ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮಸ್ಥರ ಒತ್ತಾಯ

| Published : May 06 2024, 12:40 AM IST

ಸಾರಾಂಶ

ಗ್ರಾಮದಲ್ಲಿ ತಲೆ ಎತ್ತಿರುವ ದ್ವೇಷದ ವಾತಾವರಣ ತಿಳಿಗೊಳಿಸಬೇಕೆಂದು ಆಗ್ರಹಿಸಿ ಸಖರಾಯಪಟ್ಟಣ ಹೋಬಳಿಯ ಡಿ.ಕಾರೇಹಳ್ಳಿ ಗ್ರಾಮಸ್ಥರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗ್ರಾಮದಲ್ಲಿ ಶಾಂತಿಯುತವಾಗಿರುವ ವಾತಾವರಣ ಕದಡುವ ಮೂಲಕ ಗ್ರಾಮಸ್ಥರ ನೆಮ್ಮದಿಗೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿ.ಕಾರೇಹಳ್ಳಿ ಗ್ರಾಮಸ್ಥರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಾಯಕ ಸುದೇಶ್ ಕಿಣಿ ಅವರಿಗೆ ಮನವಿ ಸಲ್ಲಿಸಿ ಸಖರಾಯಪಟ್ಟಣ ಹೋಬಳಿಯ ಡಿ.ಕಾರೇಹಳ್ಳಿಯ ಬೋವಿ ಕಾಲೋನಿ ನಿವಾಸಿಗಳ ಮೇಲೆ ಕೆಲವರು ದೌರ್ಜನ್ಯವೆಸಗಿ ದ್ವೇಷದ ಕಿಡಿಹಚ್ಚಿಸುತ್ತಿದ್ದು ಅಂತಹವರ ವಿರುದ್ಧ ಕ್ರಮವಹಿಸಿ ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದರು.

ಬಳಿಕ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಚಿಕ್ಕದೇವನೂರು ಗ್ರಾಪಂ ವ್ಯಾಪ್ತಿಯ ಡಿ.ಕಾರೇಹಳ್ಳಿ ಬೋವಿ ಕಾಲೋನಿ ನಿವಾಸಿಗಳು ಸುಮಾರು ಐದು ದಶಕಗಳಿಂದ ಸೌಹಾರ್ದತೆಯಿಂದ ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ. ಆದರೆ, ಸ್ಥಳೀಯ ಕೆಲವು ಕಾಂಗ್ರೆಸ್ ಮುಖಂಡರುಗಳು ವಿಷ ಜೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮದಲ್ಲಿ ಕೆಲವು ಕಾಂಗ್ರೆಸ್ ಬೆಂಬಲಿಗರು ಗುಂಪುಗಾರಿಕೆ ಮಾಡಿಕೊಂಡು ಗ್ರಾಮಸ್ಥರು ಹಾಗೂ ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ, ಗಲಭೆ ಮತ್ತು ದೌರ್ಜನ್ಯವೆಸಗುತ್ತಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳನ್ನು ಮುಂದಿಟ್ಟು ತಪ್ಪು ಮಾರ್ಗದರ್ಶನ ನೀಡಿ, ರಾಜಕೀಯ ಪ್ರಭಾವದಿಂದ ಸುಳ್ಳು ದೂರುಗಳನ್ನು ನೀಡುತ್ತಿದ್ದಾರೆ ಎಂದರು.

ಡಿ.ಕಾರೇಹಳ್ಳಿ ನಿವಾಸಿಗಳಿಗೆ ವಾಹನದಲ್ಲಿ ಗುದ್ದಿಸುವುದು, ಕ್ಷುಲ್ಲಕ ಕಾರಣ ಇಟ್ಟುಕೊಂಡು ರಾಜಕೀಯ ಕಿಚ್ಚು ಹಚ್ಚಿಸುವುದು ಸೇರಿ ಅನೇಕ ರೀತಿಯ ತೊಂದರೆ ನೀಡಲಾಗುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಪರಸ್ಪರ ಗಲಭೆಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಗ್ರಾಮದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಬೇಕು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ವಿಳಂಭ ಧೋರಣೆ ಅನುಸರಿಸಿದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಕೇಶವ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಡಿ.ಎಂ.ಮಂಜು, ಡಿ.ಕಾರೇಹಳ್ಳಿ ಗ್ರಾ.ಪಂ. ಸದಸ್ಯರಾದ ರವಿ, ಅಣ್ಣಪ್ಪ, ಗ್ರಾಮಸ್ಥರಾದ ಕೃಷ್ಣಮೂರ್ತಿ, ಸ್ವಾಮಿ, ಉಮೇಶ್, ಭರತ್, ನವೀನ, ಧರ್ಮರಾಜ್ ಇದ್ದರು.