ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಬೇಕಿದೆ ಅಗ್ನಿಶಾಮಕ ಠಾಣೆ

| Published : May 06 2024, 12:39 AM IST

ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಬೇಕಿದೆ ಅಗ್ನಿಶಾಮಕ ಠಾಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಕೆಲ ವರ್ಷಗಳ ಹಿಂದೆ ಕೈಗಾರಿಕಾ ಪ್ರದೇಶದ ಸಿದ್ಧಾರ್ಥ ಹೊಂ ಅಪ್ಲೈಯನ್ಸಸ್ ಕಾರ್ಖಾನೆ ಬೆಂಕಿಗೆ ಆಹುತಿಯಾಯಿತು, ಕೊಟ್ಯಾಂತರ ರು. ಕಂಪನಿಗೆ ನಷ್ಟವಾಯಿತು. ಇತ್ತ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 48 ರ 1 ಮತ್ತು 2 ನೇ ಹಂತದ ಕೈಗಾರಿಕಾ ವಲಯದಲ್ಲಿರುವ ಲಿಯೋನೆಡ್ ಕೆಮಿಕಲ್ಸ್ ಕಾರ್ಖಾನೆಗೆ ಬೆಂಕಿ ತಗುಲಿ ಕಂಪನಿಯಲ್ಲಿದ್ದ ಕೆಮಿಕಲ್ಸ್ ನ ಡ್ರಮ್ ಗಳು ಹೊತ್ತಿ ಉರಿದವು.ಇಂತಹ ಅವಘಡಗಳು ಆಗಾಗ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ರಾಜ್ಯಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದೆ, ಬೆಂ.ಗ್ರಾ.ಜಿಲ್ಲೆಯಲ್ಲಿ ಸಹ ದಾಖಲೆಯ 38 ಡಿಗ್ರಿ ಸೆಲ್ಸಿಯಸ್ ತಾಪಮಾನವಾಗಿದೆ, ಈ ಹಿನ್ನೆಲೆ ಅಗ್ನಿ ಅವಘಡಗಳು ಹೆಚ್ಚಾಗುತ್ತಿದ್ದು, ಏಷ್ಯಾದ ಅತೀ ದೊಡ್ಡ ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಅಗ್ನಿಶಾಮಕ ಠಾಣೆ ಅವಶ್ಯಕತೆ ಹೆಚ್ಚುತ್ತಿದೆ. ಅದಷ್ಟು ಬೇಗ ಠಾಣೆ ನಿರ್ಮಾಣವಾಗಬೇಕೆಂಬುದು ಇಲ್ಲಿನ ಹಲವಾರು ಕೈಗಾರಿಕೋದ್ಯಮಿಗಳ ಮಹಾದಾಸೆಯಾಗಿದೆ.

ಬೃಹತ್ ಕೈಗಾರಿಕಾ ಪ್ರದೇಶ: ಇಡೀ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ನೆಲಮಂಗಲ ತಾಲೂಕಿನ ಸೋಂಪುರ (ದಾಬಸ್‌ಪೇಟೆ) ವಲಯ, ಸುಮಾರು ಐದು ಸಾವಿರ ಎಕರೆಗೂ ಅಧಿಕ ವಿಸ್ತೀರ್ಣದಿಂದ ಐದು ಬೃಹತ್ ವಲಯಗಳಲ್ಲಿ ಚಾಚಿಕೊಂಡಿದೆ.

ಕೈಗಾರಿಕೆಗಳು ಸ್ಥಾಪನೆಯಾಗಿರುವ 1 ರಿಂದ 3ನೇ ವಲಯದವರೆಗೆ ಸರ್ಕಾರಿ ಮಾಹಿತಿಯಂತೆ, ಕೆಐಎಡಿಬಿ ಪ್ರಕಾರ 3870 ಎಕರೆ ಬೃಹತ್ ವಿಸ್ತೀರ್ಣದಿಂದ ಸರಿ ಸುಮಾರು ೫೦೦ ಬೃಹತ್ ಮತ್ತು ಸಣ್ಣ ಕಾರ್ಖಾನೆಗಳಿವೆ. ಇಷ್ಟೆಲ್ಲಾ ಕಾರ್ಖಾನೆಗಳಿದ್ದರೂ ಮೂಲಭೂತ ಸೌಲಭ್ಯದ ಜೊತೆಗೆ ಅಗ್ನಿ ಅವಘಡಗಳು ಸಂಭವಿಸಿದಾಗ ಶೀಘ್ರವಾಗಿ ಸ್ಪಂದಿಸಲು ಅಗ್ನಿಶಾಮಕ ಠಾಣೆ ಅತ್ಯವಶ್ಯಕವಾಗಿದ್ದರೂ ಇದುವರೆಗೆ ಕೆಐಎಡಿಬಿ ನಿರ್ಮಾಣವಾಗಿ ಎರಡು ದಶಕಗಳು ಸಮೀಪಿಸುತ್ತಿದ್ದರೂ ಅಗ್ನಿಶಾಮಕ ಠಾಣೆಯಾಗಿಲ್ಲ ಎಂಬುದೇ ಬೇಸರದ ಸಂಗತಿ.

