ವರದಕ್ಷಿಣೆಗಾಗಿ ಮದುವೆಯನ್ನು ನಿಲ್ಲಿಸಿದ ತುಮಕೂರಿನ ವರ!

| Published : May 07 2024, 01:02 AM IST

ಸಾರಾಂಶ

ನನಗೆ ಅನ್ಯಾಯವಾಗಿದೆ ನ್ಯಾಯ ದೊರಕಿಸಿಕೊಡಿ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಪೊಲೀಸ್‌ ನಿರೀಕ್ಷಿಕರಿಗೆ ಪ್ರಕರಣ ದಾಖಲಿಸಲು ಸೂಚಿಸುತ್ತೇನೆ ಎಂದು ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಮುರಳಿಧರ್‌ ಶಾಂತಳ್ಳಿ

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಮದುವೆ ಮನೆಯಲ್ಲಿ ಶನಿವಾರ ವರನ ಕಡೆಯವರಿಗೆ ಸ್ವೀಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಮದುವೆಯೇ ನಿಂತು ಹೋದ ಪ್ರಕರಣ ತಿರುವು ಪಡೆದುಕೊಂಡಿದ್ದು, ವಧುವಿನ ತಂದೆ ಮಾಜಿ ಸೈನಿಕ ಮಂಜುನಾಥ್‌ ಅವರು ವರದಕ್ಷಿಣೆಗಾಗಿ ಮದುವೆಯನ್ನು ರದ್ದುಪಡಿಸಿ ವರನ ಕಡೆಯವರು ತೆರಳಿದ್ದಾರೆ. ನನಗೆ ಅನ್ಯಾಯವಾಗಿದೆ ನ್ಯಾಯ ದೊರಕಿಸಿಕೊಡಿ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೋಮವಾರ ದೂರು ನೀಡಿದ್ದಾರೆ.

ದೂರನ್ನು ಸ್ವೀಕರಿಸಿರುವ ಪೊಲೀಸ್‌ ವರಿಷ್ಠಾಧಿಕಾರಿಗಳು, ಸೋಮವಾರಪೇಟೆ ಪೊಲೀಸ್‌ ನಿರೀಕ್ಷಕರಿಗೆ ಪ್ರಕರಣ ದಾಖಲಿಸಲು ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಮೇ 4 ಮತ್ತು 5ರಂದು ರಂದು ಪಟ್ಟಣದ ಕಲ್ಯಾಣಮಂಟಪವೊಂದರಲ್ಲಿ ತುಮಕೂರಿನ ವರನೊಂದಿಗೆ ಸೋಮವಾರಪೇಟೆಯ ಮಾಜಿ ಸೈನಿಕ ಮಂಜುನಾಥ್‌ ಅವರ ಪುತ್ರಿಯ ವಿವಾಹ ಮಹೋತ್ಸವ ಏರ್ಪಡಿಸಲಾಗಿತ್ತು. ಶನಿವಾರದಂದು ಸುಮಾರು ಸಾವಿರ ಆಹ್ವಾನಿತರಿಗೆ ಅದ್ದೂರಿಯ ಉಟೋಪಚಾರವನ್ನು ಏರ್ಪಡಿಸಲಾಗಿತ್ತು. ಆದರೆ ವರನ ಕಡೆಯವರು ಮಾಂಸಾಹಾರ ತಿನ್ನುವುದಿಲ್ಲ, ನಮಗೆ ಒಂದು ಸ್ವೀಟ್‌ ಮಾಡಿಸಲು ನಿಮಗೆ ಯೋಗ್ಯತೆಯಿಲ್ಲವೇ? ಎಂದು ಖ್ಯಾತೆ ತೆಗೆದು ಜಗಳ ಆರಂಭಿಸಿದ್ದಾರೆ. ಇದು ತಾರಕಕ್ಕೇರ್ಪಟ್ಟು ಭಾನುವಾರದಂದು ಮದುವೆಯೇ ರದ್ದುಗೊಳಿಸಬೇಕಾದ ಘಟನೆ ನಡೆದಿದೆ.

