ಸಿಂಗಟಾಲೂರು ಬ್ಯಾರೇಜ್‌ ನೀರು ಡೆಡ್‌ ಸ್ಟೋರೇಜ್‌

| Published : May 07 2024, 01:06 AM IST

ಸಿಂಗಟಾಲೂರು ಬ್ಯಾರೇಜ್‌ ನೀರು ಡೆಡ್‌ ಸ್ಟೋರೇಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಹರವಿ, ಕುರುವತ್ತಿ, ಮೈಲಾರ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ ಸೇರಿದಂತೆ ಇತರೆ ಗ್ರಾಮಗಳು ಸಿಂಗಟಾಲೂರು ಬ್ಯಾರೇಜಿನ ಹಿನ್ನೀರು ಇರುವ ಗ್ರಾಮಗಳಾಗಿವೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಕಳೆದೊಂದು ತಿಂಗಳ ಹಿಂದೆ ಭದ್ರಾ ಡ್ಯಾಂನಿಂದ 2 ಟಿಎಂಸಿಯಷ್ಟು ನೀರು ಹರಿದು ಬಂದರೂ ಮತ್ತೆ ತುಂಗಭದ್ರೆ ಸಂಪೂರ್ಣ ಖಾಲಿಯಾಗಿದೆ!

ನದಿ ತೀರ ಆಟದ ಮೈದಾನದಂತಾಗಿದೆ. ಇತ್ತ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ನೀರು ಡೆಡ್‌ ಸ್ಟೋರೇಜ್‌ಗಿಂತ ಕಡಿಮೆ ಇದೆ. ಮೀನು ಸೇರಿದಂತೆ ಇತರೆ ಜಲಚರಗಳು ಸಾಯುತ್ತಿದ್ದು, ನದಿ ನೀರು ಹಸಿರು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ.

ಈಗಾಗಲೇ ಹರವಿ, ಕುರುವತ್ತಿ, ಮೈಲಾರ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ ಸೇರಿದಂತೆ ಇತರೆ ಗ್ರಾಮಗಳು ಸಿಂಗಟಾಲೂರು ಬ್ಯಾರೇಜಿನ ಹಿನ್ನೀರು ಇರುವ ಗ್ರಾಮಗಳಾಗಿವೆ. ಅಲ್ಲಲ್ಲಿ ಸಣ್ಣ ಪುಟ್ಟ ಗುಂಡಿಗಳಲ್ಲಿ ಮಾತ್ರ ನೀರಿದೆ. ಆ ನೀರು ಪಾಚಿಗಟ್ಟಿದ್ದು ರಣ ಬಿಸಿಲಿನ ತಾಪಕ್ಕೆ ನೀರು ಕಾಯ್ದು ಎಲ್ಲ ಜಲಚರಗಳು ಸತ್ತು ಹೋಗಿವೆ. ಇಂತಹ ದುರ್ನಾತ ಬೀರುವ ನೀರನ್ನು ಜಾನುವಾರುಗಳು ಕೂಡ ಕುಡಿಯುತ್ತಿಲ್ಲ.

ತಾಲೂಕಿನ ಹೊಸಹಳ್ಳಿ, ಮಾಗಳ, ಅಲ್ಲಿಪುರ ಗ್ರಾಮಗಳ ವ್ಯಾಪ್ತಿಯಲ್ಲಿನ ಬ್ಯಾರೇಜ್‌ನ ಹಿನ್ನೀರು ಇದೆ. ನಿತ್ಯ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಜಾಕ್‌ವೆಲ್‌ಗಳಿಗೂ ನೀರು ಸಿಗದಂತಹ ಸ್ಥಿತಿ ಇದೆ. ಒಂದು ವಾರ ಕಳೆದರೆ ಸಣ್ಣ ಪುಟ್ಟ ಗುಂಡಿಯಲ್ಲಿನ ನೀರು ಕೂಡ ಖಾಲಿಯಾಗಲಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜಿನಲ್ಲಿ ಡೆಡ್‌ ಸ್ಟೋರೇಜ್‌ಗಿಂತ ಕಡಿಮೆ ನೀರು ಇದೆ. ಗೇಟ್‌ಗಳ ತಳಮಟ್ಟಕ್ಕೆ ನೀರು ನಿಂತಿದೆ. ಸದ್ಯದ ಮಟ್ಟಿಗೆ ಇರುವ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ. ಬಿಸಿಲಿನ ಹೊಡೆತಕ್ಕೆ ನೀರೆಲ್ಲ ಕಾದು ಜಲಚರಗಳು ಸತ್ತಿವೆ. ಇದರಿಂದ ದುರ್ನಾತ ಬೀರುವ ನೀರನ್ನೇ ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿಂದ ಪೂರೈಕೆ ಮಾಡಲಾಗುತ್ತಿದೆ.

