ಭಾವೈಕ್ಯತೆಯ ಸಂಕೇತ ಶಿವಲಿಂಗೇಶ್ವರ ಜಾತ್ರೆ

| Published : May 07 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ: ಹಿಂದು- ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ತಾಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರೆಯ ಪಲ್ಲಕ್ಕಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಗೋಕಾಕ: ಹಿಂದು- ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ತಾಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರೆಯ ಪಲ್ಲಕ್ಕಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹಸಿರು ರಾಜಪೋಷಾಕಿನಲ್ಲಿ ಸಕಲ ರಾಜಮರ್ಯಾದೆ, ಬಿರುದಾವಳಿಗಳಿಂದ ಶೋಭಿತರಾಗಿ ಅಲಂಕೃತ ಆನೆ, ಭಜನೆ, ಡೊಳ್ಳು,ಕರಡಿ ಮಜಲು, ಮುತ್ತೈದೆಯರಿಂದ ಆರತಿ, ಕಳಶ, ಕನ್ನಡಿಗಳೊಂದಿಗೆ ಸಾವಳಗಿ, ಮುತ್ನಾಳ, ನಂದಗಾಂವ, ಖಾನಾಪುರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ನಡೆಯಿತು. ಪಲ್ಲಕ್ಕಿ ಸಾಗುವ ದಾರಿಯುದ್ದಕ್ಕೂ ಭಕ್ತರು ನೀರು ಹಾಕಿ, ಪುಷ್ಪಗಳ ಸುರಿಮಳೆಗೈದರು.ಸಂಜೆ ಜರುಗಿದ ವೇದಿಕೆ ಸಮಾರಂಭದಲ್ಲಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಮಾತನಾಡಿ, ನಂಬಿಕೆ, ನಿಜ ಭಕ್ತಿಯಲ್ಲಿಯೇ ದೇವರಿದ್ದು, ಅಂತರಂಗದಿಂದ ದೇವರನ್ನು ಸ್ಮರಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು. ಎಲ್ಲ ಧರ್ಮಶಾಸ್ತ್ರಗಳು ಮನುಕುಲದ ಹಿತವನ್ನು, ಏಳ್ಗೆಯನ್ನು ಬಯಸುತ್ತಿದ್ದು, ಪ್ರತಿ ವ್ಯಕ್ತಿಯೂ ನಡೆ, ನುಡಿಗಳಲ್ಲಿ ಸದ್ಭಾವ ರೂಢಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಆಶೀರ್ವಚನ ನೀಡಿದರು.

ಶಿವರಾಜ ಶಾಸ್ತ್ರಿಗಳು ಜಗದ್ಗರು ಶಿವಲಿಂಗೇಶ್ವರ ಪುರಾಣವನ್ನು ಮಂಗಲ ಮಾಡಿದರು. ಚಿಕ್ಕೋಡಿಯ ಓಂ ಶುಗರ್ಸ್‌ನ ಎಂ.ಎಸ್.ಕುಂಬಾರ, ಕೆಂಚಪ್ಪ ಭರಮನ್ನವರ, ಬಡಕುಂದ್ರಿಯ ಯಲ್ಲಾಲಿಂಗ ಶರಣರು ಭಾಗವಹಿಸಿದ್ದರು. ಗಾನಭೂಷಣ ವಿರೇಶ ಕಿತ್ತೂರ ಮತ್ತು ಧಾರವಾಡದ ಶಿವಕುಮಾರ ಅವರು ಭಕ್ತಿ ಹಾಡು ಮತ್ತು ವಚನಗಳನ್ನು ಗಾಯನ ಮಾಡಿದರು. ನಟರಾಜ ಮಹಾಜನ್ ಮೂಗಿನಿಂದ ಶಹನಾಯಿ ನುಡಿಸಿ ಎಲ್ಲರ ಗಮನ ಸೆಳೆದರು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು, ರೋಹಣಿ ಹಾಗೂ ಯಶೋಧಾ ನಿರೂಪಿಸಿದರು.