ಕಾಂಗ್ರೆಸ್‌ ಜತೆ ಮಠಾಧೀಶರು ಕೈ ಜೋಡಿಸಲಿ: ಸಚಿವ ಸಂತೋಷ್‌ ಲಾಡ್‌

| Published : May 06 2024, 12:40 AM IST

ಸಾರಾಂಶ

ಜಾತಿ-ಜಾತಿಗಳ ನಡುವೆ ಸಂಘರ್ಷ ಉಂಟುಮಾಡಿ, ಕಳೆದ 10 ವರ್ಷಗಳಿಂದ ರಾಷ್ಟ್ರ ಕೊಳ್ಳೆ ಹೊಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕು.

ಕೊಟ್ಟೂರು: ರಾಷ್ಟ್ರಕ್ಕೆ ಮತ್ತೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗದಂತೆ ತಡೆಯುವ ಹೋರಾಟದಲ್ಲಿ ರಾಜ್ಯದ ಮಠಾಧೀಶರು ಕಾಂಗ್ರೆಸ್‌ ಜತೆ ಕೈಜೋಡಿಸಬೇಕು ಎಂದು ಸಚಿವ ಸಂತೋಷ್‌ ಲಾಡ್‌ ಕರೆ ನೀಡಿದರು.

ಪಟ್ಟಣದ ತೇರು ಬಯಲು ಪ್ರದೇಶದಲ್ಲಿ ಶನಿವಾರ ರಾತ್ರಿ ಬಳ್ಳಾರಿ ಲೋಕಸಭ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬುದ್ಧ, ಬಸವೇಶ್ವರ, ಅಂಬೇಡ್ಕರ್‌ ವಿಚಾರಧಾರೆಗಳನ್ನು ಬದಿಗಿಟ್ಟು ಜಾತಿ-ಜಾತಿಗಳ ನಡುವೆ ಸಂಘರ್ಷ ಉಂಟುಮಾಡಿ, ಕಳೆದ 10 ವರ್ಷಗಳಿಂದ ರಾಷ್ಟ್ರ ಕೊಳ್ಳೆ ಹೊಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಹಿಂದುತ್ವ, ರಾಮಮಂದಿರ, ಪಾಕಿಸ್ತಾನ , ಮುಸ್ಲಿಂ ಈ ನಾಲ್ಕು ವಿಷಯಗಳ ಬಗ್ಗೆ ಮಾತ್ರ ಮಾತನಾಡಿ ದೇಶದಲ್ಲಿ ತಾಂಡವವಾಡುತ್ತಿರುವ ಇತರ ಸಮಸ್ಯೆಗಳ ಬಗ್ಗೆ ನುಣುಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಷ್ಟ್ರದ ಹಿತ ಚಿಂತನೆ ಮೋದಿ ಮತ್ತು ಬಿಜೆಪಿಯವರಿಗೆ ಖಂಡಿತ ಬೇಕಾಗಿಲ್ಲ. ಮತ ಪಡೆಯಲು ಮಾತ್ರ ರಾಷ್ಟ್ರಪ್ರೇಮದ ಮಾತುಗಳನ್ನು ಆಡುತ್ತಿರುವ ಅವರ ಬಂಡವಾಳ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಜನತೆ ಬಯಲಿಗೆ ತರಲು ಮುಂದಾಗಬೇಕು ಎಂದು ಅವರು ಹೇಳಿದರು.

ದೇಶವು 2.2 ಲಕ್ಷ ಕೋಟಿ ಸಾಲ ಪಡೆಯುವಂತೆ ಮಾಡಿರುವುದೇ ಮೋದಿ ಮಹಾತ್ಮನ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದ ಅವರು, ರಾಷ್ಟ್ರದ ಜಿಡಿಪಿ ದರ ಬಾಂಗ್ಲಾದೇಶವನ್ನು ಸಹ ಹಿಂದಿಕ್ಕಲು ಆಗಿಲ್ಲ ಎನ್ನುವುದು ಇವರ ಆಡಳಿತದ ಗುಣಮಟ್ಟ ತೋರಿಸುತ್ತದೆ ಎಂದರು.

ಈ.ತುಕಾರಾಂ ಮಾತನಾಡಿ, 4 ಬಾರಿ ಸಂಡೂರು ಕ್ಷೇತ್ರದ ಶಾಸಕನಾಗಿ ಮಾದರಿ ಕ್ಷೇತ್ರವನ್ನಾಗಿಸಿರುವಂತೆ ಸಂಸದನಾಗಲು ಜನತೆ ಆಶೀರ್ವದಿಸಲು ಮುಂದಾದರೆ ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ರಾಷ್ಟ್ರದಲ್ಲಿಯೇ ಮಾದರಿ ಎನ್ನುವಂತೆ ಬದಲಾವಣೆ ಮಾಡುವೆ ಎಂದರು.

ಕೆಎಂಎಫ್‌ ಅಧ್ಯಕ್ಷ ಎಸ್. ಭೀಮನಾಯ್ಕ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ರೈತರ ₹72 ಸಾವಿರ ಕೋಟಿ ಸಾಲಮನ್ನಾ ಮಾಡಿದರೆ ಮೋದಿ ಸರ್ಕಾರ ₹16 ಲಕ್ಷ ಕೋಟಿ ಕಾರ್ಪೊರೇಟ್‌ ಕಂಪನಿಗಳ ಸಾಲಮನ್ನಾ ಮಾಡಿದ್ದಾರೆ ಎಂದು ದೂರಿದರು.

ಮಾಜಿ ಸಚಿವ ಎನ್.ಎಂ. ನಬಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಐ. ದಾರುಕೇಶ್‌, ಪಕ್ಷದ ಮುಖಂಡರಾದ ಎಂ.ಎಂ.ಜೆ. ಸತ್ಯ ಪ್ರಕಾಶ್‌, ಪಿ.ಎಚ್. ದೊಡ್ಡ ರಾಮಣ್ಣ, ಕುರಿ ಶಿವಮೂರ್ತಿ, ನಂದಿಬಂಡಿ ಸೋಮಣ್ಣ, ಕೋರಿ ಗೋಣಿ ಬಸಪ್ಪ, ಅಡಿಕಿ ಮಂಜುನಾಥ, ಕೆ.ಎನ್. ಕೊಟ್ರೇಶ್‌, ಡಾ. ತಿಪ್ಪೇಸ್ವಾಮಿ ವೆಂಕಟೇಶ್‌, ವೆಂಕಟೇಶ್‌ ನಾಯ್ಕ, ಅನಿಲ್‌ ಹೊಸಮನಿ, ತೋಟದ ರಾಮಣ್ಣ, ಜಗದೀಶ್, ಶೈಲಜಾ ರಾಜೀವ್‌, ಸಾವಿತ್ರಮ್ಮ ಪ್ರಕಾಶ್‌, ಶಫಿ, ಬದ್ದಿ ಮರಿಸ್ವಾಮಿ, ಟಿ. ಹನುಮಂತಪ್ಪ ಇದ್ದರು.