ನದಿ ತೀರದಲ್ಲಿರುವ ಬಹುತೇಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನದಿಯಲ್ಲಿ ನೀರಿಲ್ಲದೇ ಬಂದ್‌ ಆಗಿವೆ. ಉಳಿದಂತೆ ಅಲ್ಲಲ್ಲಿ ಗುಂಡಿಯಲ್ಲಿರುವ ನೀರನ್ನು ಜಾಕ್‌ವೆಲ್‌ಗಳಿಗೆ ತಂದು ಪೂರೈಕೆ ಮಾಡಲಾಗುತ್ತಿದೆ. ನದಿಯಲ್ಲಿನ ನೀರು ಒಂದು ವಾರಕ್ಕೆ ಆಗುವಷ್ಟು ಮಾತ್ರ ಸಂಗ್ರಹವಿದೆ.

ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಎಲ್ಲ ಕಡೆಗೂ ಶುದ್ಧ ಕುಡಿಯುವ ನೀರನ್ನೇ ಬಳಕೆ ಮಾಡುತ್ತಿದ್ದಾರೆ. ಇದರಿಂದ ಬಿಸಿಲಿನ ತಾಪಕ್ಕೆ ಶುದ್ಧ ಕುಡಿವ ನೀರಿನ ಬೇಡಿಕೆ ಹೆಚ್ಚಾಗಿದೆ. ಕೆಲವೆಡೆ ಬೇಡಿಕೆಗೆ ತಕ್ಕಂತೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ನೀರು ಸಂಗ್ರಹದ ಸಾಮರ್ಥ್ಯ ಹೆಚ್ಚಳಕ್ಕಾಗಿ ಮೋಟಾರ್‌ ಸೇರಿದಂತೆ ಇನ್ನಿತರ ಉಪಕರಣಗಳನ್ನು ಬದಲಾವಣೆ ಮಾಡಲಾಗುತ್ತಿದೆ.

ಸಿಂಗಟಾಲೂರು ಬ್ಯಾರೇಜಿನಲ್ಲಿ ಪಟ್ಟಣದ 2ನೇ ಹಂತದ ಕುಡಿಯುವ ನೀರು ಪೂರೈಕೆ ಮಾಡುವ ಜಾಕ್‌ವೆಲ್‌ಗೂ ನೀರು ಸಿಗುತ್ತಿಲ್ಲ. ಮುಂದಿನ 10 ರಿಂದ 15 ದಿನಗಳು ಕಳೆದರೆ ಬ್ಯಾರೇಜಿನಲ್ಲಿರುವ ನೀರು ಸಂಪೂರ್ಣ ಬತ್ತಿ ಹೋಗುವ ಸಂಭವವಿದೆ. ಇದರಿಂದ ತಾಲೂಕಿನ ನದಿ ತೀರದ ಹಳ್ಳಿಗಳು ಸೇರಿದಂತೆ ಪಟ್ಟಣದ ಜನತೆಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.

ಭದ್ರಾ ಡ್ಯಾಂನಿಂದ ಬಿಟ್ಟಿದ್ದ ನೀರು ಈಗಾಗಲೇ ಖಾಲಿಯಾಗಿದೆ. ಸಣ್ಣ ಪುಟ್ಟ ಗುಂಡಿಗಳಲ್ಲಿ ನೀರು ನಿಂತಿದೆ. ಇದರಲ್ಲಿನ ಮೀನು ಸೇರಿದಂತೆ ಇತರೆ ಜಲಚರಗಳು ಸತ್ತಿರುವ ಹಿನ್ನೆಲೆಯಲ್ಲಿ ನೀರು ದುರ್ನಾತ ಬೀರುತ್ತಿದೆ. ದನಕರುಗಳು ಕುಡಿಯಲು ಯೋಗ್ಯವಾಗಿಲ್ಲ ಎನ್ನುತ್ತಾರೆ ಮೈಲಾರದ ಪುಟ್ಟಪ್ಪ ತಂಬೂರಿ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ ನೀರು ಡೆಡ್‌ ಸ್ಟೋರೇಜಿಗಿಂತ ಕೆಳಕ್ಕೆ ಹೋಗಿದೆ. ಬಳಕೆಗೆ ಯೋಗ್ಯವಾಗಿಲ್ಲ. ಈಗಾಗಲೇ ಹೂವಿನಹಡಗಲಿ, ಗದಗ ಮತ್ತು ಇತರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್‌ಗಳಿಗೂ ನೀರು ಸಿಗುತ್ತಿಲ್ಲ. ಸದ್ಯದ ನೀರು ಮುಂದಿನ ಒಂದು ವಾರಕ್ಕೆ ಮಾತ್ರ ಸಾಕಾಗಲಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗ-2 ಎಇಇ ರಾಘವೇಂದ್ರ.