ಹೇಮರಡ್ಡಿ ಮಲ್ಲಮ್ಮ, ಮಾನವೀಯ ಮೌಲ್ಯಗಳನ್ನು ಬೆಳಗಿಸಿದ ಮಾತೆ

| Published : May 07 2024, 01:04 AM IST

ಹೇಮರಡ್ಡಿ ಮಲ್ಲಮ್ಮ, ಮಾನವೀಯ ಮೌಲ್ಯಗಳನ್ನು ಬೆಳಗಿಸಿದ ಮಾತೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಗುರು, ಲಿಂಗ, ಜಂಗಮರಲ್ಲಿ ಅನನ್ಯ ಭಕ್ತಿ ಹೊಂದಿದ್ದ ನಿಜ ಶರಣೆ ಹೇಮರಡ್ಡಿ ಮಲ್ಲಮ್ಮ, ಮಾನವೀಯ ಮೌಲ್ಯಗಳನ್ನು ಬೆಳಗಿಸಿದ ಮಾತೆ ಎಂದು ಎಡೆಯೂರು ಕ್ಷೇತ್ರದ ಷ.ಬ್ರ.ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ನುಡಿದರು

ಹೇಮರಡ್ಡಿ ಮಲ್ಲಮ್ಮ ನೂತನ ವಿಗ್ರಹ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗುರು, ಲಿಂಗ, ಜಂಗಮರಲ್ಲಿ ಅನನ್ಯ ಭಕ್ತಿ ಹೊಂದಿದ್ದ ನಿಜ ಶರಣೆ ಹೇಮರಡ್ಡಿ ಮಲ್ಲಮ್ಮ, ಮಾನವೀಯ ಮೌಲ್ಯಗಳನ್ನು ಬೆಳಗಿಸಿದ ಮಾತೆ ಎಂದು ಎಡೆಯೂರು ಕ್ಷೇತ್ರದ ಷ.ಬ್ರ.ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ನುಡಿದರು.ಬಡಗನಾಡು ಶ್ರೀ ಹೇಮರಡ್ಡಿ ವೀರಶೈವ ಜನಾಂಗ ಸಂಘ ಗಿರಿಯಾಪುರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದೇವಾಲಯದಲ್ಲಿ ನೂತನ ವಿಗ್ರಹ ಪುನರ್‌ ಪ್ರತಿಷ್ಠಾಪಿಸಿದ ಹಿನ್ನಲೆಯಲ್ಲಿ ಮಲ್ಲಿಕಾಂಬ ಸಮುದಾಯಭವನದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.12ನೇ ಶತಮಾನದ ನಿಜ ಶರಣೆ ಹೇಮರಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡ ಧೀಮಂತೆ. ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಬಲವಾಗಿ ನಂಬಿ ಅದರಂತೆ ನಡೆದವಳು. ದುಶ್ಚಟಗಳ ದಾಸನಾಗಿದ್ದ ಮೈದುನ ವೇಮನನ್ನು ಪರಿವರ್ತಿಸಿದ ಸಾಧ್ವಿಮಣಿ. ಮನುಕುಲದ ಆದರ್ಶವನ್ನು ಬದುಕಿನಲ್ಲಿ ಸಾರಿದಾಕೆ ಎಂದರು.ಮಲ್ಲಮ್ಮನ ಮಾನವೀಯ ಮೌಲ್ಯಗಳ ಪ್ರತಿಪಾದನೆ ಆದರ್ಶ ಸಮಾಜಕ್ಕೆ ದಾರಿದೀಪ. ಶ್ರೇಷ್ಠ ವಚನಗಾರ್ತಿಯಾಗಿ ಅಕ್ಕಮಹಾದೇವಿ ಕಾಲಘಟ್ಟದಲ್ಲಿ ಸಮಾಜ ಪರಿವರ್ತನೆಗೆ ಶ್ರಮಿಸಿದಾಕೆ. ಮಲ್ಲಮ್ಮನ ಹಾದಿಯಲ್ಲಿ ಮುನ್ನಡೆಯುವುದು ರಡ್ಡಿ ಜನಾಂಗದ ಆಶಯ. ಬರೀ ಜಾತ್ರೆ-ಜಯಂತಿ ಮಾಡಿದರಷ್ಟೇ ಸಾಲದು, ಆಕೆ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕೆಂದ ಶ್ರೀರೇಣುಕ ಶಿವಾಚಾರ್ಯರು, ಶತಮಾನಗಳಿಂದ ಮಲ್ಲಮ್ಮನನ್ನು ಗಿರಿಯಾಪುರದಲ್ಲಿ ಪೂಜಿಸಿಕೊಂಡು ಬರುತ್ತಿರುವುದು ಮಾದರಿ ಸಂಗತಿ ಎಂದರು.ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು, ಗೋಣಿಬೀಡು ಶೀಲಸಂಪಾದನಾ ಮಠದ ಡಾ.ಸಿದ್ದಲಿಂಗ ಸ್ವಾಮಿ ಗಳು ಮತ್ತು ಕೆ.