ಕೊಪ್ಪ ಕಂದಾಯ ಉಪ ಕೇಂದ್ರ: ಘೋಷಣೆ ಕಡತಕ್ಕೆ ಧೂಳು

| Published : May 06 2024, 12:34 AM IST

ಸಾರಾಂಶ

ಕೊಪ್ಪ ತಾಲೂಕು ಕೇಂದ್ರ ಶೃಂಗೇರಿ ಹಾಗೂ ಎನ್.ಆರ್. ಪುರ ತಾಲೂಕುಗಳ ಮಧ್ಯ ಭಾಗದಲ್ಲಿದೆ. ಪ್ರತಿ ತಾಲೂಕುಗಳಿಗೆ ಅರ್ಧ ಗಂಟೆಯೊಳಗೆ ತಲುಪಬಹುದಾದ ಅಂತರದಲ್ಲಿವೆ.

ಆರ್. ತಾರಾನಾಥ್‌

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕೊಪ್ಪ ಕಂದಾಯ ಉಪ ವಿಭಾಗ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು.

ಇದು, ಇಂದಿನ ಬೇಡಿಕೆ ಅಲ್ಲ, ಕಳೆದ ಒಂದು ದಶಕದ ಹಿಂದೆಯೇ ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ಮುಂದಿದ್ದ ಪ್ರಸ್ತಾವನೆ. ಈ ಉದ್ದೇಶದಿಂದ ಜಿಲ್ಲಾಡಳಿತ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಿ 2017ರ ಜುಲೈ 4ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿತ್ತು. ಆದರೆ, ಈವರೆಗೆ ಕಾರ್ಯರೂಪಕ್ಕೆ ತರುವ ಯಾವುದೇ ಮುನ್ಸೂಚನೆ ಕಂಡು ಬರುತ್ತಿಲ್ಲ. ಇದರ ಬಗ್ಗೆ ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ. ಸರ್ಕಾರದ ಮಟ್ಟದಲ್ಲೂ ಕಡತಕ್ಕೆ ಮರುಜೀವ ನೀಡುವ ಪ್ರಯತ್ನ ನಡೆದಿಲ್ಲ ಎಂಬುದು ವಾಸ್ತವಿಕ ಸಂಗತಿ.

ಅಗತ್ಯತೆ:

ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕುಗಳು ಜಿಲ್ಲಾ ಕೇಂದ್ರದಿಂದ ಸುಮಾರು 100ಕಿ.ಮೀ. ದೂರದಲ್ಲಿವೆ. ಇವುಗಳಲ್ಲಿ ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳು ಚಿಕ್ಕಮಗಳೂರು ಕಂದಾಯ ಉಪ ವಿಭಾಗದ ಕಚೇರಿ ಇರುವ ಚಿಕ್ಕಮಗಳೂರಿಗೆ 100 ಕಿ.ಮೀ. ದೂರದಲ್ಲಿವೆ. ನರಸಿಂಹರಾಜಪುರ ತಾಲೂಕಿನಿಂದ ಕಂದಾಯ ಉಪ ವಿಭಾಗವಿರುವ ತರೀಕೆರೆ 63 ಕಿ.ಮೀ. ದೂರದಲ್ಲಿದೆ.

ಪ್ರಕೃತಿ ವಿಕೋಪ, ಬೆಂಕಿ ಆಕಸ್ಮಿಕ, ಇತರೆ ತುರ್ತು ಪರಿಸ್ಥಿತಿಗಳಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಪರಿಸ್ಥಿತಿಗಳಲ್ಲಿ ಉಪ ವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಯವರು ಈ ಮೂರು ತಾಲೂಕುಗಳನ್ನು ತಲುಪಲು ಸುಮಾರು 3 ಗಂಟೆ ಪ್ರಯಾಣ ಮಾಡಬೇಕು. ಅದೇ ರೀತಿ ಸಾರ್ವಜನಿಕರು ಅಪೀಲು ನ್ಯಾಯಾಲಯ ಪ್ರಕರಣಗಳು, ಪಹಣಿ ತಿದ್ದುಪಡಿ ಇತರೆ ಕಚೇರಿ ಕೆಲಸಕ್ಕಾಗಿ ಚಿಕ್ಕಮಗಳೂರಿಗೆ ಬರಬೇಕಾಗಿದೆ. ಈ ತಾಲೂಕುಗಳು ಗುಡ್ಡ, ಬೆಟ್ಟ ಪರ್ವತ ಶ್ರೇಣಿಗಳಿಂದ ಕೂಡಿದ್ದು ಅತಿ ಹೆಚ್ಚು ತಿರುವುಗಳಿಂದ ಕೂಡಿದ ಪ್ರದೇಶವಾಗಿದ್ದರಿಂದ ಸಮಯಾವಾಕಾಶ ಹೆಚ್ಚು ಬೇಕಾಗುತ್ತದೆ.

