ಬಾಗಿಲು ಮುಚ್ಚುವ ಹಂತದತ್ತ ಸಾಗಿದೆ ‘ನಮ್ಮ ಕ್ಲಿನಿಕ್‌’

| Published : May 07 2024, 01:08 AM IST

ಬಾಗಿಲು ಮುಚ್ಚುವ ಹಂತದತ್ತ ಸಾಗಿದೆ ‘ನಮ್ಮ ಕ್ಲಿನಿಕ್‌’
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು, ವೃದ್ದರು, ಮಕ್ಕಳಿಗೆ ಮನೆಯಂಗಳದಲ್ಲೆ ಅಗತ್ಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಕಲೇಶಪುರದಲ್ಲಿ ಆರಂಭವಾದ ‘ನಮ್ಮ ಕ್ಲಿನಿಕ್’ ಯೋಜನೆ ಸದ್ಯ ಬಾಗಿಲು ಮುಚ್ಚುವ ಹಂತ ತಲುಪಿದೆ.

ಮನೆಯಂಗಳದಲ್ಲೆ ಅಗತ್ಯ ಚಿಕಿತ್ಸೆ ನೀಡಲು ಆರಂಭವಾಗಿದ್ದ ಯೋಜನೆ । ಮಹಿಳೆಯರು, ಮಕ್ಕಳು, ವೃದ್ಧರಿಗೆ ಅನುಕೂಲಶ್ರೀವಿದ್ಯಾ ಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ ಮಹಿಳೆಯರು, ವೃದ್ದರು, ಮಕ್ಕಳಿಗೆ ಮನೆಯಂಗಳದಲ್ಲೆ ಅಗತ್ಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆರಂಭವಾದ ‘ನಮ್ಮ ಕ್ಲಿನಿಕ್’ ಯೋಜನೆ ಸದ್ಯ ಬಾಗಿಲು ಮುಚ್ಚುವ ಹಂತ ತಲುಪಿದೆ.ದೆಹಲಿಯ ಮೋಹಲ ಕ್ಲಿನಿಕ್ ಯಶಸ್ಸು ಗಮನಿಸಿದ್ದ ಬಸವರಾಜ್ ಬಿಜೆಪಿ ಸರ್ಕಾರದ ಬೊಮ್ಮಯಿ ಅವರ ಅವಧಿಯಲ್ಲಿ ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ೫೦ ಸಾವಿರ ಜನಸಂಖ್ಯೆಗೊಂದರಂತೆ ‘ನಮ್ಮ ಕ್ಲಿನಿಕ್’ ಆರಂಬಿಸಿದ್ದು ಕ್ಲಿನಿಕ್ ಮುಖ್ಯವಾಗಿ ೯ ಕಾರ್ಯಕ್ರಮದಡಿ ಸೇವೆ ನೀಡಬೇಕಿದೆ. ಇದರಂತೆ ಪಟ್ಟಣದಲ್ಲಿ ಸ್ಥಾಪನೆಗೊಂಡಿರುವ ಕ್ಲಿನಿಕ್‌ಗೆ ೫೦ ಸಾವಿರ ಜನಸಂಖ್ಯೆ ಇಲ್ಲದಿದ್ದರೂ ಮಲೆನಾಡು ಎಂಬ ಕಾರಣಕ್ಕೆ ಪಟ್ಟಣದ ಬೇಲೂರು ರಸ್ತೆಯ ಖಾಸಗಿ ಕಟ್ಟಡದಲ್ಲಿ ‘ನಮ್ಮ ಕ್ಲಿನಿಕ್’ ಎರಡು ವರ್ಷದ ಹಿಂದೆ ಉದ್ಘಾಟನೆಗೊಂಡಿದೆ. ಆದರೆ ಆರಂಭದಿಂದ ಇದುವರಗೆ ಇಲ್ಲಿ ಸಮರ್ಪಕವಾಗಿ ಚಿಕಿತ್ಸೆ ನೀಡಿದ ದಿನಗಳಿಲ್ಲ.

