ಕಾನೂನು ಬಾಹಿರ ಪುತ್ಥಳಿ ಸ್ಥಾಪನೆ ತಾಲೂಕಾಡಳಿತದಿಂದ ತೆರವು

| Published : May 07 2024, 01:08 AM IST

ಕಾನೂನು ಬಾಹಿರ ಪುತ್ಥಳಿ ಸ್ಥಾಪನೆ ತಾಲೂಕಾಡಳಿತದಿಂದ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕೋಡಿಸರ್ಕಲ್‌ನಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪಿಸಲೆಂದು ಈ ಹಿಂದೆ ಸರ್ಕಾರ ನಿರ್ಮಿಸಿರುವ ಮಂಟಪಕ್ಕೆ ಭಾನುವಾರ ರಾತ್ರಿ ಅನಾಮಧೇಯರು ಬಸವೇಶ್ವರರ ನೂತನ ಪುತ್ಥಳಿ ತಂದಿಟ್ಟಿ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಕೋಡಿಸರ್ಕಲ್‌ನಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪಿಸಲೆಂದು ಈ ಹಿಂದೆ ಸರ್ಕಾರ ನಿರ್ಮಿಸಿರುವ ಮಂಟಪಕ್ಕೆ ಭಾನುವಾರ ರಾತ್ರಿ ಅನಾಮಧೇಯರು ಬಸವೇಶ್ವರರ ನೂತನ ಪುತ್ಥಳಿ ತಂದಿಟ್ಟಿ ಘಟನೆ ನಡೆದಿದೆ. ಬೆಳಗ್ಗೆ ತಾಲೂಕು ಆಡಳಿತಕ್ಕೆ ತಿಳಿಯುತ್ತಿದ್ದಂತೆ ಸರ್ಕಾರದ ಅನುಮತಿ ಇಲ್ಲದೆ ಪುತ್ಥಳಿ ತಂದಿಟ್ಟಿರುವುದು ಕಾನೂನು ಬಾಹಿರವೆಂದು ತಾಲೂಕು ಆಡಳಿತವು ಪೊಲೀಸರು ನೆರವಿನೊಂದಿಗೆ ಪುತ್ಥಳಿ ತೆರವುಗೊಳಿಸಲಾಯಿತು.

ಕೋಡಿ ಸರ್ಕಲ್‌ನಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸುವಂತೆ ಕಳೆದ ಎರಡು ವರ್ಷಗಳ ಹಿಂದೆಯೇ ನಗರಸಭೆಗೆ ಅನುಮತಿ ನೀಡುವ ಬಗ್ಗೆ ಇಲ್ಲಿನ ಬಸವೇಶ್ವರ ಸಮಿತಿ, ಬಳಗ ಹಾಗೂ ವೀರಶೈವ, ಲಿಂಗಾಯಿತ ಮತ್ತಿತರೆ ಸಂಘಟನೆಗಳು ಮನವಿ ಸಲ್ಲಿಸಿದ್ದರು. ನಂತರ ನಗರಸಭೆ ಸಭೆಯಲ್ಲಿ ಪುತ್ಥಳಿ ಸ್ಥಾಪಿಸುವ ಬಗ್ಗೆ ತೀರ್ಮಾನವನ್ನೂ ಮಾಡಿ ಜಿಲ್ಲಾಡಳಿತ ಮೂಲಕ ಸರ್ಕಾರದಿಂದ ಅನುಮತಿ ಪಡೆಯುವುದಾಗಿ ತಿಳಿಸಿ, ವರ್ಷವಾದರೂ ಮುಂದಿನ ಕ್ರಮ ಆಗಿರಲಿಲ್ಲ.

ಪುತ್ಥಳಿ ಸ್ಥಾಪಿಸುವ ಕೆಲಸ ಮುಂದೂಡಲಾಗುತ್ತಿದೆಯೆಂದು ಬೇಸರಗೊಂಡ ಬಸವಣ್ಣನ ಅನುಯಾಯಿಗಳು ರಾತ್ರೋ ರಾತ್ರಿ ಬಸವೇಶ್ವರ ಪುತ್ಥಳಿಯನ್ನು ಸದರಿ ಮಂಟಪದಲ್ಲಿಟ್ಟು ಪೂಜೆ ಸಲ್ಲಿಸಿದ್ದಾರೆ. ವಿಷಯ ತಿಳಿದ ತಾಲೂಕು ಆಡಳಿತ ಇದನ್ನು ವಿರೋಧಿಸಿ ತೆರವಿಗೆ ಮುಂದಾದಾಗ ಸ್ಥಳದಲ್ಲಿ ಜಮಾವಣೆಗೊಂಡಿದ್ದ ಸಮಾಜದ ಯುವಕರು, ಮುಖಂಡರುಗಳು ಯಾವುದೇ ಕಾರಣಕ್ಕೂ ಪುತ್ಥಳಿ ತೆರವು ಮಾಡಬಾರದು ಎಂದು ಅಧಿಕಾರಿಗಳೊಂದಿಗೆ ಮಾತಿನ ಚಕಮುಖಿ ನಡೆಯಿತು.

