ಲೋಕಸಭೆ ಚುನಾವಣಾ ಹಬ್ಬಕ್ಕೆ ಸಿದ್ಧತೆ ಪೂರ್ಣ

| Published : May 07 2024, 01:08 AM IST

ಸಾರಾಂಶ

ಮಸ್ಟರಿಂಗ್ ಪ್ರಕ್ರಿಯೆ ಹಾಗೂ ಮತಗಟ್ಟೆಗಳ ಸಿದ್ಧತೆ ಕುರಿತು ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಸಿಇಒ ಅಕ್ಷಯ್ ಶ್ರೀಧರ್, ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಭೇಟಿ ನೀಡಿ, ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಲೋಕಸಭಾ ಕ್ಷೇತ್ರದ ಮತದಾನಕ್ಕೆ ಹಾವೇರಿ ಮತ ಕ್ಷೇತ್ರ ವ್ಯಾಪ್ತಿಯ ೧೯೮೨ ಮತಗಟ್ಟೆಗಳಲ್ಲಿ ಸಿಬ್ಬಂದಿಗಳೊಂದಿಗೆ ಮತಯಂತ್ರಗಳು ಸುರಕ್ಷಿತವಾಗಿ ಮಸ್ಟರಿಂಗ್ ಕೇಂದ್ರದಿಂದ ತಲುಪಿದ್ದು, ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೇ ೭ರಂದು ಮಂಗಳವಾರ ಬೆಳಗ್ಗೆ ೭ರಿಂದ ಸಂಜೆ ೬ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತದಾರರಿಗೆ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುವುದು. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದ್ದು. ಮತದಾರರು ನಿರ್ಭಿಡೆಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಲು ಮನವಿ ಮಾಡಿಕೊಳ್ಳಲಾಗಿದೆ.

ಮಸ್ಟರಿಂಗ್ ಪ್ರಕ್ರಿಯೆ ಹಾಗೂ ಮತಗಟ್ಟೆಗಳ ಸಿದ್ಧತೆ ಕುರಿತು ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಸಿಇಒ ಅಕ್ಷಯ್ ಶ್ರೀಧರ್, ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಭೇಟಿ ನೀಡಿ, ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು.

ಸುಗಮ ಮತದಾನಕ್ಕಾಗಿ ಲೋಕಸಭಾ ವ್ಯಾಪ್ತಿಯಲ್ಲಿ (ಹಾವೇರಿ-ಗದಗ ಜಿಲ್ಲೆ) ೧೯೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ೧೬೧೪ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಲಾಗಿದೆ. ೩೯ ದುರ್ಬಲ, ೩೭೦ ಸೂಕ್ಷ್ಮ ಮತಗಟ್ಟೆಗಳು ಹಾಗೂ ೧೨ ಆರ್ಥಿಕ ಸೂಕ್ಷ್ಮತೆ ಒಳಗೊಂಡ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆಗಾಗಿ ವಿವಿಧ ಹಂತದ ೬೯೫೮ ಜನ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಸುರಕ್ಷತೆ ಹಾಗೂ ಭದ್ರತೆಗಾಗಿ ೨೫೨೫ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡಂತೆ ೯೪೮೩ ಜನರನ್ನು ನಿಯೋಜಿಸಲಾಗಿದೆ ಹಾಗೂ ಮೂರು ಕೇರಳ ಪೊಲೀಸ್ ಪೋರ್ಸ್ ಪಡೆ ಕಾರ್ಯ ನಿರ್ವಹಿಸಲಿದೆ.

