ನೆಟ್ಟ ಸಸಿಗಳನ್ನು ಪಪಂ ರಕ್ಷಿಸಲಿ

| Published : May 07 2024, 01:01 AM IST

ಸಾರಾಂಶ

ದೇಶದಾದ್ಯಂತ ಸುಡುವ ಬಿಸಿಲು ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಕುಡಿಯುವ ನೀರಿಗೂ ಹಾಹಾಕಾರ ಉದ್ಭವಿಸಿದೆ. ಇದಕ್ಕೆಲ್ಲ ಮುಖ್ಯ ಕಾರಣ ಪರಿಸರದ ನಾಶ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಮನುಷ್ಯನ ದುರಾಸೆಯ ಕಾರಣದಿಂದ ದಿನೇ ದಿನೇ ಪರಿಸರ ನಾಶವಾಗುತ್ತಿದ್ದು, ಪ್ರಾಕೃತಿಕ ಅಸಮತೋಲನ ಉಂಟಾಗಿ ಜೀವರಾಶಿಗಳು ಸಂಕಷ್ಟ ಎದುರಿಸುತ್ತಿವೆ. ಮರಗಳನ್ನು ನಾವು ಬೆಳೆಸದೇ ಇದ್ದರೇ ಮುಂದಿನ ದಿನಗಳಲ್ಲಿ ಮರದ ನೆರಳಿನಲ್ಲಿ ನಿಂತುಕೊಳ್ಳಲು ದುಡ್ಡು ಕೊಡುವ ಕಾಲ ಬರಬಹುದು ಎಂದು ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್ ಎಚ್ಚರಿಸಿದರು.

ಪಟ್ಟಣದ ರಸ್ತೆ ಬದಿಯಲ್ಲಿ, ವಿಭಜಕಗಳಲ್ಲಿ ನೆಟ್ಟಂತಹ ಗಿಡಗಳಿಗೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನೀರು ಹಾಕುತ್ತಿದ್ದು, ಈ ಸಮಯದಲ್ಲಿ ಸಾರ್ವಜನಿಕ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ದೇಶದಾದ್ಯಂತ ಸುಡುವ ಬಿಸಿಲು ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಕುಡಿಯುವ ನೀರಿಗೂ ಹಾಹಾಕಾರ ಉದ್ಭವಿಸಿದೆ. ಇದಕ್ಕೆಲ್ಲ ಮುಖ್ಯ ಕಾರಣ ಪರಿಸರದ ನಾಶ ಎಂದರು.

ಮರದ ನೆರಳಿಗೂ ಹಣ

ಪರಿಸರವನ್ನು ಉಳಿಸುವ ಕೆಲಸ ಯಾರೂ ಮಾಡುತ್ತಿಲ್ಲ. ಈಗಾಗಲೇ ನೀರು ಅಭಾವ ಸೃಷ್ಟಿಯಾಗಿದೆ. ಅನೇಕ ವರ್ಷಗಳಿಂದ ಶುದ್ಧ ಕುಡಿಯುವ ನೀರನ್ನು ನಾವು ಹಣ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಅದೇ ಮಾದರಿಯಲ್ಲಿ ಇನ್ನು ಮುಂದೆ ನಾವು ಮರದ ನೆರಳನ್ನು ಸಹ ದುಡ್ಡು ಕೊಟ್ಟು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾದರೂ ಆಗಬಹುದು ಎಂದರು.

ಈ ಕಾರಣದಿಂದಲೇ ಪರಿಸರ ವೇದಿಕೆ, ಗ್ರೀನ್ ವಾರಿಯರ್ಸ್ ಹಾಗೂ ಪರಿಸರ ಪ್ರೇಮಿಗಳ ಸಹಕಾರದೊಂದಿಗೆ ಗುಡಿಬಂಡೆ ತಾಲೂಕಿನಾದ್ಯಂತ ವಿಶೇಷ ದಿನಗಳಂದು ಸಸಿಗಳನ್ನು ನೆಡುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಕೆಲವರು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅಂತಹ ಆರೋಪಗಳಿಗೆ ನಾವು ಕಿವಿಗೊಡುವುದಿಲ್ಲ. ನಮ್ಮ ಉದ್ದೇಶ ಗಿಡ-ಮರಗಳನ್ನು ಬೆಳೆಸುವುದಾಗಿದೆ ಎಂದರು.

ನೆಟ್ಟ ಸಸಿಗಳನ್ನು ಪಪಂ ರಕ್ಷಿಸಲಿ

ಗುಡಿಬಂಡೆ ಪಟ್ಟಣದ ರಸ್ತೆಯ ವಿಭಜಕಗಳಲ್ಲಿ ಈ ಹಿಂದೆ ಸಸಿಗಳನ್ನು ನೆಡಲಾಗಿದೆ. ಆದರೆ ಅವುಗಳ ನಿರ್ವಹಣೆಯನ್ನು ಮಾಡುವುದು ಪಪಂ ಮರೆತಿದೆ. ಸಸಿಗಳು ನೀರಿಲ್ಲದೇ ಒಣಗುತ್ತಿವೆ. ಇನ್ನು ಮುಂದೆಯಾದರೂ ಸಸಿಗಳು ಒಣಗದಂತೆ ನೀರು ಹಾಕುವ ಮೂಲಕ ಸಸಿಗಳನ್ನು ಕಾಪಾಡಬೇಕೆಂದರು.

ಈ ವೇಳೆ ಪರಿಸರವಾದಿಗಳಾದ ಅಸ್ಮಾಂಪಾಷ, ಅನ್ವರ್, ದಾದುಲ್ಲ, ಪ್ರಕಾಶ್, ಗಂಗಪ್ಪ, ಮುನಿಯಪ್ಪ ಸೇರಿದಂತೆ ಹಲವರು ಸಸಿಗಳಿಗೆ ಸ್ವಯಂ ಪ್ರೇರಿತವಾಗಿ ನೀರು ಹಾಕುವ ಕಾರ್ಯ ಹಮ್ಮಿಕೊಂಡಿದ್ದರು.