ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ

| Published : May 06 2024, 12:40 AM IST

ಸಾರಾಂಶ

ಲಕ್ಕವಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಏ.30 ರಿಂದ ಮೇ.21 ರ ವರೆಗೂ ನೆರವೇರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ತರೀಕೆರೆ

ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಏ.30 ರಿಂದ ಮೇ.21 ರ ವರೆಗೂ ನೆರವೇರಿಸಲಾಗುತ್ತದೆ.

ರಾಜ್ಯದಲ್ಲೇ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವ ಜಾತ್ರಾ ಮಹೋತ್ಸವದಲ್ಲಿ ಗ್ರಾಮದಲ್ಲಿರುವ 24 ರಿಂದ 30 ಎಲ್ಲಾ ವಿವಿಧ ಸಮಾಜದವರಿಂದ ಸರದಿ ಪ್ರಕಾರ ತಮ್ಮ ತಮ್ಮ ಕುಲದೇವತೆಗಳಿಗೆ ಗೊತ್ತುಪಡಿಸಿದ ದಿನ ಮತ್ತು ವಾರದ ದಿನಗಳಲ್ಲಿ ಪೂಜೆ, ಜಾತ್ರೆ ಕಾರ್ಯಕ್ರಮವನ್ನು ನೆರವೇರಿಸಲಾಗತ್ತಿದ್ದು, ಪ್ರಾರಂಭವಾಗಿ ಬೆಳಗ್ಗೆ ಶ್ರೀ ಕದಲಿ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ, ಸಂಜೆ ಮಾರಿಗದ್ದುಗೆಯಲ್ಲಿ ಭಂಡಾರ ಬಟ್ಟಲು ಪೂಜೆ, ಜಾತ್ರೆ ಕಾರ್ಯಕ್ರಮವನ್ನು ಆರಂಭಿಸಿದೆ.

ವೀರಶೈವ ‌ಸಮಾಜದವರಿಂದ ಗಣಂಗಳು ಸೇವೆ ಹಾಗೂ ಶ್ರೀ ಕೋಟೆ ಮಾರಿಕಾಂಬಾ ಜಾತ್ರೆ ನಡೆಸಲು, ಪೂಜೆಗಳ ನಂತರ ರಾತ್ರಿ ಆದಿ ಕರ್ನಾಟಕ ಸಮಾಜದವರಿಂದ ಅಧಿಕೃತವಾಗಿ ಜಾತ್ರೆ ನಡೆಸಲು ಸಾರು ಹಾಕುವ ಕಾರ್ಯಕ್ರಮ ನೆರವೇರಿತು. ಮಾರನೇ ದಿನ ಬ್ರಾಹ್ಮಣ ಸಮಾಜದವರಿಂದ ಶ್ರೀ ಬ್ರಹ್ಮದೇವರ ಪೂಜೆ ಕಾರ್ಯಕ್ರಮ ನೆರವೇರಿಸಲಾಗುತ್ತದೆ, ಜಾತ್ರೆ ಪ್ರಮುಖ ಕಾರ್ಯಕ್ರಮವಾದ ಶೈವ ರೆಡ್ಡಿ ಸಮಾಜದ ಜನರಿಂದ ಶ್ರೀ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾಡಿನಲ್ಲಿ ಶ್ರೀ ದೇವಿಯ ವೃಕ್ಷವನ್ನು ಗುರಿತಿಸುವ ಕಾರ್ಯಕ್ರಮವು ಮೇ.1 ರಂದು ನೆರವೇರಿಸಲಾಯಿತು.

