ಮಧುವಣಗಿತ್ತಿಯಂತೆ ಸಿಂಗಾರಗೊಂಡ ಮತಗಟ್ಟೆಗಳು

| Published : May 07 2024, 01:01 AM IST

ಮಧುವಣಗಿತ್ತಿಯಂತೆ ಸಿಂಗಾರಗೊಂಡ ಮತಗಟ್ಟೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ವಿಭಿನ್ನ ಕಲಾಕೃತಿಗಳನ್ನು ಚಿತ್ರೀಸಿ ಅಲಂಕರಿಸಿರುವುದು ಮತದಾರರ ಪ್ರಶಂಸೆಗೆ ಪಾತ್ರ

ಗಜೇಂದ್ರಗಡ: ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾಲೂಕಿನಾದ್ಯಂತ ಇಷ್ಟು ದಿನಗಳ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದರೆ, ಕೊನೆಯ ಹಂತಕ್ಕೆ ಮತಗಟ್ಟೆ ಕೇಂದ್ರಗಳನ್ನು ವಿಭಿನ್ನವಾಗಿ ನಿರ್ಮಿಸುವ ಮೂಲಕ ಮತದಾನ ಪ್ರಮಾಣದ ಹೆಚ್ಚಳಕ್ಕೆ ಹಳ್ಳಿಗಾಡಿನ ತಾಂಡಾ ಸಮುದಾಯದ ಜೀವನ ಶೈಲಿ, ಸಖಿ ಹಾಗೂ ವಿಶೇಷಚೇತನರಿಗಾಗಿ ವಿಭಿನ್ನ ಕಲಾಕೃತಿಗಳನ್ನು ಚಿತ್ರೀಸಿ ಅಲಂಕರಿಸಿರುವುದು ಮತದಾರರ ಪ್ರಶಂಸೆಗೆ ಪಾತ್ರವಾಗಿದೆ.

ಸಮೀಪದ ರಾಜೂರು ಗ್ರಾಮದಲ್ಲಿನ ನಾಲ್ಕು ಮತಗಟ್ಟೆಗಳ ಪೈಕಿ ೯೩ನೇ ಮತಗಟ್ಟೆ ವಿಶೇಷ ಮತಗಟ್ಟೆಯನ್ನಾಗಿ ಗುರುತಿಸಲಾಗಿದ್ದು, ಗ್ರಾಮದಲ್ಲಿ ತಾಂಡಾ ಸಮುದಾಯದ ಜನರು ಹೆಚ್ಚಿರುವ ಕಾರಣ ಮತದಾರರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಹಳ್ಳಿಗಾಡಿನ ತಾಂಡಾ ಸಮುದಾಯದ ಜೀವನ ಶೈಲಿಯ ಕಲಾಕೃತಿ ಬಿಡಿಸಿದ್ದು, ಮತದಾನ ಪ್ರಮಾಣದ ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ.

ಸಖಿ ಮತಗಟ್ಟೆ: ಪಟ್ಟಣದ ಕೆಳಗಲಪೇಟೆಯ ಪ್ರದೇಶದಲ್ಲಿರುವ ಮತಗಟ್ಟೆ ಸಂಖ್ಯೆ ೬೭ರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ ೪ ಅನ್ನು ಸಖಿ ಮತಗಟ್ಟೆಯಾಗಿ ಚಿತ್ರಿಸಲಾಗಿದೆ. ಸಂಪೂರ್ಣ ಮತಗಟ್ಟೆಗೆ ಗುಲಾಬಿ ಬಣ್ಣ ಹಚ್ಚಿ ಮಹಿಳೆಯ ತೋರು ಬೆರಳನ್ನು ಹಣೆಯ ಸಿಂಧೂರದ ಭಾಗಕ್ಕೆ ಮತದಾನದ ಶಾಯಿ ಬರುವ ಹಾಗೇ ಚಿತ್ರ ಬಿಡಿಸಲಾಗಿದೆ. ಮತದಾನ ಪ್ರಜಾಪ್ರಭುತ್ವ ಗಟ್ಟಿಯಾಗುವ ಸಂಕೇತ ಸೂಚಿಸುವಂತಿದೆ. ಜತೆಗೆ ಮತ ನೀಡಿ ಕರ್ತವ್ಯ ಪಾಲಿಸಿ ಚುನಾವಣಾ ಪರ್ವ ದೇಶದ ಗರ್ವ, ಮತದಾನ ನಮ್ಮ ಹಕ್ಕು ಬರವಣಿಗೆಯ ಸಾಲುಗಳು ಮತದಾನದ ಮಹತ್ವ ಸಾರುತ್ತಿವೆ.