ಬಿದರೆ ದೊಡ್ಡಮಠದ ಶ್ರೀಪ್ರಭುಕುಮಾರ ಶಿವಾಚಾರ್ಯರ ಸಮ್ಮುಖದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪನೆ ಬೆಳಗಿನ ಜಾವ ನೆರವೇರಿತು. ಗಿರಿಯಾಪುರ ಶ್ರೀ ವೃಷಬೇಂದ್ರ ಗ್ರಾಮ ಸಮಿತಿ ಅಧ್ಯಕ್ಷ ಪ್ರಭುಕುಮಾರ, ಊರಿನ ಪುರೋಹಿತರಾದ ವೇ.ಮೂ. ಲಿಂಗಮೂರ್ತಿ ಮತ್ತು ವೇ.ಮೂ.ಜಯಮೂರ್ತಿ ಮುಖ್ಯಅತಿಥಿಗಳಾಗಿದ್ದರು. ನೂತನ ವಿಗ್ರಹ ದಾನಿ ಕಾಂತರಾಜು ಕುಟುಂಬದವರನ್ನು ಗೌರವಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಘದ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ಮಾತನಾಡಿ, ಮುದ್ದೇಬಿಹಾಳ ತಾಲ್ಲೂಕು ತಾಳಿಕೋಟೆ-ಶ್ರೀಶೈಲದ ಕಡೆಯಿಂದ ಜಿಲ್ಲೆಗೆ ರಡ್ಡಿ ಜನಾಂಗ ಶತಮಾನಗಳ ಹಿಂದೆ ವಲಸೆ ಬಂದು 11 ಗ್ರಾಮಗಳಲ್ಲಿ ನೆಲೆ ನಿಂತಿದ್ದೇವೆ. 1918 ರಲ್ಲಿ ಗಿರಿಯಾಪುರ ಕೇಂದ್ರವಾಗಿಸಿಕೊಂಡು ಸಂಘಟಿತರಾಗಿ ಕುಲದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನವನ್ನು ನಿರ್ಮಾಣ ಮಾಡಿ ಆರಾಧಿಸಲಾಗುತ್ತಿದೆ. ಪ್ರತಿವರ್ಷ ಮಲ್ಲಮ್ಮನವರ ಜಯಂತಿ ಹಾಗೂ 12 ವರ್ಷಗಳಿಗೊಮ್ಮೆ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ನೂತನ ವಿಗ್ರಹ ಪುನರ್‌ಪ್ರತಿಷ್ಠಾ ಕಾರ್‍ಯಗಳು ಏಪ್ರಿಲ್ 21 ರಿಂದ ಮೇ1 ರವರೆಗೆ 11 ದಿನಗಳು ನೂತನ ವಿಗ್ರಹಕ್ಕೆ ಅಭಿಷೇಕ ಹಾಗೂ ಪೂಜಾ ವಿಧಾನಗಳನ್ನು ಪ್ರತಿ ದಿನ 11 ಗ್ರಾಮ ಘಟಕದ ವತಿಯಿಂದ ನಡೆಸಲಾಯಿತು. ಜಲ, ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ, ಎಳನೀರು ಜಲದಿಂದ ನಿತ್ಯ ಅಭಿಷೇಕ ರುದ್ರಾಭಿಷೇಕ, ಭತ್ತ, ನವಧಾನ್ಯಗಳ ಅಭಿಷೇಕ ನಡೆಸಲಾಯಿತು. ಗುರುವಾರ ಬೆಳಗ್ಗೆ ಗಿರಿಯಾಪುರದ ವೀರಗಾಸೆ ಕಲಾ ತಂಡದೊಂದಿಗೆ ಹೊಳೆ ಪೂಜೆ, 101 ಪೂರ್ಣಕುಂಭಗಳ ಅಭಿಷೇಕ ನಡೆಯಿತು. ಹಿಂದಿನ ವಿಗ್ರಹವನ್ನು ಷ.ಬ್ರ.ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಂತೆ ಇದ್ದ ಜಾಗದಲ್ಲೆ ಶಾಸ್ತ್ರೋಕ್ತವಾಗಿ ಮುಕ್ತಿ ನೀಡಲಾಗಿದೆ. ವೇದಾ ನದಿಯಲ್ಲಿ ವಿಸರ್ಜಿಸಲಾಗಿದೆ ಎಂದರು.ಪೋಟೋ ಫೈಲ್‌ ನೇಮ್‌ 6 ಕೆಸಿಕೆಎಂ 1ಕಡೂರು ತಾಲೂಕಿನ ಗಿರಿಯಾಪುರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದೇವಾಲಯದಲ್ಲಿ ನೂತನ ವಿಗ್ರಹ ಪುನರ್‌ ಪ್ರತಿಷ್ಠಾಪಿಸಿದ ಹಿನ್ನಲೆಯಲ್ಲಿ ಮಲ್ಲಿಕಾಂಬ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭವನ್ನು ಎಡೆಯೂರು ಕ್ಷೇತ್ರದ ಷ.ಬ್ರ.ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ಅವರು ಉದ್ಘಾಟಿಸಿದರು.