ಕೊಪ್ಪ ತಾಲೂಕು ಕೇಂದ್ರ ಶೃಂಗೇರಿ ಹಾಗೂ ಎನ್.ಆರ್. ಪುರ ತಾಲೂಕುಗಳ ಮಧ್ಯ ಭಾಗದಲ್ಲಿದೆ. ಪ್ರತಿ ತಾಲೂಕುಗಳಿಗೆ ಅರ್ಧ ಗಂಟೆಯೊಳಗೆ ತಲುಪಬಹುದಾದ ಅಂತರದಲ್ಲಿವೆ.

- ಚಿಕ್ಕಮಗಳೂರು ಕಂದಾಯ ಉಪ ವಿಭಾಗ ಕಚೇರಿ ಕೊಪ್ಪ ಹಾಗೂ ಶೃಂಗೇರಿಯಿಂದ 100 ಕಿ.ಮೀ.ದೂರದಲ್ಲಿದೆ

- ತರೀಕೆರೆ ಕಂದಾಯ ಉಪ ವಿಭಾಗ ಕಚೇರಿ ಎನ್.ಆರ್.ಪುರದಿಂದ 63 ಕಿ.ಮೀ. ದೂರದಲ್ಲಿದೆ

- ಕೊಪ್ಪದಲ್ಲಿ ಹಾಲಿ ಪೊಲೀಸ್ ಉಪಾಧೀಕ್ಷಕರ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗಳು ಇವೆ. ಇತ್ತೀಚೆಗೆ ಮೆಸ್ಕಾಂ ಉಪ ವಿಭಾಗ ಕೇಂದ್ರವನ್ನು ಹೊಸದಾಗಿ ತೆರೆಯಲಾಗಿದೆ

- ಚಿಕ್ಕಮಗಳೂರಿನಿಂದ ಕೊಪ್ಪ ಹಾಗೂ ಶೃಂಗೇರಿಗೆ ಪ್ರಯಾಣ ಮಾಡಲು 3 ತಾಸು ಬೇಕು

- ಶೃಂಗೇರಿ ಹಾಗೂ ಎನ್.ಆರ್.ಪುರದಿಂದ ಕೊಪ್ಪಕ್ಕೆ ಬರಲು ಅರ್ಧ ಗಂಟೆ ಸಾಕುಕೊಪ್ಪ ಕಂದಾಯ ಉಪ ವಿಭಾಗ ಘೋಷಣೆ ಮಾಡಬೇಕು, ಇಲ್ಲೊಂದು ಆರ್‌ಟಿಓ ಕಚೇರಿ ತೆರೆಯಬೇಕು, ಅರಣ್ಯ ಪ್ರದೇಶದಲ್ಲಿನ ಹಕ್ಕು ಬಾಧ್ಯತೆ ಕುರಿತು ಮನವಿಗಳ ಬಗ್ಗೆ ವಿಚಾರಣೆ ನಡೆಸಲು ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನು ಕೊಪ್ಪಕ್ಕೆ ನೇಮಕ ಮಾಡಬೇಕೆಂಬ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ಇದರಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ. ಈ ಕೆಲಸದ ನಿಮಿತ್ತ ಚಿಕ್ಕಮಗಳೂರು, ತರೀಕೆರೆ ಹಾಗೂ ಕಡೂರಿಗೆ ಹೋಗಿ ಬರುವ ಸಮಯ ಉಳಿತಾಯವಾಗಲಿದೆ.

- ರಾಮಸ್ವಾಮಿ ಮಾಜಿ ಉಪಾಧ್ಯಕ್ಷರು, ಜಿಪಂ ಚಿಕ್ಕಮಗಳೂರು