ವಿಶೇಷಚೇತನರ ಮತಗಟ್ಟೆ: ಪಟ್ಟಣದ ಕೊಂಚಿಕೊರವರ ಓಣಿಯಲ್ಲಿರುವ ಮತಗಟ್ಟೆ ಸಂಖ್ಯೆ ೮೭ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ ೩ರಲ್ಲಿ ವಿಶೇಷಚೇತನರ ಮತಗಟ್ಟೆಯನ್ನಾಗಿ ಚಿತ್ರಿಸಲಾಗಿದೆ. ಸಂಪೂರ್ಣ ಮತಗಟ್ಟೆಗೆ ಬಿಳಿ ಬಣ್ಣ ಹಚ್ಚಿ ವಿಶೇಷಚೇತನ ವ್ಯಕ್ತಿ ವಿಲ್ ಚೇರ್ ಮೇಲೆ ಚಿತ್ರ, ಕೋಲು ಹಿಡಿದುಕೊಂಡು ನಿಂತಿರುವ ಚಿತ್ರ, ಮತದಾನ ಮಾಡುವ ಚಿತ್ರ ಬಿಡಿಸಲಾಗಿದ್ದು, ಎಲ್ಲರನ್ನು ಆಕರ್ಷಿಸುತ್ತಿವೆ. ಜತೆಗೆ ನನ್ನ ಮತ ನನ್ನ ಧ್ವನಿ, ಚುನಾವಣಾ ಪರ್ವ ದೇಶದ ಗರ್ವ, ಬರವಣಿಗೆಯ ಸಾಲು ಮತದಾನದ ಮಹತ್ವ ಸಾರುತ್ತಿವೆ.

ಸಾಂಪ್ರದಾಯಕ ಮತಗಟ್ಟೆ ವಿಶೇಷತೆ ಏನು?: ರಾಜೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ೯೩ ವಿಶೇಷ ಮತಗಟ್ಟೆಯ ಮುಂದೆ ಹಳ್ಳಿಗಾಡಿನ ತಾಂಡಾ ಸಮುದಾಯದ ಗುಡಿಸಲು ನಿರ್ಮಿಸಿ ಅದಕ್ಕೆ ಚಿತ್ರ ಬಿಡಿಸಲಾಗಿದೆ. ಜತೆಗೆ ಮಾವಿನ ತೋರಣ, ಟೆಂಗಿನ ಗರಿ, ಬಾಳೆಕಂಬ ಕಟ್ಟಿ ಸಿಂಗಾರಗೊಳಿಸಲಾಗಿದೆ. ಇನ್ನೂ ಒಳಗೆ ಹೋದಂತೆ ಲಂಬಾಣಿ ಜನರ ಬಳಸುವ ಮತ್ತು ಧರಿಸುವ ಉಡುಗೆ-ಕೊಡುಗೆಗಳು, ಕಲೆ ಆಚರಣೆಗಳು ಎಲ್ಲರ ಗಮನ ಸೆಳೆಯುತ್ತಿವೆ.

ಸಾಂಪ್ರದಾಯಕ ಮತಗಟ್ಟೆಯ ಗುಡಿಸಲು ಮುಂದೆ ಚುನಾವಣಾ ಪರ್ವ ದೇಶದ ಗರ್ವ, ನನ್ನ ಮತ ನನ್ನ ಆಯ್ಕೆ, ನಿಮ್ಮ ಮತ ನಿಮ್ಮ ಧ್ವನಿ ಎಂಬ ಘೋಷಣೆಗಳನ್ನು ಬರೆಯಿಸುವ ಮೂಲಕ ತಾಲೂಕು ಸ್ವೀಪ್ ಸಮಿತಿ ಜಾಗೃತಿ ಮೂಡಿಸುವುದರ ಜತೆಗೆ ಮತದಾರರನ್ನು ಆಕರ್ಷಿಸುತ್ತಿವೆ.

ಮತದಾರರ ಗಮನ ಸೆಳೆಯಲು ಮತದಾನ ಪ್ರಮಾಣ ಹೆಚ್ಚಿಸಲು ರಾಜೂರು ಗ್ರಾಮದ ಮತಗಟ್ಟೆ ಸಂಖ್ಯೆ ೯೪ ರ ಸಾಂಪ್ರದಾಯಕ ಮತಗಟ್ಟೆಯನ್ನಾಗಿ ತಾಂಡಾ ಸಮುದಾಯದ ಜೀವನ ಶೈಲಿ ರೂಪಿಸಲಾಗಿದೆ. ಪಟ್ಟಣದಲ್ಲಿ ಮಹಿಳಾ ಮತದಾರರ ಪ್ರಮಾಣ ಹೆಚ್ಚಿಸಲು ಸಖಿ ಮತಗಟ್ಟೆ ನಿರ್ಮಿಸಲಾಗಿದೆ. ವಿಶೇಷಚೇತನರ ಮತಗಟ್ಟೆ ನಿರ್ಮಿಸಿದ್ದು, ಅವರನ್ನು ಗಮನ ಸೆಳೆಯುವುದರ ಜತೆಗೆ ಮತದಾನ ಮಾಡಲು ಪ್ರೇರೇಪಿಸಲಾಗಿದೆ ಎಂದು ತಾಪಂ ಇಒ ಬಸವರಾಜ ಬಡಿಗೇರ್ ಹೇಳಿದರು.