ಬಿಜೆಪಿ 200 ಸ್ಥಾನಗಳನ್ನು ಗೆಲ್ಲೋದು ಕಷ್ಟ

| Published : May 06 2024, 12:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಭಾನುವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೇ 7ರಂದು 2ನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 10 ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತೇವೆ. ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳ ಪೈಕಿ 8 ರಿಂದ 9 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಒಟ್ಟು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಂವಿಧಾನ ನಮ್ಮ ಧರ್ಮಗ್ರಂಥ ಎಂದು ಜಾಹಿರಾತು ಮೂಲಕ ಹೇಳಿದ್ದಾರೆ. ಸಂವಿಧಾನ ಜಾರಿ ಆದ ಬಳಿಕ ಸಂವಿಧಾನ ಬಗ್ಗೆ ಬಿಜೆಪಿಯವರು ಏನು ಹೇಳಿದ್ದಾರೆ, ಬರೆದಿದ್ದಾರೆ ಎಂದು ಇತಿಹಾಸದ ದಾಖಲಾತಿ ಇದೆ. ಈಗಿನ ನಾಯಕರು ಸಂವಿಧಾನ ಬಗ್ಗೆ ಏನು‌ ಹೇಳಿದರು ಎಂಬುವುದು ಗೊತ್ತಾಗುತ್ತಿದೆ.‌ ಮೋಹನ್ ಭಾಗವತ್ ಅವರು ಸ್ವಲ್ಪ ತಾಳಿ ಸಂವಿಧಾನ ಬದಲು ಮಾಡುತ್ತೇವೆ ಎಂದು ಹೇಳುತ್ತಾರೆ. ಸಂಸದ ಅನಂತಕುಮಾರ ಹೆಗಡೆ, ಸಂವಿಧಾನ ಬದಲಿಸಲು ನಾವು ಬಂದಿದ್ದೇವೆ ಎಂದಿದ್ದಾರೆ. ಆದ್ದರಿಂದ ಈ ಚುನಾವಣೆ ಎರಡನೇ ‌ಸ್ವಾತಂತ್ರ್ಯ ಹೋರಾಟ ಇದ್ದ ಹಾಗೆ. ಸಂವಿಧಾನ ಉಳಿವಿಗಾಗಿ ಹೋರಾಟ ನಡೆದಿದೆ ಎಂದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ:

ಸೋಲಿನ ಭೀತಿ ಎದುರಾಗಿರುವುದರಿಂದ ಹತಾಶಗೊಂಡಿರುವ ನರೇಂದ್ರ ಮೋದಿ ಅವರು ತಾವು ಪ್ರಧಾನಿ ಎಂಬುದನ್ನು ಮರೆತು ಭಜರಂಗದಳದ ಕಾರ್ಯಕರ್ತರಂತೆ ಮಾತನಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿನ ತಮ್ಮ ಒಂದು ಸಾಧನೆ ಕುರಿತೂ ಹೇಳದ ಮೋದಿ, ಧರ್ಮ ಧರ್ಮಗಳ ನಡುವೆ ಬಿರುಕು ಮೂಡುವ ರೀತಿಯಲ್ಲಿ, ಭಜರಂಗ ದಳದ ಕಾರ್ಯಕರ್ತರಂತೆ ಭಾಷಣ ಮಾಡುತ್ತಿದ್ದಾರೆ. ಪ್ರಧಾನಿ ‌ಮೋದಿ 10 ವರ್ಷಗಳ ಸಾಧನೆ ಬಗ್ಗೆ ಮಾತನಾಡುವುದಿಲ್ಲ. 10 ವರ್ಷದಲ್ಲಿ ಮಾಡಿದ ಕನಿಷ್ಠ 10 ಸಾಧನೆ ಬಗ್ಗೆ ಹೇಳಲಿ ನೋಡೊಣ ಎಂದು ಸವಾಲು ಹಾಕಿದರು.

ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸೆ.23 ರಂದು ಬರಪರಿಹಾರಕ್ಕೆ ಮನವಿ ಮಾಡಲಾಗಿದೆ. 18,172 ಕೋಟಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಕೇಳಿದೆವು. ಕೇಂದ್ರ ತಂಡ ಬರಪರಿಹಾರ ಅಧ್ಯಯನ ನಡೆಸಿತು. ರಾಜ್ಯದ ಮಂತ್ರಿಗಳು, ನಾನು ಕೇಂದ್ರ ಸಚಿವರು, ಪ್ರಧಾನಿಯವರನ್ನು ಸ್ವತಃ ಕೋರಿದರೂ ಒಂದು ರುಪಾಯಿ ಕೊಡಲಿಲ್ಲ. ಆದ್ದರಿಂದ ಮನವಿ ಸಲ್ಲಿಸಿದ 7 ತಿಂಗಳ ನಂತರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದೆವು. ಸುಪ್ರೀಂ ಚಾಟಿ ಬೀಸಿದ ನಂತರ ₹3454 ಕೋಟಿ ಕೊಟ್ಟರು ಎಂದರು. ಬರಬರಿಹಾರ ಇನ್ನೂ ಕೊಡದೆ ಸುಳ್ಳು ಹೇಳಿದ್ದಾರೆ. ಬಳಿಕ ಗ್ಯಾರಂಟಿ ಯೋಜನೆಗೆ ದುಡ್ಡು ಕೇಳಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್ ಸುಳ್ಳು ಹೇಳಿದರು. ನಾವು ಗ್ಯಾರಂಟಿ ಯೋಜನೆಗೆ ದುಡ್ಡು ಕೇಳಿಲ್ಲ. ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಮೇಲೆ ಬರಪರಿಹಾರ ಹಣ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಮೋದಿ ಚೊಂಬು‌ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ರೈತರ ಸಾಲ ಮನ್ನಾ ಮಾಡಿಲ್ಲ. ಇವರು ಅಂಬಾನಿ ಅದಾನಿ‌ ಅವರ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿಗೆ ರೈತರ ಸಾಲಮನ್ನಾ ಮಾಡಬಾರದು ಎಂಬುವುದು ಹಿಡನ್ ಅಜೆಂಡಾ ಆಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದು ಸೇರಿದಂತೆ 25 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದರು.ಬಿಜೆಪಿಯವರಿಗೆ ಗ್ಯಾರಂಟಿ ಅಂದರೆ ಆಗುವುದಿಲ್ಲ. ಮೊದಲು ಗ್ಯಾರಂಟಿ ಅನುಷ್ಠಾನ ಮಾಡುವುದಿಲ್ಲ, ರಾಜ್ಯ ದಿವಾಳಿ ಆಗುತ್ತದೆ, ಅಭಿವೃದ್ಧಿ ಕುಂಠಿತವಾಗುತ್ತದೆ, ಗ್ಯಾರಂಟಿ ನಿಲ್ಲಿಸಿ ಬಿಡುತ್ತೇವೆ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ನಮ್ಮ ಮೇಲೆ ನಂಬಿಕೆ ಬರಬಾರದು ಎಂದು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಅವಕಾಶ ವಂಚಿತರಿಗೆ ನ್ಯಾಯ ನೀಡಲು, ಸರ್ಕಾರದ ಲಾಭ ದೊರಕಿಸಿಕೊಡಲು ಜಾತಿ ಗಣತಿ ಮುಖ್ಯ. ಪಾಲುದಾರಿಕೆ ನ್ಯಾಯ, ಶ್ರಮಿಕ ನ್ಯಾಯ ಯೋಜನೆ ಗ್ಯಾರಂಟಿಗಳನ್ನು ಜಾರಿ ಮಾಡಲಾಗುವುದು. ರಾಜ್ಯದಿಂದ ₹ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತದೆ. ಆದರೆ ರಾಜ್ಯಕ್ಕೆ ₹100 ಗೆ ಕೇವಲ ₹13 ಮರಳುತ್ತಿರುವುದು ನಮಗಾಗಿರುವ ಅನ್ಯಾಯ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡಲು ತಿಳಿಸಿದ್ದರೂ ಅವರು ಮಾಡಲಿಲ್ಲ. ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯದ 25 ಸಂಸದರಲ್ಲಿ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಆದರೆ ಡಿ.ಕೆ.ಸುರೇಶ್ ಮಾತ್ರ ಪ್ರಶ್ನಿಸಿದರು, ಮೋದಿ ಮುಂದೆ ಮಾತನಾಡುವ ಧೈರ್ಯ ಇವರಿಗಿಲ್ಲಾ. ಇವರಿಗೆ ಪುಕ್ಕಲುತನ ಇದೆ ಎಂದು ಹರಿಹಾಯ್ದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯೊಂದಿಗೆ ಪ್ರಜ್ವಲ್‌ ರೇವಣ್ಣ ಸಂಸರಾಗಿದ್ದು, ಕಳೆದ ಮೂರು-ನಾಲ್ಕು ವರ್ಷಗಳ ಹಳೆಯದು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆ ಸಮಯದಲ್ಲಿ ಯಾರೊಬ್ಬರು ದೂರು ಕೊಟ್ಟಿರಲಿಲ್ಲ. ಈಗ ದೂರು ಕೊಟ್ಟಿದ್ದು, ತನಿಖೆ ನಡೆಸಲಾಗುತ್ತಿದೆ. ಪ್ರಜ್ವಲ್‌ ರೇವಣ್ಣನನ್ನು ಬ್ಲೂ ಕಾರ್ನ್‌ ನೋಟಿಸ್‌ ಜಾರಿಗೊಳಿಸಿ, ಕಾನೂನು ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದ ರ್ಶಿ ರಣದೀಪಸಿಂಗ್‌ ಸುರ್ಜೆವಾಲಾ, ಸಚಿವರಾದ ಎಚ್‌.ಸಿ.ಮಹಾದೇವಪ್ಪ, ಎಂ.ಸಿ.ಸುಧಾಕರ, ಶಾಸಕರಾದ ಆಸೀಪ್ ಸೇಠ್‌, ಅಶೋಕ ಪಟ್ಟಣ, ನಾಗರಾಜ ಯಾದವ, ಎಸ್‌.ಎ.ಸಲೀಂಅಹ್ಮದ ಉಪಸ್ಥಿತರಿದ್ದರು.

-----