ಸದ್ಯ ಕಳೆದ ಆರು ತಿಂಗಳಿನಿಂದ ಯಾವುದೇ ಸೇವೆಯು ದೊರೆಯದ ಕಾರಣ ಮುಚ್ಚುವ ಹಂತ ತಲುಪಿದೆ. ‘ನಮ್ಮ ಕ್ಲಿನಿಕ್‌’ನ ಕಟ್ಟಡದಲ್ಲಿ ನಾಮಫಲಕ ಹೊರತುಪಡಿಸಿ ಯಾವ ಸೌಲಭ್ಯವಿಲ್ಲದೆ ಇಲ್ಲಿಗೆ ಬರುವ ರೋಗಿಗಳು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ, ಒಬ್ಬ ಶುಶ್ರೂಷಕಿ, ಒಬ್ಬ ಲ್ಯಾಬ್‌ ಟೆಕ್ನಿಷಿಯನ್ ಹಾಗೂ ಒಬ್ಬ ಡಿ ಗ್ರೂಪ್ ನೌಕರ ಇರಬೇಕಿದೆ. ಆದರೆ, ಪಟ್ಟಣದ ‘ನಮ್ಮ ಕ್ಲಿನಿಕ್‌’ನಲ್ಲಿ ಕಳೆದ ಒಂದು ವರ್ಷದಿಂದ ವೈದ್ಯ. ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್ ಸೇರಿದಂತೆ ಯಾವುದೇ ಸಿಬ್ಬಂದಿ ಇಲ್ಲವಾಗಿದ್ದು ಇರುವ ಡಿ ಗ್ರೂಪ್‌ ನೌಕರ ನಿತ್ಯ ಕ್ಲಿನಿಕ್ ಬಾಗಿಲು ತೆರೆಯುವುದು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಕ್ಲಿನಿಕ್ ಆರಂಭವಾದ ಇಂದಿನವರಗೆ ಕ್ಲಿನಿಕ್‌ನ ವಿದ್ಯುತ್ ಬಿಲ್ ಪಾವತಿ ಮಾಡಲಾಗಿಲ್ಲ. ವಿದ್ಯುತ್ ಬಿಲ್ ಬಾಕಿ ಕಾರಣ ನೀಡಿ ಕ್ಲಿನಿಕ್‌ನ ವಿದ್ಯುತ್ ಸಂಪರ್ಕವನ್ನು ಕಳೆದ ಆರು ತಿಂಗಳ ಹಿಂದೆ ಸ್ಥಗಿತಗೊಳಿಸಲಾಗಿದ್ದು ವಿದ್ಯುತ್ ಇಲ್ಲದ ಕಾರಣ ಕ್ಲಿನಿಕ್ ಕತ್ತಲ ಕೂಪದಲ್ಲಿ ಮುಳುಗಿದೆ.ಜಿಲ್ಲೆಯಲ್ಲಿ ಒಟ್ಟು ಆರು ನಮ್ಮ ಕ್ಲಿನಿಕ್‌ಗಳಿದ್ದು ಚನ್ನರಾಯಪಟ್ಟಣ ತಾಲೂಕಿನಲ್ಲಿ ಎರಡು, ಸಕಲೇಶಪುರ, ಬೇಲೂರು, ಅರಸೀಕೆರೆ, ಅರಕಲಗೂಡು ತಾಲೂಕಿನಲ್ಲಿ ತಲಾ ಒಂದೊಂದು ‘ನಮ್ಮ ಕ್ಲಿನಿಕ್‌’ಗಳಿದ್ದು ಈ ಎಲ್ಲ ಆರು ಕ್ಲಿನಿಕ್‌ಗಳಲ್ಲೂ ವೈದ್ಯರು ಅಗತ್ಯ ಸಿಬ್ಬಂದಿಯಿಲ್ಲದೆ ಕ್ಲಿನಿಕ್‌ಗಳ ಸ್ಥಿತಿ ಆಯೋಮಯವಾಗಿದೆ.

ಲಕ್ಷಾಂತರ ವೆಚ್ಚ:

‘ನಮ್ಮ ಕ್ಲಿನಿಕ್‌’ಗಳು ಬಹುತೇಕ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಕಟ್ಟಡದ ಬಾಡಿಗೆ, ವಿದ್ಯುತ್ ಬಿಲ್, ಸಿಬ್ಬಂದಿ ಸಂಬಳ ಸೇರಿದಂತೆ ಪ್ರತಿಯೊಂದು ಕ್ಲಿನಿಕ್ ನಿರ್ವಹಣೆಗಾಗಿ ಪ್ರತಿ ತಿಂಗಳು ಲಕ್ಷಾಂತರ ರು. ವೆಚ್ಚ ತಗುಲುತ್ತಿದೆ. ವೈದ್ಯರಿಲ್ಲದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ಚಿಕಿತ್ಸೆ ದೊರೆಯದಿದ್ದರೂ ಲಕ್ಷಾಂತರ ರು. ವೆಚ್ಚ ಮಾಡಲಾಗುತ್ತಿದೆ.

ವೈದ್ಯರ ನೇಮಕ ಪ್ರಕ್ರಿಯೆ ನಡೆದಿದೆಯಾದರೂ ‘ನಮ್ಮ ಕ್ಲಿನಿಕ್‌’ನಲ್ಲಿ ಕರ್ತವ್ಯ ನಿರ್ವಹಿಸಲು ಯಾರೂ ಮುಂದೆ ಬಾರದ ಕಾರಣ ವೈದ್ಯ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ಸರ್ಕಾರ ಮುಂದಾಗಿದೆ, ಆದರೆ ಇದು ಅಸಾಧ್ಯವಾಗಿದೆ: ಯಶವಂತ್. ‘ನಮ್ಮ ಕ್ಲಿನಿಕ್’ ಜಿಲ್ಲಾ ಡೇಟಾ ಮ್ಯಾನೇಜರ್. ..

ಸ್ರೀಯರು, ವೃದ್ದರು, ಮಕ್ಕಳಿಗೆ ತಮ್ಮ ಮನೆಯ ಸಮೀಪವೇ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸ್ಥಾಪಿತಗೊಂಡ ‘ನಮ್ಮ ಕ್ಲಿನಿಕ್‌’ಗಳು ನಿಸ್ಪ್ರಯೋಜಕವಾಗಿರುವುದು ಬೇಸರದ ಸಂಗತಿ.

ಅಕ್ಬರ್. ಅರೇಹಳ್ಳಿ ಬೀದಿ ನಿವಾಸಿ.