ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ, ಸಿಬ್ಬಂದಿ ಕೊರತೆ

| Published : May 07 2024, 01:11 AM IST

ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ, ಸಿಬ್ಬಂದಿ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು, ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಸುಮಾರು ₹2.50 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡವಿದ್ದರೂ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಇದ್ದರೂ ಇಲ್ಲದಂತಾದ ಆಸ್ಪತ್ರೆ । ಸುಮಾರು ₹2.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಕಟ್ಟಡಅಮರಪ್ಪ ಕುರಿ

ಕನ್ನಡಪ್ರಭ ವಾರ್ತೆ ನವಲಿ

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು, ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಸುಮಾರು ₹2.50 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡವಿದ್ದರೂ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ರೋಗಿಗಳು ಅಗತ್ಯ ಚಿಕಿತ್ಸೆಗಾಗಿ ನಿತ್ಯ ಪರದಾಡುವಂತಾಗಿದೆ. ಗ್ರಾಮದಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ಜನರಿಗೆ ಚಿಕಿತ್ಸೆ ಪಡೆಯಲು ಬೇರೆಡೆ ತೆರಳುವಂತಾಗದೆ. ಗ್ರಾಮದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯವೂ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲ. ಸಾಂಕ್ರಾಮಿಕ ರೋಗಗಳೂ ಆಗಾಗ ಜನರನ್ನು ಕಾಡುತ್ತಿವೆ.

ನವಲಿ ಹೋಬಳಿ ಕೇಂದ್ರವಾಗಿರುವುದರಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 29 ಗ್ರಾಮಗಳು ಬರುತ್ತವೆ. ಒಟ್ಟು 36,154 ಜನಸಂಖ್ಯೆ ಇದೆ. ಈ ಎಲ್ಲ ಭಾಗದ ಜನರು ಚಿಕಿತ್ಸೆಗಾಗಿ ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿಗೆ ಬಂದರೆ ಸಿಬ್ಬಂದಿ ಕೊರತೆ ಪರಿಣಾಮ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಿನದ 24 ಗಂಟೆ ಹೆರಿಗೆ ಸೌಲಭ್ಯ ಎಂಬ ನಾಮಫಲಕವಿದೆ. ಆದರೆ, ಹೆರಿಗೆ ಸಮಯದಲ್ಲಿ ಸಮಸ್ಯೆ ಎದುರಾದರೆ ವೈದ್ಯರಿಲ್ಲದೆ ಚಿಕಿತ್ಸೆ ನೀಡುವವರಾರು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಲಘು ಶಸ್ತ್ರಚಿಕಿತ್ಸೆ ಕೋಣೆ, ಕರ್ತವ್ಯ ನಿರತರ ವೈದ್ಯರ ಕೊಠಡಿ, 6 ಹಾಸಿಗೆಯ ವಾರ್ಡ್‌, ಸುಸಜ್ಜಿತ ಪ್ರಯೋಗಾಲಯ, ಸ್ತ್ರೀ ರೋಗ, ಪ್ರಸೂತಿ ಹೆರಿಗೆ ವಾರ್ಡ್‌, ಶಸ್ತ್ರ ಚಿಕಿತ್ಸೆ ಕೋಣೆಗಳು, ಅನುಭವಿ ಶುಶ್ರೂಷಕಿಯರು ಹಾಗೂ ತಂತ್ರಜ್ಞರು, ಸುವ್ಯವಸ್ಥೆ ವಸತಿ ಗೃಹಗಳಿವೆ.

ಆದರೆ ಸಿಬ್ಬಂದಿ ಹಾಗೂ ವೈದ್ಯರಿಲ್ಲದ ಕಾರಣ ಇವೆಲ್ಲ ಇದ್ದೂ ಇಲ್ಲದಂತಾಗಿದೆ.

ಆರೋಗ್ಯ ಕೇಂದ್ರದಲ್ಲಿ 17 ಸಿಬ್ಬಂದಿ ಇರಬೇಕು. ಆದರೆ ಸದ್ಯ ಕೇವಲ 10 ಸಿಬ್ಬಂದಿ ಇದ್ದಾರೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. 7 ಹುದ್ದೆಗಳು ಖಾಲಿ ಇವೆ.

ಕನಿಷ್ಠ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳನ್ನು ನಿಯೋಜಿಸಿದರೆ ಆಸ್ಪತ್ರೆಗೆ ಬರುವ ರೋಗಿಗಳ ಪರದಾಟ ತಪ್ಪುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಸಮಸ್ಯೆ ಬಗ್ಗೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆಂಬ್ಯುಲೆನ್ಸ್‌ ಸೌಲಭ್ಯವಿಲ್ಲ:

ರಾತ್ರಿ ವೇಳೆ ಈ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗುವುದು ಕಷ್ಟಕರವಾಗಿದೆ. ನಾಯಿ, ಹಾವು ಕಡಿತಕ್ಕೆ ಔಷಧಿ ಇದ್ದರೂ ಕೊಡುವ ವೈದ್ಯರಿಲ್ಲ. ಈ ಆರೋಗ್ಯ ಕೇಂದ್ರದಲ್ಲಿ ಯಾವ ಸೇವಾ ಸೌಲಭ್ಯವಿದೆ ಎಂಬ ವಿಚಾರದ ಬಗ್ಗೆ ಮಾಹಿತಿ ಫಲಕ ಅಳವಡಿಸಿಲ್ಲ. ಆ್ಯಂಬುಲೆನ್ಸ್‌ ಸೌಲಭ್ಯವಿಲ್ಲದೇ ಜನ ಪರದಾಡುವಂತಾಗಿದೆ. ತುರ್ತುಚಿಕಿತ್ಸೆ ಸಂದರ್ಭದಲ್ಲಿ ಕಾರಟಗಿ ಮತ್ತು ಕನಕಗಿರಿ ಹಾಗೂ ಗಂಗಾವತಿಯಿಂದ ಕರೆಸಬೇಕಾದ ಪರಿಸ್ಥಿತಿ ಇದೆ.