ಮತದಾನ ಮಾಡಲು ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೯,೦೨,೧೧೯ ಪುರುಷರು, ೮,೯೦,೫೭೨ ಮಹಿಳೆಯರು ಹಾಗೂ ೮೩ ಇತರರು ಸೇರಿದಂತೆ ಒಟ್ಟಾರೆ ೧೭,೯೨,೭೭೪ ಮತದಾರರಿದ್ದಾರೆ. ಈ ಪೈಕಿ ೫೭,೫೭೭ ಪ್ರಥಮ ಬಾರಿಗೆ ಮತ ಚಲಾಯಿಸುವ ಯುವ ಮತದಾರರಿದ್ದಾರೆ. ವಿಧಾನಸಭಾ ಕ್ಷೇತ್ರವಾರು ವಿವರದಂತೆ ಶಿರಹಟ್ಟಿ ಕ್ಷೇತ್ರದಲ್ಲಿ ೨,೩೦,೦೦೩, ಗದಗ ಕ್ಷೇತ್ರದಲ್ಲಿ ೨,೨೯,೫೯೯, ರೋಣ ಕ್ಷೇತ್ರದಲ್ಲಿ ೨,೩೯,೧೨೨, ಹಾನಗಲ್ ಕ್ಷೇತ್ರದಲ್ಲಿ ೨,೧೫,೮೩೬, ಹಾವೇರಿ ಕ್ಷೇತ್ರದಲ್ಲಿ ೨,೩೮,೩೮೭, ಬ್ಯಾಡಗಿ ಕ್ಷೇತ್ರದಲ್ಲಿ ೨,೧೨,೫೬೭, ಹಿರೇಕೆರೂರು ಕ್ಷೇತ್ರದಲ್ಲಿ ೧,೮೮,೨೦೮, ರಾಣಿಬೆನ್ನೂರು ಕ್ಷೇತ್ರದಲ್ಲಿ ೨,೩೯,೦೫೨ ಮತದಾರರಿದ್ದಾರೆ.

ಬೆಳಗ್ಗೆ ೭ರಿಂದ ಸಂಜೆ ೬ರ ವರೆಗೆ ಮತದಾನ ಅವಧಿ ನಿಗದಿಪಡಿಸಲಾಗಿದೆ. ಮತದಾನ ಮಾಡಲು ಅನುಕೂಲವಾಗುವಂತೆ ಮೇ ೭ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.

ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಮತದಾನದ ದಿನದಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಈಗಾಗಲೇ ಕಾರ್ಮಿಕ ಇಲಾಖೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.ಮತಗಟ್ಟೆಯಲ್ಲಿ ಸೌಲಭ್ಯ

ಕುಡಿಯುವ ನೀರಿನ ಸೌಲಭ್ಯ, ನೆರಳಿನ ಸೌಲಭ್ಯ, ವಿಕಲಚೇತನರಿಗೆ, ಹಿರಿಯ ಮತದಾರರಿಗೆ ಅನುಕೂಲವಾಗಲು ರ‍್ಯಾಂಪ್ ವ್ಯವಸ್ಥೆ ಹಾಗೂ ವ್ಹೀಲ್ ಚೇರ್ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ, ಮಕ್ಕಳ ಪಾಲನಾ ಕೇಂದ್ರ, ಬೂತ್‌ಕನ್ನಡಿ, ಸೆಲ್ಫಿ ಕಾರ್ನರ್ ವ್ಯವಸ್ಥೆ ಮಾಡಲಾಗಿದೆ.

ಮತಗಟ್ಟೆ ವ್ಯಾಪ್ತಿಯಲ್ಲಿ ಅಭ್ಯರ್ಥಿಯ ಅಥವಾ ರಾಜಕೀಯ ಪಕ್ಷದ ಹೆಸರು ಮತ್ತು ಚಿಹ್ನೆಯನ್ನೊಳಗೊಂಡ ಮತದಾರರ ಚೀಟಿಯನ್ನು ನೀಡಲು ಅವಕಾಶವಿಲ್ಲ.

ಮತಗಟ್ಟೆ ವ್ಯಾಪ್ತಿಯ ೧೦೦ ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಸಂಬಂಧಿ ಪೋಸ್ಟರ್, ಬ್ಯಾನರ್ ಹಾಕುವಂತಿಲ್ಲ.

ಮತಗಟ್ಟೆಯಿಂದ ೨೦೦ ಮೀ. ಒಳಗಡೆ ಚುನಾವಣಾ ಕರ್ತವ್ಯ ನಿರತ ವಾಹನ ಹೊರತುಪಡಿಸಿ, ಇತರೆ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆ ನಿಷೇಧಿಸಿದೆ.

ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಪರ ಏಜೆಂಟರು ಮತದಾನಕ್ಕೆ ವಾಹನದಲ್ಲಿ ಮತದಾರರನ್ನು ಮನೆಯಿಂದ ಮತಗಟ್ಟೆಗೆ ಕರೆತರುವುದು ಮತ್ತು ಮರಳಿ ಕರೆದೊಯ್ಯಲು ಅವಕಾಶ ಇರುವುದಿಲ್ಲ.

