ಕಸಾಪ ನಾಡಿನ ಪ್ರಾತಿನಿಧಿಕ ಸಂಸ್ಥೆ: ಡಾ.ಎಂ.ಕೆ. ಭಟ್

| Published : May 07 2024, 01:00 AM IST

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಪರಿಷತ್ ರಚನೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಕೊಡುಗೆ ಅಪಾರವಾದ್ದು. ಪರಿಷತ್ತು ಆರಂಭವಾಗ ದಿನದಿಂದ ನಾಡು, ನುಡಿ ಬಗ್ಗೆ ನಿರಂತರ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಮೂಲಕ ಜನ ಜಾಗೃತಿ ಮೂಡಿಸುತ್ತಿದೆ.

ಕನ್ನಡಪ್ರಭ ವಾರ್ತೆ ಸೊರಬ

ಕನ್ನಡ ನಾಡು, ನುಡಿ, ಸಾಹಿತ್ಯ ಸಂರಕ್ಷಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯ ಶ್ಲಾಘನೀಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಡಾ.ಎಂ.ಕೆ. ಭಟ್ ಹೇಳಿದರು.

ಭಾನುವಾರ ಪಟ್ಟಣದ ಗುರುಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ೧೦೯ನೇ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಪರಿಷತ್ ರಚನೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಕೊಡುಗೆ ಅಪಾರವಾದ್ದು. ಪರಿಷತ್ತು ಆರಂಭವಾಗ ದಿನದಿಂದ ನಾಡು, ನುಡಿ ಬಗ್ಗೆ ನಿರಂತರ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಮೂಲಕ ಜನ ಜಾಗೃತಿ ಮೂಡಿಸುತ್ತಿದೆ ಎಂದರು.

ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಸ್.ಎಂ.ನೀಲೇಶ ಮಾತನಾಡಿ, ಭಾವ, ಬದುಕು ಬೆಸೆಯಲು ಕನ್ನಡ ಪ್ರಾತಿನಿಧಿಕ ಭಾಷೆಯಾಗಿದೆ. ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆ ಉಳಿಸಿ ಬೆಳೆಸಲು ಇಂದಿಗೂ ಹೋರಾಟಗಳ ನಡೆಸುವಂತಾಗಿದ್ದು ವಿಪರ್ಯಾಸ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕನ್ನಡ ಭಾಷೆ ಬಗ್ಗೆ ಅಸಡ್ಡೆ ತೋರದೆ ಅಂತಃಕರಣದಿಂದ ನಾಡಿನಲ್ಲಿ ಪರಿಣಾಮಕಾರಿ ಬಳಕೆಯ ಭಾಷೆಯಾಗುವ ಜನತೆ, ಉದ್ಯೋಗ ಭಾಷೆಯಾಗಿ ಕನ್ನಡ ಬೆಳೆಸಲು ಇಚ್ಛಾಶಕ್ತಿ ತೋರಬೇಕು ಎಂದ ಅವರು ಕನ್ನಡ ನಾಡು, ನುಡಿ ಪೋಷಿಸುವ ಸಾಹಿತ್ಯ ಸಮ್ಮೇಳನ, ಯುವಜನ ಸಮ್ಮೇಳನಗಳನ್ನು ಹೋಬಳಿ, ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳುವಂತಾಗಬೇಕು. ಇದಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಪಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಎಸ್.ಕೃಷ್ಣಾನಂದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ಗಣಪತಿ, ಕಸಾಪ ಖಜಾಂಚಿ ನಾಗರಾಜ್ ಜೈನ್, ರೇಣುಕಮ್ಮ ಗೌಳಿ, ರತ್ನಮ್ಮ ಇತರರಿದ್ದರು. ವಿನೋದ್ ವಾಲ್ಮೀಕಿ ಮತದಾನ ಜಾಗೃತಿ ಗೀತೆ ಹಾಡಿದರು. ಕಸಾಪ ಕಾರ್ಯದರ್ಶಿ ಬಿ.ರಮೇಶ್ ನಿರೂಪಿಸಿ, ಎನ್.ಎಸ್.ಅರುಣ್ ಕುಮಾರ್ ಸ್ವಾಗತಿಸಿ, ಎಂ.ಸವಿತಾ ವಂದಿಸಿದರು.