ಲೋಕಸಭೆ ಜತೆ ಸುರಪುರ ವಿಧಾನಸಭಾ ಉಪ ಚುನಾವಣೆ ಇಂದು

| Published : May 07 2024, 01:09 AM IST

ಸಾರಾಂಶ

ಲೋಕಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಇದೇ ಸಮಯದಲ್ಲೇ ಘೋಷಣೆಯಾಗಿರುವ ಜಿಲ್ಲೆಯ ಸುರಪುರ (ಶೋರಾಪುರ) ವಿಧಾನಸಭೆಯ ಉಪ ಚುನಾವಣೆ ಮತದಾನ ಮೇ 7ರಂದು ಮಂಗಳವಾರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಲೋಕಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಇದೇ ಸಮಯದಲ್ಲೇ ಘೋಷಣೆಯಾಗಿರುವ ಜಿಲ್ಲೆಯ ಸುರಪುರ (ಶೋರಾಪುರ) ವಿಧಾನಸಭೆಯ ಉಪ ಚುನಾವಣೆ ಮತದಾನ ಮೇ 7ರಂದು ಮಂಗಳವಾರ ನಡೆಯಲಿದೆ.

ಸುರಪುರ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ (ಕಾಂಗ್ರೆಸ್‌) ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಶಾಸಕ ಸ್ಥಾನಕ್ಕೆ ಲೋಕಸಭೆ ಚುನಾವಣೆ ಜೊತೆ ಜೊತೆಗೇ (ಮೇ 7) ಆ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಕಲಬುರಗಿ ಹಾಗೂ ರಾಯಚೂರು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಗೆ ಯಾದಗಿರಿ ಜಿಲ್ಲೆ ನಾಲ್ಕು ವಿಧಾನಸಭಾ ಮತಕ್ಷೇತ್ರಗಳು ಬರುತ್ತವೆ. ಯಾದಗಿರಿ, ಸುರಪುರ ಹಾಗೂ ಶಹಾಪುರ ಈ ಮೂರೂ ಕ್ಷೇತ್ರಗಳು ರಾಯಚೂರು (ಪರಿಶಿಷ್ಟ ಪಂಗಡ ಮೀಸಲು) ಲೋಕಸಭಾ ವ್ಯಾಪ್ತಿಗೆ ಬಂದರೆ, ಜಿಲ್ಲೆಯ ಗುರುಮಠಕಲ್‌ ಕ್ಷೇತ್ರ ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು) ಲೋಕಸಭಾ ವ್ಯಾಪ್ತಿಗೆ ವ್ಯಾಪ್ತಿಗೆ ಬರುತ್ತದೆ.

ಮೇ 7 ರಂದು ನಡೆಯುವ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಸರ್ವಸಿದ್ಧತೆ ಮಾಡಿಕೊಂಡಿದ್ದು, ಶಾಂತಿಯುತ ಮತದಾನಕ್ಕೆ ಮನವಿ ಮಾಡಲಾಗಿದೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು, ಕಳೆದ ಲೋಕಸಭೆ ಚುನಾವಣೆಗೆ (2019) ಹೋಲಿಸಿದರೆ 45,194 ಮತದಾರರು ಹೆಚ್ಚಾಗಿದ್ದಾರೆ. ಹಾಗೆಯೇ, 2023 ರ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ವೇಳೆಯ ಮತದಾರರ ಸಂಖ್ಯೆಯನ್ನೂ ಹೋಲಿಸಿದರೆ, ಈ 10 ತಿಂಗಳುಗಳ ಅವಧಿಯಲ್ಲಿ 33,627 ಮತದಾರರ ನೋಂದಣಿ ಹೆಚ್ಚಿದೆ. ಜಿಲ್ಲೆಯ ಸುರಪುರದಲ್ಲಿ ಹೆಚ್ಚಿನ ಮತದಾರರು ಇದ್ದಾರೆ. ನಂತರದಲ್ಲಿ ಗುರುಮಠಕಲ್‌, ಯಾದಗಿರಿ ಹಾಗೂ ಶಹಾಪುರ ಕ್ಷೇತ್ರದಲ್ಲಿ ಮತದಾರರಿದ್ದಾರೆ.

ಜಿಲ್ಲೆಯ ಒಟ್ಟು ಮತದಾರರು: ಯಾದಗಿರಿ ಜಿಲ್ಲೆಯಲ್ಲಿ 5,15,997 ಪುರುಷರು, 5,17,520 ಮಹಿಳೆಯರು ಹಾಗೂ 69 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 10,33,586 ಮತದಾರರು ಇದ್ದಾರೆ.

ಯಾದಗಿರಿ ವಿಧಾನಸಭಾ ಮತಕ್ಷೇತ್ರದಲ್ಲಿ 1,23,301 ಪುರುಷ, 1,24,827 ಮಹಿಳೆ ಹಾಗೂ 20 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,48,148 ಮತದಾರರು ಇದ್ದಾರೆ.

ಸುರಪುರ ವಿಧಾನಸಭಾ ಮತಕ್ಷೇತ್ರದಲ್ಲಿ 1,42,532 ಪುರುಷ, 1,40,523 ಮಹಿಳಾ ಹಾಗೂ 28 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,83,083 ಮತದಾರರು ಇದ್ದಾರೆ.

ಶಹಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ 1,23,339 ಪುರುಷ, 1,23,784 ಮಹಿಳಾ ಹಾಗೂ 15 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,47,138 ಮತದಾರರು ಇದ್ದಾರೆ.

ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದಲ್ಲಿ 1,26,825 ಪುರುಷ, 1,28,386 ಮಹಿಳಾ ಹಾಗೂ 6 ಜನ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,52,217 ಮತದಾರರು ಇದ್ದಾರೆ.

ಒಟ್ಟು ಮತಗಟ್ಟೆಗಳು: ಮೇ 7 ರಂದು ಮತದಾನಕ್ಕಾಗಿ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1134 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ.

ಸುರಪುರ ಕ್ಷೇತ್ರದಲ್ಲಿ 317 ಮತಗಟ್ಟೆಗಳಿದ್ದು, ಸೂಕ್ಷ್ಮ ಎಂಬ ಕಾರಣಕ್ಕಾಗಿ ಈ ಎಲ್ಲ ಮತಗಟ್ಟೆಗಳಲ್ಲಿ "ವೆಬ್‌ ಕಾಸ್ಟಿಂಗ್‌ " (ಪ್ರಕ್ರಿಯೆನಡೆಯುತ್ತಿರುವ ನೇರ ಪ್ರಸಾರವನ್ನು ಅಧಿಕಾರಿಗಳು ವೀಕ್ಷಿಸುವ ಹಾಗೆ) ಮಾಡಲಾಗುತ್ತಿದೆ.

ಹಾಗೆಯೇ, ಯಾದಗಿರಿ ಕ್ಷೇತ್ರದಲ್ಲಿ 268 ಮತಗಟ್ಟೆಗಳು, ಶಹಾಪುರದಲ್ಲಿ 265 ಹಾಗೂ ಗುರುಮಠಕಲ್‌ ಕ್ಷೇತ್ರದಲ್ಲಿ 284 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ. ಈ ಮತಗಟ್ಟೆಗಳಲ್ಲಿ ಶೇ.70 ರಷ್ಟು ಭಾಗದಲ್ಲಿ "ವೆಬ್‌ ಕಾಸ್ಟಿಂಗ್‌ " ಸೌಲಭ್ಯ ಕಲ್ಪಿಸಲಾಗಿದೆ.