ಮತದಾನಕ್ಕೆ ಬರುವ ಖಾಸಗಿ, ವೈಯಕ್ತಿಕ ವಾಹನಗಳು ಮತಗಟ್ಟೆಯಿಂದ ೨೦೦ ಮೀಟರ್ ಹೊರಗಿರಬೇಕು.

ಅನುಮತಿಸಲಾದ ವಾಹನಗಳ ಬಳಕೆಗೆ ಮಾತ್ರ ಅವಕಾಶ. ಆದರೆ, ಈ ವಾಹನಗಳಲ್ಲಿ ಮತದಾರರನ್ನು ಕರೆತರುವಂತಿಲ್ಲ.

ಮತಗಟ್ಟೆಯ ೧೦೦ ಮೀಟರ್‌ ಅಂತರದೊಳಗಿರುವ ಯಾವುದೇ ಸಾರ್ವಜನಿಕ, ಧಾರ್ಮಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಪ್ರಚಾರ ನಡೆಸುವಂತಿಲ್ಲ. ಧ್ವನಿವರ್ಧಕಗಳ ಬಳಕೆ ಮಾಡುವಂತಿಲ್ಲ.

ಅನುಮತಿಸಲಾದ ಬೂತ್‌ಗಳಿಗೆ ಮಾತ್ರ ಅವಕಾಶ. ಬೂತ್‌ಗಳಿಗೆ ಅನುಮತಿ ಪಡೆದ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಚುನಾವಣಾ ಬೂತ್ ಮತಗಟ್ಟೆಯಿಂದ ೨೦೦ ಮೀಟರ್ ವ್ಯಾಪ್ತಿಯ ಹೊರಗಿರಬೇಕು.

ಮೊಬೈಲ್ ಪೋನ್, ಕಾರ್ಡಲೆಸ್ ಫೋನ್‌ಗಳನ್ನು ಮತಗಟ್ಟೆಯ ಬಳಸುವಂತಿಲ್ಲ. ಮತಗಟ್ಟೆಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ.ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು

ಜಿ.ಜಿ. ಆನಂದಸ್ವಾಮಿ ಗಡ್ಡದೇವರಮಠ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಬಸವರಾಜ ಸೋಮಪ್ಪ ಬೊಮ್ಮಾಯಿ (ಭಾರತೀಯ ಜನತಾ ಪಾರ್ಟಿ), ಖಾಜಾಮೋಹಿದ್ದೀನ್ ಗುಡಗೇರಿ (ಸೋಸಿಯಾಲಿಸ್ಟ್ ಪಾರ್ಟಿ (ಇಂಡಿಯಾ)), ಗಂಗಾಧರ ಬಡಿಗೇರ (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)), ತನು ಸಿ ಯಾದವ್ (ಕರ್ನಾಟಕ ರಾಷ್ಟ್ರ ಸಮಿತಿ), ಹೆಚ್.ಕೆ. ನರಸಿಂಹಪ್ಪ (ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)), ರಶೀದಾ ಬೇಗಂ, (ಇಂಡಿಯನ್ ಮೂಮೆಂಟ್ ಪಾರ್ಟಿ), ವಿಶ್ವನಾಥ ಶೀರಿ (ಏಕಂ ಸನಾತನ ಭಾರತ ದಳ), ಸಚಿನಕುಮಾರ ಕರ್ಜೆಕಣ್ಣನವರ ಉತ್ತಮ ಪ್ರಜಾಕೀಯ ಪಾರ್ಟಿ), ಡಾ. ಗುರಪ್ಪ ಎಚ್. ಇಮ್ರಾಪೂರ (ಪಕ್ಷೇತರ), ಜಗದೀಶ ಬಂಕಾಪೂರ (ಪಕ್ಷೇತರ), ಬಸವರಾಜ ಹಾದಿ (ಪಕ್ಷೇತರ), ರುದ್ರಪ್ಪ ಕುಂಬಾರ (ಪಕ್ಷೇತರ) ಹಾಗೂ ಸುನಂದಾ ಕರಿಯಪ್ಪ ಶಿರಹಟ್ಟಿ (ಪಕ್ಷೇತರ).