ಆಲೆಮನೆ, ಒಂಟಿಮನೆಯಿಂದ, ಆರೋಗ್ಯ ಇಲಾಖೆ ವಸತಿಗೃಹಕ್ಕೆ...!

| Published : May 07 2024, 01:08 AM IST

ಆಲೆಮನೆ, ಒಂಟಿಮನೆಯಿಂದ, ಆರೋಗ್ಯ ಇಲಾಖೆ ವಸತಿಗೃಹಕ್ಕೆ...!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ತಾಲೂಕಿನ ಹಾಡ್ಯ ಸಮೀಪದ ಆಲೆ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣ ಬೆಳಕಿಗೆ ಬಂದಿತು. ಅದನ್ನು ಸಿಐಡಿ ತನಿಖಾ ಸಂಸ್ಥೆಗೆ ಒಪ್ಪಿಸಲಾಯಿತೇ ವಿನಃ ಆ ಪ್ರಕರಣ ಸದ್ಯ ಯಾವ ಹಂತದಲ್ಲಿದೆ, ಎಷ್ಟು ಜನರನ್ನು ಬಂಧಿಸಲಾಯಿತು. ಎಷ್ಟು ಜನರಿಗೆ ಶಿಕ್ಷೆಯಾಯಿತು. ತನಿಖೆಯಿಂದ ಕಂಡುಕೊಂಡ ಮಹತ್ವದ ಸಂಗತಿಗಳೇನು. ಪ್ರಕರಣ ಮುಕ್ತಾಯಗೊಂಡಿತೋ, ಇಲ್ಲವೋ ಎನ್ನುವುದು ಯಾರಿಗೂ ಗೊತ್ತೇ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಇದುವರೆಗೆ ಆಲೆಮನೆ, ಒಂಟಿ ಮನೆ ಸೇರಿದಂತೆ ಹಲವು ನಿಗೂಢ ಸ್ಥಳಗಳಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆಕೃತ್ಯ ಇದೀಗ ಆರೋಗ್ಯ ಇಲಾಖೆ ನೆರಳಿನಲ್ಲೇ ನಡೆಯುತ್ತಿರುವುದು ದೀಪದ ಕೆಳಗೆ ಕತ್ತಲು ಎಂಬಂತಾಗಿದೆ. ಜೊತೆಗೆ ಹೆಣ್ಣು ಭ್ರೂಣ ಹತ್ಯೆ ತಡೆ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿಯೂ ಪರಿಣಮಿಸಿದೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದ ಕೆಲವು ದಿನಗಳವರೆಗೆ ಗಂಭೀರತೆ ಪಡೆದುಕೊಂಡಿರು. ಅದು ತನಿಖಾ ಸಂಸ್ಥೆಗಳಿಗೆ ಒಪ್ಪಿಸಿದ ಬಳಿಕ ಪ್ರಕರಣಗಳು ಏನಾಗುತ್ತವೆ ಎನ್ನುವುದು ಯಾರ ಅರಿವಿಗೂ ಬರುವುದೇ ಇಲ್ಲ. ದಿನಗಳೆದಂತೆ ಜನಮಾನಸದಿಂದ ಅವು ಮರೆಯಾಗಿ ಬಿಡುತ್ತವೆ.

ಮಂಡ್ಯ ತಾಲೂಕಿನ ಹಾಡ್ಯ ಸಮೀಪದ ಆಲೆ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣ ಬೆಳಕಿಗೆ ಬಂದಿತು. ಅದನ್ನು ಸಿಐಡಿ ತನಿಖಾ ಸಂಸ್ಥೆಗೆ ಒಪ್ಪಿಸಲಾಯಿತೇ ವಿನಃ ಆ ಪ್ರಕರಣ ಸದ್ಯ ಯಾವ ಹಂತದಲ್ಲಿದೆ, ಎಷ್ಟು ಜನರನ್ನು ಬಂಧಿಸಲಾಯಿತು. ಎಷ್ಟು ಜನರಿಗೆ ಶಿಕ್ಷೆಯಾಯಿತು. ತನಿಖೆಯಿಂದ ಕಂಡುಕೊಂಡ ಮಹತ್ವದ ಸಂಗತಿಗಳೇನು. ಪ್ರಕರಣ ಮುಕ್ತಾಯಗೊಂಡಿತೋ, ಇಲ್ಲವೋ ಎನ್ನುವುದು ಯಾರಿಗೂ ಗೊತ್ತೇ ಇಲ್ಲ.