ಮಾರನೇ ದಿನ ಆದಿ ಕರ್ನಾಟಕ ಸಮಾಜದವರಿಂದ ಗೊತ್ತು ಪಡಿಸಿದ ವೃಕ್ಷವನ್ನು ತಯಾರಿಸುವುದು, ಗಂಗಾಮತಸ್ಥ ಸಮಾಜವರಿಂದ ಶ್ರೀ ದೇವಿಯ ತವರು ಮನೆ ನಿರ್ಮಿಸಲು ಕಾರ್ಯ ಆರಂಭಿಸುವುದು, ನಂತರ ದಿನದಲ್ಲಿ ಕ್ಷತ್ರೀಯ ಮರಾಠ ಸಮಾಜದರಿಂದ ಶ್ರೀ ಜಟ್ಟಿಗಪ್ಪ ದೇವರ ಜಾತ್ರಾ ಮಹೋತ್ಸವ ನಡೆಸಲಾಗುವುದು, ಶೈವ ರೆಡ್ಡಿ ಸಮಾಜದ ಜನರಿಂದ ಚಪ್ಪರ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೇ 3ರಂದು ಬೋವಿ ಸಮಾಜದವರಿಂದ ಶ್ರೀ ದೇವಿಯ ಮೂರ್ತಿಯನ್ನು ತಯಾರಿಸುವ ವೃಕ್ಷವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮೂಲಕ ರಾಜಮಾರ್ಯಾದೆಯಿಂದ ಬರಮಾಡಿಕೊಳ್ಳಲು ಅದ್ಧೂರಿಯಾಗಿ ಆಯೋಜಿಸಿ, ಶ್ರೀದೇವಿಯ ಗದ್ದುಗೆಗೆ ತರಲಾಯಿತು. ಕುರುಬ ಸಮಾಜದವರಿಂದ ಶ್ರೀ ದೊಣೆಕೆಂಚಮ್ಮದೇವಿ ಜಾತ್ರೆ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದ್ದು, ಟಗರು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಾರನೇ ದಿನ ಉಪ್ಪಾರ ಬೀರನಹಳ್ಳಿ ಗ್ರಾಮದ ಜನರಿಂದ ಶ್ರೀ ಶಿವಾಲಯದಲ್ಲಿ ಅಭಿಷೇಕ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜಾತ್ರೆ ಉತ್ಸವಗಳಲ್ಲಿ ಅರ್ಧಭಾಗವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಮೇ 7ಮತ್ತು 8 ರಂದು ದೇವಾಂಗ ಜನಾಂಗದವರು ಶ್ರೀ ಅಂತರಘಟ್ಟಮ್ಮದೇವಿ ಜಾತ್ರೆ ಕಾರ್ಯಕ್ರಮವನ್ನು ನೆರವೇರಿಸಲಾಗತ್ತಿದ್ದು, ಮಾರನೇ ದಿನ ಭೋವಿ ಸಮಾಜದವರಿಂದ ಶ್ರೀಗಂಗಮ್ಮ ದೇವಿಯ ಜಾತ್ರೋತ್ಸವ ಏರ್ಪಡಿಸಲಾಗಿದೆ.

ನಂತರದ ದಿನಗಳಲ್ಲಿ ಒಕ್ಕಲಿಗ ಸಮುದಾಯದಿಂದ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ ಕಾರ್ಯಕ್ರಮ, ತಮಿಳು ಸಮಾಜದವರಿಂದ ಶ್ರೀ ಆದಿಪರಾಶಕ್ತಿ ದೇವಿ ಜಾತ್ರಾ ಮಹೋತ್ಸವ ನಡೆಸಲಾಗುವುದು. ಗಂಗಾಮತಸ್ಥ ಸಮಾಜದಿಂದ ಶ್ರೀ ಜಮ್ಮತಳ್ಳಮ್ಮ ದೇವಿಯ ಜಾತ್ರೋತ್ಸವ ನೆರವೇರಿಸಲಾಗುವುದು.

