ಪೆನ್‌ಡ್ರೈವ್ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಸನ ಎಸ್‌ಪಿಗೆ ಜೆಡಿಎಸ್‌ ಆಗ್ರಹ

| Published : May 07 2024, 01:08 AM IST

ಪೆನ್‌ಡ್ರೈವ್ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಸನ ಎಸ್‌ಪಿಗೆ ಜೆಡಿಎಸ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪೆನ್‌ಡ್ರೈವ್‌ ಪ್ರಕರಣದಲ್ಲಿ ನಕಲಿ ಸುದ್ದಿ, ನಕಲಿ ಪೋಟೋಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಹಾಗೂ ಮಹಿಳೆಯರಿಗೆ ಅಪಮಾನ ಆಗದಂತೆ ನಿಗಾ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜೆಡಿಎಸ್ ಮುಖಂಡರು ಹಾಸನ ಎಸ್ಪಿ ಮಹಮ್ಮದ್ ಸುಜೀತಾ ಅವರಿಗೆ ಮನವಿ ಮಾಡಿದ್ದಾರೆ.

ಪಕ್ಷದ ಮುಖಂಡರಿಂದ ಎಸ್ಪಿ ಮಹಮ್ಮದ್ ಸುಜೀತಾಗೆ ಮನವಿ । ನಕಲಿ ವಿಡಿಯೋಗಳಿಗೆ ಕಡಿವಾಣ ಹಾಕಿ

ಕನ್ನಡಪ್ರಭ ವಾರ್ತೆ ಹಾಸನ

ಪೆನ್‌ಡ್ರೈವ್ ಹಗರಣಕ್ಕೆ ಸಂಬಂಧಿಸಿದಂತೆ ಜಾಲತಾಣದಲ್ಲಿ ನಕಲಿ ಸುದ್ದಿ, ನಕಲಿ ಪೋಟೋಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಹಾಗೂ ಮಹಿಳೆಯರಿಗೆ ಅಪಮಾನ ಆಗದಂತೆ ನಿಗಾ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜೆಡಿಎಸ್ ಮುಖಂಡರು ಎಸ್ಪಿ ಮಹಮ್ಮದ್ ಸುಜೀತಾ ಅವರಿಗೆ ಮನವಿ ಮಾಡಿದ್ದಾರೆ.

ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ಶಾಸಕ ಸಿ.ಎನ್. ಬಾಲಕೃಷ್ಣ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಮಾಧ್ಯಮ ವಕ್ತಾರ ಹೊಂಗೆರೆ ರಘು, ಬ್ಯಾಂಕ್ ನಿರ್ದೇಶಕ ನಾಗರಾಜು ಮನವಿ ಪತ್ರ ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

ಚರ್ಚೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ‘ಇತ್ತೀಚೆಗೆ ಪೆನ್‌ಡ್ರೈವ್ ಹಗರಣಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಕೆಲವರು ಅವರದು, ಇವರದು ಇದೆ ಎನ್ನುವ ಅಭಿಪ್ರಾಯಗಳನ್ನು ಮಾತನಾಡಿಕೊಳ್ಳುತ್ತಿರುವುದು ತಿಳಿದು ಬಂದಿದೆ. ನಿಮ್ಮ ಇಂಟಲಿಜೆನ್ಸ್ ಪ್ರಕಾರ ಮಫ್ತಿಯಲ್ಲಿ ಬಂದು ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಹರಿಸಬೇಕು. ಇದು ಜಿಲ್ಲೆಯಲ್ಲ. ಸಮಾಜದ ಗೌರವದ ಪ್ರಶ್ನೆಯಾಗಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ಜಾಲತಾಣದಲ್ಲಿ ನಕಲಿ ಸುದ್ದಿ, ನಕಲಿ ಪೋಟೋಗಳನ್ನು ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಹರಿಸಿ ಪರಿಶೀಲಿಸಿ ಕಾನೂನಿನಲ್ಲಿ ಗೌರವ ಕೊಡಲು ಅವಕಾಶ ಮಾಡಿಕೊಡಬೇಕು. ಯಾವ ಸಮಯದಲ್ಲೂ ಮಹಿಳೆಯರಿಗೆ ಅಪಮಾನ ಆಗದಂತೆ ಜಿಲ್ಲಾಡಳಿತ ಗಮನಹರಿಸಬೇಕು’ ಎಂದು ಮನವಿ ಮಾಡಲಾಗಿದೆ.

ಪ್ರಕರಣದ ಬಗ್ಗೆ ಎಲ್ಲೆದಂದರಲ್ಲಿ ಇಲ್ಲಸಲ್ಲದ ಚರ್ಚೆ ಮಾಡದಂತೆ ಸೂಕ್ತ ನಿರ್ದೇಶನ ಕೊಡಬೇಕು ಎಂದು ಕೋರಿದ್ದೇವೆ. ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಿದ್ದು, ಈ ವಿಚಾರವಾಗಿ ಸಹಾಯವಾಣಿ ತೆರೆಯಲಾಗಿದೆ. ದೂರುಗಳು ಇದ್ದರೆ ನೇರವಾಗಿ ಸಂಪರ್ಕಿಸಬಹುದು. ಘಟನೆ ತಿಳಿಸಿದರೆ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.