ಕಾಂಗ್ರೆಸ್‌ನಿಂದ ಧಾರ್ಮಿಕ ನಂಬಿಕೆ ಒಡೆಯುವ ಹುನ್ನಾರ: ಹರಿಪ್ರಕಾಶ

| Published : May 06 2024, 12:40 AM IST

ಕಾಂಗ್ರೆಸ್‌ನಿಂದ ಧಾರ್ಮಿಕ ನಂಬಿಕೆ ಒಡೆಯುವ ಹುನ್ನಾರ: ಹರಿಪ್ರಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಏಕರೂಪ ನಾಗರಿಕ ಸಂಹಿತೆ ಬಿಜೆಪಿಯ ಅಪೇಕ್ಷೆಯಾಗಿದ್ದರೆ, ಕಾಂಗ್ರೆಸಿನದು ಮುಸ್ಲಿಮರ ತುಷ್ಟೀಕರಣದ ನೀತಿ ಎಂದು ಅವರ ಪ್ರಣಾಳಿಕೆಯಲ್ಲಿಯೇ ಗೋಚರವಾಗುತ್ತದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.

ಯಲ್ಲಾಪುರ: ಛತ್ರಪತಿ ಶಿವಾಜಿ ಕಟ್ಟಿದ ಹಿಂದವೀ ಸಾಮ್ರಾಜ್ಯದ ನಿವಾಸಿಗಳಾಗಿರುವ ನಮ್ಮೆಲ್ಲರಿಗೆ ಶ್ರೀರಾಮನ ಆದರ್ಶವೇ ಬದುಕಿನ ಆಧಾರ. ಆದರೆ ಕಾಂಗ್ರೆಸ್ ನಮ್ಮ ದೇಶದ ಸಂಸ್ಕೃತಿ, ಧರ್ಮಗಳಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದು, ನಮ್ಮ ಧಾರ್ಮಿಕ ನಂಬಿಕೆಗಳನ್ನು ಒಡೆಯುವ ಹುನ್ನಾರ ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೇಮನೆ ಆರೋಪಿಸಿದರು.

ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಉಚಗೇರಿಯ ಗೌಳಿವಾಡಾದಲ್ಲಿ ಶುಕ್ರವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಏಕರೂಪ ನಾಗರಿಕ ಸಂಹಿತೆ ಬಿಜೆಪಿಯ ಅಪೇಕ್ಷೆಯಾಗಿದ್ದರೆ, ಕಾಂಗ್ರೆಸಿನದು ಮುಸ್ಲಿಮರ ತುಷ್ಟೀಕರಣದ ನೀತಿ ಎಂದು ಅವರ ಪ್ರಣಾಳಿಕೆಯಲ್ಲಿಯೇ ಗೋಚರವಾಗುತ್ತದೆ. ಕಾಂಗ್ರೆಸ್ ಆಡಳಿತದಿಂದಾಗಿ ರಾಜ್ಯ ದಿವಾಳಿಯ ಅಂಚಿನಲ್ಲಿ ಬಂದು ನಿಂತಿದೆ. ಬಂದಿರುವ ಲೋಕಸಭಾ ಚುನಾವಣೆ ಇಂತಹ ಸಂದಿಗ್ಧಗಳಿಗೆ ಪರಿಹಾರ ನೀಡಲಿದ್ದು, ಇದು ದೇಶದ ಭವಿಷ್ಯ ನಿರ್ಮಾಣ ಮಾಡುವ ಚುನಾವಣೆಯೂ ಆಗಿದೆ. ಮತದಾರರು ಕ್ಷಣಿಕ ಭಾಗ್ಯಗಳಿಗೆ ಕಿವಿಗೊಟ್ಟರೆ, ಬದುಕಿನ ಭಾಗ್ಯ ಕಳೆದುಹೋಗುವ ಅಪಾಯ ಇದೆ ಎಂಬುದನ್ನು ಅರಿಯಬೇಕಾಗಿದೆ. ತನ್ಮೂಲಕ ದೇಶದ ಉಳಿವಿಗಾಗಿ ಮತದಾರರು ಬಿಜೆಪಿ ಗೆಲುವಿನ ಶಪಥ ಮಾಡಬೇಕು ಎಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಈ ಬಾರಿಯ ಮಹತ್ವದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನೀಡುವ ಗ್ಯಾರಂಟಿಗಳ ಮೋಹಕ್ಕೊಳಗಾಗದೇ ನಮ್ಮ ದೇಶದ ಮಠ, ಮಂದಿರ, ಸಂಸ್ಕೃತಿಗಳ ರಕ್ಷಣೆಗಾಗಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಪಕ್ಷದ ಕೆಲವರು ಲಾಭ ಸಿಗುವ ಕಡೆಗೆ ಹೋಗಿದ್ದಾರೆ. ಆದರೆ, ನಿಷ್ಠಾವಂತ ಕಾರ್ಯಕರ್ತರು ಪಕ್ಷದಲ್ಲಿಯೇ ಇದ್ದು, ಪಕ್ಷವನ್ನು ಪ್ರಾಮಾಣಿಕವಾಗಿ ಬೆಳೆಸುತ್ತಾರೆ ಎಂದು ಹೇಳಿದರು.