ಮೇ 14ರಂದು ಬಹುಮುಖ್ಯವಾಗಿ ಮಾರಿಕಾಂಬಾ ದೇವಿ ಜಾತ್ರೋತ್ಸವ ನಡೆಯುವ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಂಜೆ ತುಲಾ ಲಗ್ನದಲ್ಲಿ ಶ್ರೀ ದೇವಿಯವರಿಗೆ ದೃಷ್ಠಿಬೊಟ್ಟು ಇಡುವ ಕಾರ್ಯದಲ್ಲಿ ಅಂದಾಜು ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ಈ ವಿಸ್ಮಯ ಕಾರ್ಯಕ್ರಮ ನೋಡಿ ಧನ್ಯರಾಗುತ್ತಾರೆ. ವಿಶೇಷವೆಂದರೆ ಶ್ರೀ ದೇವಿಯವರ ಕಣ್ಣನ್ನು ನೇರವಾಗಿ ನೋಡದೇ ಕನ್ನಡಿಯಲ್ಲಿ ಕಾಣುವ ದೃಷ್ಟಿಕೋನ ಮೂಲಕ ಶ್ರೀ ದೇವಿಯವರ ಹಣೆಗೆ ತಿಲಕವಿಟ್ಟು, ಕ್ಷಣಾರ್ಧದಲ್ಲೇ ದೇವಿಯವರ ಮುಂಭಾಗದಲ್ಲಿ 50 ರಿಂದ 60 ಮೀ. ಅಂತರದಲ್ಲಿ ಪ್ರತಿಷ್ಠಾಪಿಸಿರುವ ದೃಷ್ಠಿಬೊಟ್ಟು ಕಲ್ಲು ಭಾಗದಲ್ಲಿ ಇಟ್ಟಿರುವ ಒಣಹುಲ್ಲು ವಿಸ್ಮಯವಾಗಿ ಶ್ರೀ ದೇವಿಯ ದೃಷ್ಠಿಯಿಂದ ತನ್ನ ತಾನಾಗಿಯೇ ಹತ್ತಿಹುರಿಯಲು ಪ್ರಾರಂಭವಾಗುತ್ತದೆ,