ಪರಿಸ್ಥಿತಿ ಬಿಗಡಾಯಿಸುವುದನ್ನ ಅರಿತ ಪೊಲೀಸರು ಜನರನ್ನು ಚದುರಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಿ ಕಾಪಾಡಿದರು. ಈಗ ಚುನಾವಣಾ ನೀತಿ ಸಂಹಿತೆ ಇದೆ. ಅಲ್ಲದೆ ಇದಕ್ಕೆ ಜಿಲ್ಲಾಡಳಿತದ ಅನುಮತಿ ಮುಖ್ಯವಾಗಿದ್ದು, ಚುನಾವಣೆ ಮುಗಿದ ನಂತರ ಈ ಬಗ್ಗೆ ಕಾನೂನು ಪ್ರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಪುತ್ಥಳಿ ಸ್ಥಾಪಿಸಲಾಗುವುದು. ಸದ್ಯ ಪುತ್ಥಳಿಯನ್ನು ನಗರಸಭೆ ಕಛೇರಿಯಲ್ಲಿ ಇಡುವ ಬಗ್ಗೆ ಸ್ಪಷ್ಟತೆ ನೀಡಲಾಯಿತು. ಜಿಲ್ಲಾ ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ವಿನಾಯಕ ಶೆಟಗೇರಿ, ಉಪವಿಭಾಗಾಧಿಕಾರಿ ಸಪ್ತಶ್ರೀ, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ, ತಹಸೀಲ್ದಾರ್ ಪವನ್‌ಕುಮಾರ್ ನೇತೃತ್ವದಲ್ಲಿ ಕ್ರೇನ್ ಮೂಲಕ ಪುತ್ಥಳಿಯನ್ನು ಮಂಟಪದಿಂದ ಕೆಳಗಿಳಿಸಲಾಯಿತು. ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳು ಪುತ್ಥಳಿ ಇಡುವ ಬಗ್ಗೆ ವಿಳಂಬ ನೀತಿ ಅನುಸರಿಸಿರುವುದು ಸರಿಯಲ್ಲ. ಬಸವಣ್ಣನವರ ಪುತ್ಥಳಿಗೆ ಸರ್ಕಾರ, ತಾಲೂಕು, ಜಿಲ್ಲಾ ಆಡಳಿತವಾಗಲಿ ಧಕ್ಕೆ ತರಬಾರದು. ಅನುಮತಿ ಕೊಡಲು ವರ್ಷ ಬೇಕಾಗಿಲ್ಲ. ಯಾರು ಸಹ ಶಾಂತಿ ಕದಡಲು ಹೋಗಬೇಡಿ. ಶಾಂತಿಯುತ, ನ್ಯಾಯಬದ್ದವಾಗಿ ಹೋರಾಟ ಮಾಡಿ ಮುಂದೆ ಪುತ್ಥಳಿ ಇಡೋಣ ಎಂದರು.ಮಾಜಿ ಶಾಸಕ ಬಿ. ನಂಜಾಮರಿ ಮಾತನಾಡಿ, ಈಗಾಗಲೇ ಬಸವಣ್ಣನವರ ಪುತ್ಥಳಿ ಸ್ಥಾಪನೆಯಾಗಿದೆ. ಯಾವುದೇ ಕಾರಣಕ್ಕೂ ತೆಗೆಯಲು ಬಿಡುವುದಿಲ್ಲ. ಅಧಿಕಾರಿಗಳು ಪುತ್ಥಳಿ ಸ್ಥಾಪನೆಗೆ ಕಾನೂನು ಬಗ್ಗೆ ಆದೇಶ ಪ್ರತಿ ತಂದು ತೋರಿಸಿದರೆ ಮುಂದೆ ಕಾನೂನು ಪ್ರಕಾರವೇ ಇಡೋಣ. ಈಗ ಯಾರೂ ಅಶಾಂತಿ ಉಂಟುಮಾಡಬೇಡಿ ಎಂದು ಮನವಿ ಮಾಡಿಕೊಂಡರು.ನಿವೃತ್ತ ಎಸಿಪಿ ಲೋಕೇಶ್ವರ ಮಾತನಾಡಿ, ನಾವು ಕಳೆದ ಎರಡು ವರ್ಷಗಳಿಂದಲೂ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಅನುಮತಿ ಕೇಳಿಕೊಂಡು ಬರುತ್ತಿದ್ದೆವು. ಇಷ್ಟು ವರ್ಷಗಳಿಂದ ನಮಗೆ ಯಾವುದೇ ಅನುಮತಿ ಸಿಗಲಿಲ್ಲ. ಅದಕ್ಕಾಗಿ ಸಮಾಜದ ಕೆಲ ಬಂಧುಗಳು, ಅನುಯಾಯಿಗಳು ಸೇರಿ ಪುತ್ಥಳಿ ಸ್ಥಾಪನೆ ಮಾಡಿದ್ದಾರೆ. ರಾಜ್ಯ ಸರ್ಕಾರವೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಂತಹ ವಿಶ್ವನಾಯಕನ ಪ್ರತಿಮೆ ಸ್ಥಾಪನೆಗೆ ಧಕ್ಕೆಯಾದರೆ ಯಾವ ಹೋರಾಟ, ಪ್ರತಿಭಟನೆಗಾದರೂ ಸಿದ್ದರಿದ್ದೇವೆ. ಆದಷ್ಟು ಬೇಗ ಅನುಮತಿಯೊಂದಿಗೆ ಪುತ್ಥಳಿ ಸ್ಥಾಪನೆಗೆ ತಾಲೂಕು ಆಡಳಿತ ಮುಂದಾಗಬೇಕೆಂದು ಹೇಳಿದರು.