ಪ್ರಕರಣಗಳ ತನಿಖೆ ಕುರಿತಂತೆ ತನಿಖಾ ಸಂಸ್ಥೆಗಳು ತೋರುತ್ತಿರುವ ವಿಳಂಬದಿಂದಾಗಿ ಅಂದು ಆಲೆಮನೆಯಲ್ಲಿ ಕಾಣಿಸಿಕೊಂಡು ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಇಂದು ಆರೋಗ್ಯ ಇಲಾಖೆ ವಸತಿಗೃಹದಲ್ಲೇ ನಡೆಯುತ್ತಿರುವುದು ದಂಧೆ ಕೋರರಿಗೆ ಕಾನೂನಿನ ಬಗ್ಗೆ ಭಯವೇ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ತನಿಖಾ ಸಂಸ್ಥೆಗಳು ಗಂಭೀರವಾಗಿ ತೆಗೆದುಕೊಳ್ಳದಿರುವುದೇ ಸಮಾಜದಲ್ಲಿ ಇಂತಹ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುವುದಕ್ಕೆ ಪ್ರಮುಖ ಕಾರಣ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ರಾಜಕೀಯ ಪ್ರಭಾವಕ್ಕೋ, ಪಟ್ಟಭದ್ರರ ಒತ್ತಡಕ್ಕೆ ಮಣಿದು ಪ್ರಕರಣಗಳನ್ನು ಮುಚ್ಚಿ ಹಾಕುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು. ಈ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಿರುವ ಬಗ್ಗೆ ನಿದರ್ಶನಗಳು ಇಲ್ಲದಿರುವುದು, ದಂಧೆಕೋರರಿಗೆ ಒತ್ತಾಸೆಯಾಗಿ ನಿಂತವರ ವಿರುದ್ಧವೂ ಕ್ರಮ ಜರುಗಿಸಲಾಗದಷ್ಟು ದೌರ್ಬಲ್ಯವನ್ನು ತನಿಖಾ ಸಂಸ್ಥೆಗಳು ಪ್ರದರ್ಶಿಸುತ್ತಿರುವುದರಿಂದ ದಂಧೆಕೋರರಿಗೆ ಕಾನೂನಿನ ಯಾವ ಭಯವೂ ಇದ್ದಂತೆ ಕಾಣುತ್ತಿಲ್ಲ ಎನ್ನುವುದು ಜನಮಾನಸದಲ್ಲಿ ಮೂಡಿರುವ ಅಭಿಪ್ರಾಯವಾಗಿದೆ.

ಮಂಡ್ಯ ಜಿಲ್ಲೆಯಲ್ಲೇ ಸಾಕಷ್ಟು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ಯಾರಿಗೆ ಶಿಕ್ಷೆಯಾಗಿದೆ ಎನ್ನುವುದನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ. ಹಾಗಾಗಿ ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವ ಬದ್ಧತೆ ತನಿಖಾ ಸಂಸ್ಥೆಗಳಿಗೆ ಇದ್ದಂತೆ ಕಂಡುಬರುತ್ತಿಲ್ಲ. ಹಾಗಾಗಿ ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ಮುಂದುವರಿದೇ ಇದೆ.

ಆರೋಗ್ಯ ಇಲಾಖೆಯವರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ನೋಡಿದಾಗ ಸ್ಥಳೀಯ ವೈದ್ಯರು, ಅಧಿಕಾರಿಗಳು ಕುಮ್ಮಕ್ಕಿನಲ್ಲೇ ಹೆಣ್ಣು ಭ್ರೂಣ ಹತ್ಯೆ ಜಾಲ ವ್ಯವಸ್ಥಿತವಾಗಿ ನಡೆಯುತ್ತಿರುವ ಬಗ್ಗೆ ಅನುಮಾನಗಳು ಮೂಡಿವೆ.ದೊಡ್ಡ ಮಟ್ಟದ ಜಾಲವಿರುವ ಶಂಕೆ: ಡಾ.ಕುಮಾರ

ಕನ್ನಡಪ್ರಭ ವಾರ್ತೆ ಮಂಡ್ಯ

ಹೆಣ್ಣು ಭ್ರೂಣ ಹತ್ಯೆ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗುತ್ತಿದ್ದು, ತನಿಖೆಯಿಂದ ಕೂಲಂಕಷವಾಗಿ ಎಲ್ಲವೂ ಹೊರಬರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಆರೋಗ್ಯ ಇಲಾಖೆ ವಸತಿ ಗೃಹದಲ್ಲೇ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿರುವುದು ವಿಷಾದನೀಯ. ಮನೆಯನ್ನು ಸೀಜ್ ಮಾಡಿ ಎಲ್ಲ ಪರಿಕರಗಳನ್ನು ವಶಕ್ಕೆ ಪಡೆದು, ನಾಲ್ವರನ್ನು ಬಂಧಿಸಲಾಗಿದೆ.

ಅಬಾರ್ಷನ್‌ಗಾಗಿ ಮೈಸೂರಿನಿಂದ ಬಂದ ಗರ್ಭಿಣಿಯನ್ನ ಮಾತನಾಡಿಸಿದ್ದೇವೆ. ಅವರು ಕೊಟ್ಟ ಹೇಳಿಕೆ ಮೇಲೆ ವಿಚಾರಣೆ ನಡೆಯುತ್ತಿದೆ ಎಂದರು.

ಸ್ಕ್ಯಾನಿಂಗ್ ಮಾಡಿಸಿದ ಜಾಗ, ಫೋನ್ ನಂಬರ್ ಕೊಟ್ಟವರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಆ ವಿಚಾರವಾಗಿ ಕೂಲಂಕುಷವಾಗಿ ತನಿಖೆ ನಡೆಯುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಭ್ರೂಣ ತೆಗಿಸಲು ಬಂದಿದ್ದ ಮೈಸೂರಿನ ಸಾಲುಂಡಿ ಗ್ರಾಮದ ಮಹಿಳೆಗೆ ಅನ್‌ವಾಂಟೆಡ್‌ನ ಐದು ಮಾತ್ರೆ ಕೊಟ್ಟಿದ್ದಾರೆ. ಬಳಿಕ ನೋವು ಬಂದಾಗ ಬರುವಂತೆ ಲಾಡ್ಜ್ ವೊಂದಕ್ಕೆ ಕಳುಹಿಸಿದ್ದಾರೆ. ಅದಕ್ಕೂ ಮುನ್ನ ಹದಿನೈದು ದಿನಗಳ ಹಿಂದೆ ಬೇರೆಡೆ ಸ್ಕ್ಯಾನಿಂಗ್ ನಡೆಸಿ ಹೆಣ್ಣು ಭ್ರೂಣ ಇದೆ ಎಂದು ಹೇಳಿದ್ದರಿಂದ ಭ್ರೂಣ ಹತ್ಯೆ ಮಾಡಿಸಲು ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.