ಇಂಥ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಪುನೀತರಾಗುತ್ತಾರೆ. ಇದೇ ರಾತ್ರಿ ಹವಾಲ್ದಾರ್ ತಿಮ್ಮಾಭೋವಿ ಕುಟುಂಬದವರಿಂದ ಮತ್ತು ಸಮಾಜದ ಜನರಿಂದ ಹಾಗೂ ಗಂಗಾ ಮತಸ್ಥರಿಂದ ಶ್ರೀ ದೇವಿಯ ಮೂರ್ತಿಯನ್ನು ಉತ್ಸವಕ್ಕೆ ಎತ್ತಿಕೊಡುವ ಮೂಲಕ ಉಪ್ಪಾರ ಸಮಾಜದಿಂದ ಶ್ರೀ ದೇವಿಯ ತವರು ಮನೆಯಿಂದ ದೇವಿಯವರ ಗಂಡನ ಮನೆಗೆ ಗದ್ದುಗೆಗೆ ಪ್ರತಿಷ್ಠಾಪಿಸುವ ಕಾರ್ಯಕ್ರಮ ನೆರವೇರಿಸಲಾಗುತ್ತದೆ.ಈ ವೇಳೆ ದೊಡ್ಡ ಉತ್ಸವ ರಾತ್ರಿಯಿಡೀ ನಡೆಯುತ್ತದೆ, ಶೀ ದೇವಿಯವರ ಮೂರ್ತಿಯನ್ನು ಗದ್ದುಗೆಗೆ ಪ್ರತಿಷ್ಠಾಪಿಸಿದ ನಂತರ ಆದಿ ಕರ್ನಾಟಕ ಸಮಾಜದವರಿಂದ ಪೂಜೆ ಕಾರ್ಯಕ್ರಮ ನಡೆಯಲಿದೆ, ಮೇ.15 ರಂದು ಜಾತ್ರೆ ಉತ್ಸವ ಗದ್ದುಗೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಲಕ್ಷಾಂತರ ಭಕ್ತರು ಪಾಲ್ಗೊಂಡು, ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ವೇಳೆ ಬೆಳಿಗ್ಗೆ 8.30ಕ್ಕೆ ಉಪ್ಪಾರಬೀರನಹಳ್ಳಿಯ ಗ್ರಾಮದ ಭಕ್ತರಿಂದ ಅಗ್ನಿ ಕರಗ ,ಹೂವಿನ ಕರಗ, ತ್ರಿಶೂಲ ಕಾರ್ಯಕ್ರಮ ನಡೆಯಲಿದೆ.ಈ ದಿನದ ಅದ್ಧೂರಿಯ ಕಾರ್ಯಕ್ರಮ ನಂತರ ರಾತ್ರಿ ಶ್ರೀ ದೇವಿಯವರನ್ನು ವಿದ್ಯುತ್ ದೀಪಗಳ ಅಲಂಕಾರದಿಂದ ರಾಜಬೀದಿಯಲ್ಲಿ ಬಾಣಬಿರುಸು, ವಾದ್ಯಗೋಷ್ಠಿ, ಮುಂತಾದ ಮನೋರಂಜನೆ ಕಾರ್ಯಕ್ರಮ ದೊಂದಿಗೆ ಗ್ರಾಮದ ಗಡಿಯಲ್ಲಿ ವಿಸರ್ಜಿಸಲಾಗುವುದು.ಮೇ.21ರಂದು ಮರುಪೂಜೆಯನ್ನು ಯಾದವ ಸಮಾಜದವರಿಂದ ನೆಡೆಸಲಾಗುವುದು, ಮೇ.21 ರಂದು ಶ್ರೀ ದೇವಿಯ ವರಿಗೆ ಮರುಪೂಜೆ ಕಾರ್ಯಕ್ರಮ ದೊಂದಿಗೆ ಜಾತ್ರೆಯು ಮುಕ್ತಾಯವಾಗುತ್ತದೆ. ಜಾತ್ರೆ ಪ್ರಯುಕ್ತ ಮೇ.16 ಮತ್ತು 17 ರಂದು ರಾಜ್ಯ ಮಟ್ಟದ ಕು‌ಸ್ತಿ ಪಂದ್ಯಾವಳಿಯನ್ನು ಏರ್ಪಡಿ,ಸಲಾಗಿದೆ. ಈ ಜಾತ್ರೆ ನಡೆಸಲು ತರೀಕೆರೆ ಕ್ಷೇತ್ರದ ಶಾಸಕರಾದ ಶ್ರೀನಿವಾಸ್.ಜಿ.ಹೆಚ್‌ ತಾಲೂಕಿನ ಆಡಳಿತ , ಲಕ್ಕವಳ್ಳಿಯ ಗ್ರಾಪಂ , ಲಕ್ಕವಳ್ಳಿ, ಮತ್ತು ಹೋಬಳಿ ಗ್ರಾಮಸ್ಥರಿಂದ ಹಾಗೂ ಲಕ್ಷಾಂತರ ಭಕ್ತರ ಸಹಕಾರದಿಂದ ಅದ್ಧೂರಿಯಾಗಿ ಧಾರ್ಮಿಕ ಸೇವೆಯನ್ನು ಆಚರಿಸಲಾಗುತ್ತದೆ ಎಂದು ಶ್ರೀ ಕೋಟೆ ಮಾರಿಕಾಂಬಾ ದೇವಿಯವರ ಜಾತ್ರೋತ್ಸವ ಸಮಿತಿಯ ಮುಖ್ಯಸ್ಥ ರಾದ ಶಿವಯೋಗಿ.ಎಲ್.ಎಸ್. ಸುರೇಶ್ ಶ್ಯಾನುಬೋಗ್, ಸಮಿತಿಯ ಕಾರ್ಯಕರ್ತ ಹೇಮಣ್ಣ.ಎಲ್.ಟಿ. ಮತ್ತು ಸಮಿತಿಯ ಕಾರ್ಯಕರ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.