ಗಂಡಬೊಮ್ಮನಹಳ್ಳಿ ಗ್ರಾಪಂಗಿಲ್ಲ ಮತಗಟ್ಟೆ

| Published : May 07 2024, 01:01 AM IST / Updated: May 07 2024, 01:02 AM IST

ಸಾರಾಂಶ

ಈ ಗ್ರಾಮಕ್ಕೆ ಈ ವರೆಗೆ ಸರ್ಕಾರಿ ಅಧಿಕಾರಿಗಳ ವಾಹನ ಬಿಟ್ಟರೆ ಸರ್ಕಾರಿ, ಖಾಸಗಿ ಬಸ್ ಬರುವುದಿಲ್ಲ. ಗಂಡಬೊಮ್ಮನಹಳ್ಳಿ ಚಿಕ್ಕ ಗ್ರಾಮವಾದರೂ ಗ್ರಾಪಂ ಕೇಂದ್ರಸ್ಥಾನವಾಗಿರುವುದು ವಿಶೇಷ.

ಕೂಡ್ಲಿಗಿ: ತಾಲೂಕಿನ ಗಂಡಬೊಮ್ಮನಹಳ್ಳಿ ಕಂದಾಯ ಗ್ರಾಮವಾಗಿದ್ದರೂ ಇಲ್ಲಿ ಮತಗಟ್ಟೆ ಕೇಂದ್ರ ಸ್ಥಾಪನೆಯಾಗಿಲ್ಲ!

ಈ ಗ್ರಾಮಕ್ಕೆ ಈ ವರೆಗೆ ಸರ್ಕಾರಿ ಅಧಿಕಾರಿಗಳ ವಾಹನ ಬಿಟ್ಟರೆ ಸರ್ಕಾರಿ, ಖಾಸಗಿ ಬಸ್ ಬರುವುದಿಲ್ಲ. ಗಂಡಬೊಮ್ಮನಹಳ್ಳಿ ಚಿಕ್ಕ ಗ್ರಾಮವಾದರೂ ಗ್ರಾಪಂ ಕೇಂದ್ರಸ್ಥಾನವಾಗಿರುವುದು ವಿಶೇಷ.

ಈ ಗ್ರಾಮದಲ್ಲಿ ಮತಗಟ್ಟೆ ಆರಂಭಕ್ಕೆ ಅಗತ್ಯ ಮತದಾರರ ಸಂಖ್ಯೆ ಕೊರತೆ ಇರುವ ಕಾರಣ ಇಲ್ಲಿ ಮತಗಟ್ಟೆ ಇಲ್ಲ. 60 ಕುಟುಂಬಗಳಿದ್ದು, 353 ಜನಸಂಖ್ಯೆ ಇದೆ. ಈ ಪೈಕಿ 255 ಮತದಾರರು ಇದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ಇಲ್ಲಿ ವಾಸಿಸುತ್ತಿದ್ದಾರೆ.

ಮತದಾರರ ಸಂಖ್ಯೆ ಕೊರತೆಯಿಂದಾಗಿ ಗ್ರಾಪಂ, ತಾಪಂ, ಜಿಪಂ, ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಮತಕೇಂದ್ರವಿಲ್ಲ. ಪ್ರತಿ ಚುನಾವಣೆಯಲ್ಲಿ ಹತ್ತಿರದ ದಿಬ್ಬದಹಳ್ಳಿ ಮತಕೇಂದ್ರಕ್ಕೆ ನಡೆದುಕೊಂಡು ಹೋಗಿ ಮತದಾನ ಮಾಡಬೇಕು.

ಸಖಿ ಮತಕೇಂದ್ರ:

ಗಂಡಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿ ಏಕ್ಕೆಗೊಂದಿಯಲ್ಲಿ ಸಖಿ ಮತಕೇಂದ್ರ ಸ್ಥಾಪಿಸಲಾಗಿದೆ. ನುಂಕನಹಳ್ಳಿ ಗ್ರಾಮಸ್ಥರು ಕಳೆದ ಚುನಾವಣೆ ವೇಳೆ ನಮ್ಮೂರಲ್ಲಿ ಮತಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದರು. ಇಲ್ಲವಾದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದರು. ಪರಿಣಾಮ ಇದೇ ಮೊದಲ ಬಾರಿಗೆ ನುಂಕನಹಳ್ಳಿಯಲ್ಲಿ ಮತಕೇಂದ್ರ ಸ್ಥಾಪಿಸಲಾಗಿದೆ.

ಗಂಡಬೊಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಪಂ ಕೇಂದ್ರವಾದರೂ ಅಗತ್ಯ ಮತದಾರರು ಇಲ್ಲದ ಕಾರಣ ಮತಕೇಂದ್ರವಿಲ್ಲ. ಇದೇ ಗ್ರಾಪಂ ವ್ಯಾಪ್ತಿಯ ನುಂಕನಹಳ್ಳಿ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಮತಗಟ್ಟೆ ಪ್ರಾರಂಭಿಸಲಾಗಿದೆ. ಇದೇ ಗ್ರಾಪಂ ವ್ಯಾಪ್ತಿಯ ಎಕ್ಕೆಗೊಂದಿ ಗ್ರಾಮದಲ್ಲಿ ಮಹಿಳಾ ಮತದಾರರು ಹೆಚ್ಚು ಇರುವ ಕಾರಣ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ ಎನ್ನುತ್ತಾರೆ ಗುಡೇಕೋಟೆ ಕಂದಾಯ ನಿರೀಕ್ಷಕ ಚೌಡಪ್ಪ.