ನಿಕಟಪೂರ್ವ ಮಂಡಲಾಧ್ಯಕ್ಷ ಜಿ.ಎನ್. ಗಾಂವ್ಕರ ಮಾತನಾಡಿ, ರಾಷ್ಟ್ರದ್ರೋಹಿಗಳ ಮತ್ತು ಹಿತಚಿಂತಕರ ನಡುವಿನ ಈ ಬಾರಿಯ ಚುನಾವಣೆಯ ಕದನದಲ್ಲಿ ಬಿಜೆಪಿ ಗೆಲುವು ಏಕೆಂಬುದನ್ನು ಮತದಾರರೇ ಚಿಂತಿಸಬೇಕು. ಸಮರ್ಪಕ ನಾಯಕತ್ವಕ್ಕಾಗಿ ಬಿಜೆಪಿಯನ್ನು ಆಯ್ಕೆ ಮಾಡಿ, ರಾಷ್ಟ್ರದ್ರೋಹಿಗಳನ್ನು ದೇಶದಿಂದ ಓಡಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ ಮಾತನಾಡಿ, ೬೦ ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ನಡೆಸಿದ ಆಡಳಿತದ ಪರಿಣಾಮ ದೇಶದಲ್ಲಿ ಬಡತನ ಮಿತಿಮೀರಿದೆ. ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಕಾಂಗ್ರೆಸ್ ಇಸ್ಲಾಂ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಇಂತಹ ಅಪಾಯದಿಂದ ಪಾರಾಗಿ, ದೇಶದ ಸಂಸ್ಕೃತಿ ಉಳಿಸಿಕೊಳ್ಳಲು ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ ಎಂದರು.

ಕುಂದರಗಿ ಗ್ರಾಪಂ ಸದಸ್ಯ ಗಣೇಶ ಹೆಗಡೆ ಮಾತನಾಡಿ, ಬಿಜೆಪಿಯಿಂದ ಸಾಧ್ಯವಿದ್ದಷ್ಟು ಲಾಭ ತೆಗೆದುಕೊಂಡ ಅನೇಕರು ಚುನಾವಣೆಯ ಸಂದರ್ಭದಲ್ಲಿ ಪಕ್ಷಾಂತರ ಮಾಡುತ್ತಿರುವುದು ವಿಪರ್ಯಾಸ. ಈ ಬಾರಿಯ ಚುನಾವಣೆ ರಾಷ್ಟ್ರೀಯತೆಯ ಭಾವದ ಅಲೆಯನ್ನು ಬಿಂಬಿಸುವುದಾಗಿದೆ ಎಂದರು.

ಶಕ್ತಿಕೇಂದ್ರದ ಅಧ್ಯಕ್ಷ ಸೀತಾರಾಮ ಗೌಡ, ಉಚಗೇರಿ ಬೂತ್ ಅಧ್ಯಕ್ಷ ಸೋಮನಾಥ ಜೋಷಿ, ಯುವ ಮೋರ್ಚಾ ಕಾರ್ಯದರ್ಶಿ ರಾಘು ಕುಂದರಗಿ, ಪ್ರಮುಖರಾದ ವಿಶ್ವನಾಥ ಬಾಮಣಕೊಪ್ಪ, ನಾರಾಯಣ ಖಾಂಡೇಕಾರ್ ಉಪಸ್ಥಿತರಿದ್ದರು. ನಟರಾಜ ಗೌಡರ್ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿದರು. ಸಿದ್ದು ಜಾನ್ಕರ್ ನಿರ್ವಹಿಸಿದರು. ಭಾಗು ಶೆಳ್ಕೆ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಚಿಪಗೇರಿಯಿಂದ ಗೌಳಿವಾಡಾ ವರೆಗೆ ನಡೆದ ಬೈಕ್ ರ‍್ಯಾಲಿಯಲ್ಲಿ ಅತ್ಯಧಿಕ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.