ಮೋದಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ

| Published : May 06 2024, 12:40 AM IST / Updated: May 06 2024, 01:28 PM IST

ಮೋದಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸಿಎಸ್ಟಿ ಹಾಗೂ ಹಿಂದುಳಿದ ವರ್ಗದವರು ಬಸವರಾಜ ಬೊಮ್ಮಾಯಿ ಅವರಿಗೆ ಮತ ಹಾಕಬೇಕು

ಗದಗ: ಗಾಂಧಿ ಕುಟುಂಬ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಯಾರೇ ಬಂದರೂ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎನ್.‌ ಮಹೇಶ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಶನಿವಾರ ಸಂಜೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚಿಸಲು ಹಮ್ಮಿಕೊಂಡ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಎಸ್ಸಿಎಸ್ಟಿ ಹಾಗೂ ಹಿಂದುಳಿದ ವರ್ಗದವರು ಬಸವರಾಜ ಬೊಮ್ಮಾಯಿ ಅವರಿಗೆ ಮತ ಹಾಕಬೇಕು. ದೇಶದ ಜನತೆಗೆ ವೋಟಿನ ಅಧಿಕಾರ ನೀಡಿದವರು ಬಾಬಾಸಾಹೇಬ್‌ ಅಂಬೇಡ್ಕರ್ , ಭಾರತದಲ್ಲಿ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ಸಿಗಬೇಕಾದರೆ ಯುವಕರಿಗೆ ಮತದಾನ ಹಕ್ಕು ನೀಡಬೇಕು ಎಂದು ಹೇಳಿದರು. 

ಈ ಹಿಂದೆ ಪದವಿ ಪಡೆದವರಿಗೆ, ತೆರಿಗೆ ಕಟ್ಟುವವರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು. ಭಾರತಕ್ಕೆ ಸಂವಿಧಾನ‌ ನೀಡಿದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ ಎರಡು ಬಾರಿ ಸೋಲಿಸಿತು. ಅಂತಹ ಕಾಂಗ್ರೆಸ್‌ನವರಿಗೆ ನೀವು ಮತ ಹಾಕುತ್ತೀರಾ? ಅಂಬೇಡ್ಕರ್ ಗೆದ್ದು ಬಂದಿದ್ದರೆ ಇಂದು ಭಾರತದ ಚಿತ್ರಣವೇ ಬೇರೆ ಅಗಿರುತ್ತಿತ್ತು. ಕಾಂಗ್ರೆಸ್‌ಗೆ ಮತ ನೀಡಿದರೆ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತೆ. ಅಂಬೇಡ್ಕರ್ ಶವ ಸಂಸ್ಕಾರಕ್ಕೆ ಕಾಂಗ್ರೆಸ್‌ನವರು ಜಾಗ ಕೊಡಲಿಲ್ಲ. ಅಂಥವರಿಗೆ ನಾವು ಮತ ಹಾಕಬೇಕಾ? ಕಾಂಗ್ರೆಸ್ ದಲಿತ ವಿರೋಧಿಯಾಗಿದೆ. ಬಸವರಾಜ ಬೊಮ್ಮಾಯಿ ಅವರು ಎಸ್ಸಿಗೆ ಶೇ. 15 ರಿಂದ 17 ರಷ್ಟು, ಎಸ್ಟಿಗಳಿಗೆ ಶೇ.3 ರಿಂದ 5 ರಷ್ಟು ಮೀಸಲಾತಿ ಹೆಚ್ಚಿಸಿರುವುದರಿಂದ ಮತ ಹಾಕಿ ಗೆಲ್ಲಿಸಬೇಕಾಗಿದೆ ಎಂದು ಮನವಿ ಮಾಡಿದರು.

ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ಪ್ರಧಾನಿ ಮೋದಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಸುದೇವ ಕುಟುಂಬವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ. ಜಗತ್ತಿನ ಪ್ರತಿಯೊಂದು ದೇಶದಲ್ಲಿ ಯೋಗ್ಯಾಭ್ಯಾಸ ನಡೆಯುತ್ತಿದೆ. ಕುರುಬರು ಬರೀ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರೆ ಎನ್ನುವದು ತಪ್ಪು, ಕಳೆದ 30 - 40  ವರ್ಷಗಳಿಂದ ಮೀಸಲಾತಿಗೆ ನಡೆಯುತ್ತಿದ್ದ ಹೋರಾಟ 2015 ರಲ್ಲಿ ನಮ್ಮ ಸಮುದಾಯದ ಮುಖ್ಯಮಂತ್ರಿ ಅವರಿದ್ದರೂ ಕೆಲಸ ಆಗಲಿಲ್ಲ. ಆನಂತರ ಸಮ್ಮಿಶ್ರ ಸರ್ಕಾರದಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅವಕಾಶ ನೀಡಿತು. ಆನಂತರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಬಸವರಾಜ ಬೊಮ್ಮಾಯಿ ಐತಿಹಾಸಿಕ ಕಾರ್ಯ ಮಾಡಿದ್ದಾರೆ ಎಂದರು.

ಮಹೇಂದ್ರ ಕೌತಾಳ ಮಾತನಾಡಿ, ಜ್ಞಾನ ಬಲದಿಂದ ದೇಶ ಅಭಿವೃದ್ಧಿ ಹೊಂದಬಹುದು ಎನ್ನುವುದಕ್ಕೆ ಡಾ. ಬಿ.ಆರ್‌. ಅಂಬೇಡ್ಕರ್ ಸಾಕ್ಷಿಯಾಗಿದ್ದಾರೆ. ಮೋದಿ ಅವರು ಅಂಬೇಡ್ಕರ್ ವಿಚಾರಧಾರೆ ಅಳವಡಿಸಿಕೊಂಡು ದೇಶದ ಅಭಿವೃದ್ಧಿ ಮಾಡಿದ್ದಾರೆ. ಬೊಮ್ಮಾಯಿ ಅವರ ಋಣ ನಮ್ಮೆಲ್ಲರ ಮೇಲಿದೆ. ಅದನ್ನು ಮೇ 7ರಂದು ಮತ ಹಾಕುವ ಮೂಲಕ ತೀರಿಸಬೇಕಾಗಿದೆ ಎಂದರು.

ಯುವ ಮುಖಂಡ ಅನಿಲ ಮೆಣಸಿನಕಾಯಿ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಉಷಾ ದಾಸರ, ಕಾಂತಿಲಾಲ್‌ ಬನ್ಸಾಲಿ, ರವಿ ದಂಡಿನ, ಶೇಖರ ಸಜ್ಜನರ, ಮಂಜುನಾಥ ಕೋಟ್ನಿಕಲ್, ಮಂಜುನಾಥ ಮುಳಗುಂದ, ಅನಿಲ ಅಬ್ಬಿಗೇರಿ, ಬಸವರಾಜ ಕುರಿ, ರವಿ ವಗ್ಗನವರ ಇದ್ದರು.