ.169ರಲ್ಲಿ ಪ್ರಮುಖ ಕೃಷಿ ಬೆಳೆಗಳು, ಚಿತ್ತಾಪೂರದ ಗುಂಡಗುರ್ತಿ ಸರ್ಕಾರಿ ಎಂ.ಪಿ.ಎಸ್. ಶಾಲೆ ಮತಗಟ್ಟೆ ಸಂ.26ರಲ್ಲಿ ಐತಿಹಾಸಿಕ ಸನ್ನತ್ತಿ, ಸೇಡಂ ಸೇಡಂ ಪಟ್ಟಣದ ವಿದ್ಯಾ ನಗರ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂ.112ರಲ್ಲಿ ಸಿಮೆಂಟ್ ಕಾರ್ಖಾನೆ, ಚಿಂಚೋಳಿಯ ಗೋಟೂರ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂ.212ರಲ್ಲಿ ವನ್ಯಜೀವಿ ಅಭಯಾರಣ್ಯ, ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಸಂಗೋಳಗಿ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂ.95ರಲ್ಲಿ ಕಮಲಾಪೂರದ ಕೆಂಬಾಳೆ ಕುರಿತು ಮಾಹಿತಿ ನೀಡುವ ಗೋಡೆ ಬರಹಗಳು ಮತಗಟ್ಟೆಯಲ್ಲಿ ಕಾಣಬಹುದಾಗಿದೆ.

ಕಲಬುರಗಿ ದಕ್ಷಿಣ ಕ್ಷೇತ್ರದ ಜಿಲಾನಾಬಾದ ಪ್ರದೇಶದ ಶಾ ಜೀಲಾನಿ ನರ್ಸರಿ ಮತ್ತು ಪ್ರಾಥಮಿಕ ಶಾಲೆ ಮತಗಟ್ಟೆ ಸಂ.107ರಲ್ಲಿ ಪರಿಸರ ಉಳಿಸಿ ಜಾಗೃತಿ ಮುಡಿಸಲಾಗುತ್ತಿದೆ. ಉತ್ತರಕ್ಕೆ ಸೇರಿದ ಶಹಾಬಜಾರ ಪ್ರದೇಶದ ವಿವೇಕಾನಂದ ನಗರದಲ್ಲಿನ ಮಿಲೇನಿಯಂ ಆಂಗ್ಲ ಮಾಧ್ಯಮ ಶಾಲೆ ಮತಗಟ್ಟೆ ಸಂ.45 ರಲ್ಲಿ ಕಡಿಮೆ ಬಳಕೆ ಜೊತೆಗೆ ಮರು ಬಳಕೆ ಪರಿಕಲ್ಪನೆ ಸೃಷ್ಠಿಸಲಾಗಿದೆ.

ಆಳಂದ ಕ್ಷೇತ್ರದ ಮೋಘಾ(ಕೆ) ಸ.ಹಿ.ಪ್ರಾ.ಶಾಲೆ ಮತಗಟ್ಟೆ ಸಂ.186 ರಲ್ಲಿ ಜಿಲ್ಲೆಯ ಪ್ರಮುಖ ಬೆಳೆ ತೊಗರಿ ಉತ್ಪನ್ನ ಕುರಿತು ಚಿತ್ರ ಬಿಡಿಸ್ದದು, ವಿಷಯಾಧಾರಿತ 9 ಥೀಮ್ ಬೂತ್ ಪ್ರಮುಖ ಆಕರ್ಷಣಿಯ ಕೇಂದ್ರವಾಗಿ ಮಾರ್ಪಟ್ಟಿವೆ.