ಆದರೆ ಪ್ರಕರಣ ವರನ ಕಡೆಯವರು ಚಿನ್ನ ಮತ್ತು 10 ಲಕ್ಷ ರು. ಬೆಂಗಳೂರಿನಲ್ಲಿ ಸೈಟ್‌ ತೆಗೆದುಕೊಡಬೇಕೆಂದು ಬೇಡಿಕೆಯಿಟ್ಟಿದ್ದರು. ಆದರೆ ಕೊಟ್ಟಿರುವ ಚಿನ್ನದಲ್ಲಿ 40 ಗ್ರಾಂ ಕಡಿಮೆಯಿದೆ ಹಾಗೂ ಸೈಟ್‌ ತೆಗೆದುಕೊಟ್ಟಿಲ್ಲ ಎಂಬ ಕಾರಣಕ್ಕೆ ಊಟದ ನೆಪ ತೆಗೆದು ಜಗಳ ಆರಂಭಿಸಿ ಆರಮಾವಾಗಿ ತುಮಕೂರಿಗೆ ತೆರಳಿದ್ದಾರೆ. ಇತ್ತ ವಧುವಿನ ಕಡೆಯವರು ಸುಮಾರು 18 ಲಕ್ಷ ರು. ವೆಚ್ಚ ಮಾಡಿ ಮದುವೆ ನಿಂತಿದ್ದರಿಂದ ದುಃಖದಲ್ಲಿ ಮುಳುಗಿದ್ದಾರೆ ಎಂದು ವಧುವಿನ ಬಂಧುಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಜಿ ಸೈನಿಕನಿಗೆ ಪೊಲೀಸರು ನ್ಯಾಯ ದೊರಕಿಸಿಕೊಡಲಿಲ್ಲ!: ದೇಶ ಸೇವೆ ಮಾಡಿ ಗಡಿಯಲ್ಲಿ ನಿತ್ಯ ದೇಶವನ್ನು ಕಾಯುವ ಕಾಯಕ ಮಾಡಿದ ನನಗೆ ತುಮಕೂರಿನ ಪ್ರಭಾವಿ ನಾಯಕರೊಬ್ಬರಿಂದ ಕರೆ ಮಾಡಿಸಿದ್ದಾರೆ ಎಂದು ಗುಮಾನಿ ವ್ಯಕ್ತಪಡಿಸಿದ ಮಂಜುನಾಥ್‌, ಕರೆ ಬಂದ ನಂತರ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ನ್ಯಾಯ ದೊರಕಿಸಿಕೊಡಲಿಲ್ಲ. ಕನಿಷ್ಠ ದೂರನ್ನು ಕೂಡ ಸ್ವೀಕರಿಸದೆ, ಮೋಸ ಮಾಡಿದ ವರನ ಕಡೆಯವರನ್ನು ರಾಜ ಮರ್ಯಾದೆಯಿಂದ ರಕ್ಷಣೆ ನೀಡಿ ಕಳುಹಿಸಿಕೊಟ್ಟರು ಎಂದು ವಧುವಿನ ತಂದೆ ಮಂಜುನಾಥ್‌ ಬೇಸರ ವ್ಯಕ್ತಪಡಿಸುತ್ತಾರೆ. ಹೀಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನ್ಯಾಯ ಕೇಳಿ ದೂರು ನೀಡಿದ್ದೇನೆ. ಕಾದು ನೋಡಬೇಕು ಎಂದು ಹೇಳುತ್ತಾರೆ. ಅಲ್ಲದೇ ಪ್ರಕರಣದ ಕುರಿತು ರಾಜ್ಯ ಮಹಿಳಾ ಆಯೋಗಕ್ಕೂ ಕೂಡ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಂಗಳವಾರ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ನಿರೀಕ್ಷಕರಿಗೆ ದೂರು ನೀಡುತ್ತೇನೆ. ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತೇನೆ ಎಂದು ಮಂಜುನಾಥ್‌ ಸ್ಪಷ್ಟಪಡಿಸಿದ್ದು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ಮುಂದುವರೆಸುತ್ತೇನೆ ಎಂದು ಮಾಜಿ ಸೈನಿಕ ಮಂಜುನಾಥ್‌ ಹೇಳಿದರು.

ನೊಂದ ವಧುವಿಗೆ ಅನ್ಯಾಯವಾಗಿದೆ. ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ಮಹಿಳಾ ಆಯೋಗ ಮತ್ತು ಕೇಂದ್ರ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಕೂಡಲೇ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತೇವೆ. ಕ್ಷುಲ್ಲಕ ಕಾರಣಕ್ಕೆ ಒಂದು ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಈ ಪ್ರಕರಣವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗು ಸೋಮವಾರಪೇಟೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ನೊಂದ ವಧುವಿಗೆ ಮತ್ತು ಆಕೆಯ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಲಿ ಎಂದು ಕೊಡಗು ಜಿಲ್ಲೆ ಮಹಿಳಾ ಆಯೋಗದ ಜಿಲ್ಲಾ ಪ್ರತಿನಿಧಿ ಹಾಗೂ ಕೌಟುಂಬಿಕ ಸಲಹೆಗಾರರಾದ ಅಶ್ವಿನಿ ಕೃಷ್ಣಕಾಂತ್‌ ಹೇಳಿದರು.