ಚಳ್ಳಕೆರೆ ತಾಲೂಕಿನ ಬೆಳೆ ಸಮೀಕ್ಷೆ ಮರುಪರಿಶೀಲನೆ

| Published : May 07 2024, 01:03 AM IST

ಸಾರಾಂಶ

ಸೋಮಗುದ್ದು, ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆ ಪ್ರಮಾಣ ಮರು ಪರಿಶೀಲನೆರೈತರು, ವಿಮಾ ಕಂಪನಿ, ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಭರವಸೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಳೆ ವಿಮೆ ಬಾರದ ಚಳ್ಳಕೆರೆ ತಾಲೂಕಿನ ಸೋಮಗುದ್ದು, ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆ ಪ್ರಮಾಣ ಮರು ಪರಿಶೀಲನೆಗೆ ಒಳಪಡಿಸಿ ವಿಮೆ ಲಭ್ಯವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರೈತರು, ವಿಮಾ ಕಂಪನಿ, ಕೃಷಿ ಇಲಾಖೆ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಳ್ಳಕೆರೆ ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆವಿಮೆ ವಿತರಣೆಯಾಗದಿರುವುದು, ಬೆಳೆವಿಮೆ ಹಣ ಪಾವತಿಯಲ್ಲಿಯೂ ವ್ಯತ್ಯಾಸ ಆಗಿರುವುದು ಹಾಗೂ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಡಾಟಾ ಎಂಟ್ರಿ ಮಾಡುವ ಸಂದರ್ಭದಲ್ಲಿ ಆಗಿರುವ ದೋಷಗಳು ಗಮನಕ್ಕೆ ಬಂದಿದ್ದು, ಬೆಳೆ ಸಮೀಕ್ಷೆಯ ಸಂದರ್ಭದಲ್ಲಿ ಆಗಿರುವ ವ್ಯತ್ಯಾಸದ ಕುರಿತು ಈಗಾಗಲೇ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪುನಃ ಪರಿಶೀಲಿಸಿ, ಬೆಳೆವಿಮೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ರೈತರಿಗೆ ನೀಡುವ ಬೆಳೆವಿಮೆ, ಸರ್ಕಾರಿ ಸೌಲಭ್ಯ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣ ಸಾಲದ ಖಾತೆಗಳಿಗೆ ಜಮೆ ಮಾಡುವಂತಿಲ್ಲ. ಈಗಾಗಲೇ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದು, ರೈತರ ಸಾಲದ ಖಾತೆಗೆ ಬೆಳೆವಿಮೆ ಹಣ ಜಮೆ ಮಾಡದಂತೆ ತಿಳಿಸಲಾಗಿದೆ. ಜೊತೆಗೆ ಬೆಳೆ ಪರಿಹಾರ ವಿತರಣೆಗೂ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ಹೊರತುಪಡಿಸಿ ಎಲ್ಲ ಪಂಚಾಯಿತಿಗಳಿಗೂ ಬೆಳೆವಿಮೆ ಹಣ ಬಂದಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೆಳೆ ವಿಮೆ ಪಾವತಿಯಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ಸೂಕ್ತ ದಾಖಲೆಗಳೊಂದಿಗೆ ವಿಮಾ ಕಂಪನಿಗೆ ಆಗಿರುವ ಲೋಪದೋಷ ಸರಿಪಡಿಸಿ ಬೆಳೆವಿಮೆ ಪಾವತಿಸಲು ಸೂಚನೆ ನೀಡಲಾಗುವುದು ಎಂದರು.

ಜಿಲ್ಲೆಯ ರೈತರು ಬೆಳೆ ವಿಮೆಗೆ 11.92 ಕೋಟಿ ರು. ಕಂತು ಪಾವತಿಸಿದ್ದರು. 284 ಕೋಟಿ ರುಪಾಯಿ ಬೆಳೆವಿಮೆ ಹಣ ಬಂದಿದೆ. ಬೆಳೆವಿಮೆ ಹಣದ ಒಟ್ಟು ಮೊತ್ತದಲ್ಲಿ ಚಳ್ಳಕೆರೆ ತಾಲೂಕಿಗೆ ಶೇ.51ರಷ್ಟು ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ರೈತ ಸಂಘದ ಮುಖಂಡರಾದ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಬ್ಯಾಡರಹಳ್ಳಿ ಶಿವಕುಮಾರ, ಚೇತನ್ ಯಳನಾಡು, ಕುರುಬರ ಹಳ್ಳಿ ಶಿವಣ್ಣ, ನಿವೃತ್ತ ಪ್ರಾಚಾರ್ಯ ಶಿವಲಿಂಗಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.

ಪಿಡಿಒ ಗಳ ಮೇಲೆ ಕ್ರಮ: ಮಳೆ ಆಶ್ರಿತ ಜಮೀನುಗಳಲ್ಲಿ ನಡೆಸಬೇಕಾದ ಬೆಳೆ ಕಟಾವು ಪ್ರಯೋಗ ನೀರಾವರಿ ಜಮೀನುಗಳ ಸರ್ವೇ ನಂಬರ್‌ಗಳಲ್ಲಿ ನಡೆಸಲಾಗಿದೆ. ಈ ಅಚಾತುರ್ಯ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗರಳಿಗೆ ನೋಟಿಸ್ ನೀಡಲಾಗಿದೆ. ವರದಿ ಆಧರಿಸಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಬೆಳೆ ಸಮೀಕ್ಷೆ ತಪ್ಪಿನಿಂದಾಗಿ ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ಪರಿಣಾಮ ಬೀರಿದೆ ಎಂದು ರೈತರು ಮಾಹಿತಿ ನೀಡಿದ್ದು, ಇದು ಅವೈಜ್ಞಾನಿಕ ಕ್ರಮವಾಗಿದೆ. ಈ ಕುರಿತು ಸೂಕ್ತ ಕ್ರಮಕೈಗೊಂಡು ಬೆಳೆ ನಷ್ಟ ಉಂಟಾದ ರೈತರಿಗೆ ಕಡ್ಡಾಯವಾಗಿ ಬೆಳೆವಿಮೆ ಪಾವತಿಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟೇಶ್‌ ತಿಳಿಸಿದರು.