ಬೆಂಕಿ ಅವಘಡಗಳಿಗೇನು ಕಡಿಮೆಯಿಲ್ಲ:

ಕಳೆದ ಕೆಲ ವರ್ಷಗಳ ಹಿಂದೆ ಕೈಗಾರಿಕಾ ಪ್ರದೇಶದ ಸಿದ್ಧಾರ್ಥ ಹೊಂ ಅಪ್ಲೈಯನ್ಸಸ್ ಕಾರ್ಖಾನೆ ಬೆಂಕಿಗೆ ಆಹುತಿಯಾಯಿತು, ಕೊಟ್ಯಾಂತರ ರು. ಕಂಪನಿಗೆ ನಷ್ಟವಾಯಿತು. ಇತ್ತ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 48 ರ 1 ಮತ್ತು 2 ನೇ ಹಂತದ ಕೈಗಾರಿಕಾ ವಲಯದಲ್ಲಿರುವ ಲಿಯೋನೆಡ್ ಕೆಮಿಕಲ್ಸ್ ಕಾರ್ಖಾನೆಗೆ ಬೆಂಕಿ ತಗುಲಿ ಕಂಪನಿಯಲ್ಲಿದ್ದ ಕೆಮಿಕಲ್ಸ್ ನ ಡ್ರಮ್ ಗಳು ಹೊತ್ತಿ ಉರಿದವು.ಇಂತಹ ಅವಘಡಗಳು ಆಗಾಗ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕೈಗಾರಿಕಾ ಪ್ರದೇಶಕ್ಕೆ ಬೇಕು ಅಗ್ನಿಶಾಮಕ ಠಾಣೆ:

ಇಂತಹ ಹಲವು ಬೆಂಕಿ ಅವಘಡಗಳು ಕಣ್ಮುಂದಿರುವ ನಿದರ್ಶನವಾಗಿರುವುದರಿಂದ ಅಗ್ನಿಶಾಮಕ ಠಾಣೆ ಕೈಗಾರಿಕಾ ವಲಯಕ್ಕೆ ಅತ್ಯವಶ್ಯಕವಾಗಿದೆ, ಬೆಂಕಿ ಅವಘಡಗಳು ಸಂಭವಿಸಿದಾಗ ನೆಲಮಂಗಲ, ತುಮಕೂರು, ಪೀಣ್ಯಾ ಭಾಗದಿಂದ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಆಗಮಿಸಬೇಕು, ಇಲ್ಲಿಂದ ವಾಹನ ಆಗಮಿಸಲು ಕನಿಷ್ಠ 1 ತಾಸು ಬೇಕು, ಕೈಗಾರಿಕಾ ವಲಯದಲ್ಲಿಯೇ ಅಗ್ನಿ ಶಾಮಕ ಠಾಣೆಯಾದರೆ, ಅವಘಡವಾದ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯಿಸಬಹುದು.

ಕೈಗಾರಿಕಾ ವಲಯದಲ್ಲಿ ಹೆಸರಾಂತ ಬೃಹತ್ ಕಾರ್ಖಾನೆಗಳಾದ ಜಿಂದಾಲ್, ಮಾರುತಿ ಸುಜುಕಿ, ಕರ್ಲಾನ್, ಟಿ.ಡಿ.ಪಿ.ಎಸ್, ಟಿ.ಆರ್.ಎಂ.ಎನ್, ಕೆ.ಪಿ. ಎಲೆಕ್ಟ್ರಾನಿಕ್ಸ್, ಕಲ್ಪತರು ಬ್ರಿವರೀಸ್ ಅಂಡ್ ಡಿಸ್ಟಲರೀಸ್, ರಾಮ್ಕೀ ತ್ಯಾಜ್ಯ ವಿಲೇವಾರಿ ಘಟಕ ಹೀಗೆ ಹತ್ತು ಹಲವು ಕಾರ್ಖಾನೆಗಳಿದ್ದು, ಎಲ್ಲರಿಗೂ ಅಗ್ನಿ ಶಾಮಕ ಠಾಣೆಯ ಅವಶ್ಯಕತೆ ಇದೆ.

‘ಏಕಗವಾಕ್ಷಿ ಪ್ರಕ್ರಿಯೆಯಡಿ ಅಗ್ನಿಶಾಮಕ ಠಾಣೆ ನಿರ್ಮಾಣದ ಬಗ್ಗೆ ಎಲ್ಲಾ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ಸಹ ಆಗಿದೆ. ಯಾವುದೇ ಅವಘಡ ಸಂಭವಿಸುವ ಮುನ್ನ ವೇಗವಾಗಿ ಅಗ್ನಿಶಾಮಕ ಠಾಣೆ ನಿರ್ಮಿಸುವುದು ನಮ್ಮೆಲ್ಲರ ಗುರಿಯಾಗಿದೆ, ಕೂಡಲೇ ಅಗ್ನಿಶಾಮಕ ಠಾಣೆ ನಿರ್ಮಾಣವಾಗಬೇಕೆಂಬುದು ನಮ್ಮ ಆಗ್ರಹವಾಗಿದೆ.’

--ಕಂಠಪ್ಪ, ಅಧ್ಯಕ್ಷ, ಸೋಂಪುರ ಕೈಗಾರಿಕಾ ಸಂಘ.

‘ಇತ್ತೀಚೆಗೆ ಜಿಲ್ಲಾಧಿಕಾರಿ ಒಳಗೊಂಡಂತೆ, ಸೋಂಪುರ ಕೈಗಾರಿಕಾ ಪ್ರದೇಶದ ಎಲ್ಲಾ ಕಾರ್ಖಾನೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದೇನೆ, ಗೃಹ ಇಲಾಖೆ ಅನುಮತಿ ನಂತರ, ಅಗ್ನಿ ಶಾಮಕ ಠಾಣೆ ನಿರ್ಮಾಣವಾಗಲಿದೆ.’

-ಎನ್.ಶ್ರೀನಿವಾಸ್, ಶಾಸಕರು