ಯಶಸ್ವಿಯಾಗಿ ಮತದಾನ ನಡೆಸಲು ಜಿಲ್ಲಾಡಳಿತ ಸರ್ವ ಸಿದ್ಧ..!

| Published : May 06 2024, 12:36 AM IST

ಯಶಸ್ವಿಯಾಗಿ ಮತದಾನ ನಡೆಸಲು ಜಿಲ್ಲಾಡಳಿತ ಸರ್ವ ಸಿದ್ಧ..!
Share this Article
  • FB
  • TW
  • Linkdin
  • Email

ಸಾರಾಂಶ

ಮತಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಮತಕ್ಷೇತ್ರಗಳು ಸೇರಿ 9,17,963 ಪುರುಷ, 9,13,949 ಮಹಿಳಾ, 100 ತೃತೀಯಲಿಂಗಿಗಳು ಸೇರಿ ಒಟ್ಟು 18,31,975 ಮತದಾರರು ಮತದಾನಕ್ಕೆ ಅರ್ಹರು. ಅದೇ ರೀತಿ 1,893 ಮತಗಟ್ಟೆಗಳು ಹಾಗೂ ಎಂಟು ಹೆಚ್ಚುವರಿ (ಅಕ್ಸಲರಿ)ಮತಗಟ್ಟೆಗಳು ಸೇರಿ 1,901 ಮತಗಟ್ಟೆಗಳಿವೆ.

ಕನ್ನಡಪ್ರಭ ವಾರ್ತೆ ಧಾರವಾಡ

ಮೇ 7ರಂದು ಮುಕ್ತ, ನಿಷ್ಪಕ್ಷಪಾತ, ಪಾರದರ್ಶಕ, ನ್ಯಾಯಸಮ್ಮತ ಹಾಗೂ ಯಶಸ್ವಿಯಾಗಿ ಮತದಾನ ಜರುಗಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಪ್ರಜ್ಞಾವಂತರ ಜಿಲ್ಲೆಯಾಗಿರುವ ಧಾರವಾಡದಲ್ಲಿ ಅಂದು ಅರ್ಹ ಎಲ್ಲ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಮನವಿ ಮಾಡಿದರು.

ಮತದಾನ ಸಿದ್ಧತೆ ಹಾಗೂ ಮತಗಟ್ಟೆಯಲ್ಲಿ ಮತದಾರರಿಗೆ ಕಲ್ಪಿಸಿರುವ ವ್ಯವಸ್ಥೆ, ಕಾನೂನು ಸುವ್ಯವಸ್ಥೆಗೆ ಕೈಗೊಂಡ ಕ್ರಮಗಳ ಕುರಿತು ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮತಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಮತಕ್ಷೇತ್ರಗಳು ಸೇರಿ 9,17,963 ಪುರುಷ, 9,13,949 ಮಹಿಳಾ, 100 ತೃತೀಯಲಿಂಗಿಗಳು ಸೇರಿ ಒಟ್ಟು 18,31,975 ಮತದಾರರು ಮತದಾನಕ್ಕೆ ಅರ್ಹರು. ಅದೇ ರೀತಿ 1,893 ಮತಗಟ್ಟೆಗಳು ಹಾಗೂ ಎಂಟು ಹೆಚ್ಚುವರಿ (ಅಕ್ಸಲರಿ)ಮತಗಟ್ಟೆಗಳು ಸೇರಿ 1,901 ಮತಗಟ್ಟೆಗಳಿವೆ. ಈ ಬಾರಿ ಎಲ್ಲೆಡೆ ಬಿಸಿಲಿನ ವಾತಾವರಣ ಹೆಚ್ಚಿದೆ. ಹವಾಮಾನ ಇಲಾಖೆ ಬಿಸಿ ಗಾಳಿ, ಶಾಖ ಉಷ್ಣಾಂಶ ಹೆಚ್ಚಳದ ಬಗ್ಗೆ ಮುನ್ನಚ್ಚರಿಕೆ ನೀಡಿದ್ದು, ಸಾರ್ವಜನಿಕರಿಗೆ ಹಾಗೂ ಮತದಾರರಿಗೆ ಈ ಕುರಿತು ಆರೋಗ್ಯ ಸುರಕ್ಷತಾ ಕ್ರಮಗಳನ್ನು ತಿಳಿಸಲಾಗಿದೆ. ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ ಎಂದರು.

8 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನೇಮಕ..

1180 ಪುರುಷರು, 755 ಮಹಿಳೆಯರು ಸೇರಿ ಒಟ್ಟು 1935 ಪಿಆರ್‌ಒಗಳು ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 1153 ಪುರುಷರು, 782 ಮಹಿಳೆಯರು ಸೇರಿ 1935 ಎಪಿಆರ್‌ಓಗಳು, 1574 ಪುರುಷರು, 2296 ಮಹಿಳೆಯರು ಸೇರಿ ಒಟ್ಟು 3870 ಪೊಲಿಂಗ್ ಆಫಿಸರ್‌ಗಳು ಹಾಗೂ ಒಟ್ಟು 346 ಮೈಕ್ರೋ ಆಬ್ಸರವರ್‌ಗಳಿದ್ದು, ಒಟ್ಟಾರೆ 8086 ಸಿಬ್ಬಂದಿಗಳು ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ. ಮತದಾನ ದಿನ ಈ ಸಿಬ್ಬಂದಿ ಸಂಚಾರಕ್ಕೆ ಹಾಗೂ ಇತರ ಚುನಾವಣಾ ಕರ್ತವ್ಯಗಳಿಗೆ ಅಗತ್ಯವಿರುವಂತೆ ಜಿಪಿಎಸ್ ಅಳವಡಿಸಿರುವ ಸುಮಾರು 200 ಬಸ್ಸುಗಳು, 110 ಮ್ಯಾಕ್ಸಿ ಕ್ಯಾಬ್ ಮತ್ತು ಶಾಲಾ ವಾಹನಗಳು ಹಾಗೂ 65 ಕ್ರೂಸರ್ ಗಳು ಸೇರಿ ಒಟ್ಟು 375 ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಲಾಗುವುದು ಎಂದರು.

ಮತದಾನಕ್ಕೆ ಇವಿಎಂ ಬಳಕೆ..

ವಿಧಾನಸಭಾ ಮತಕ್ಷೇತ್ರವಾರು ಡಿ-ಮಸ್ಟರಿಂಗ್ ಕೇಂದ್ರಗಳಲ್ಲಿ ಮೇ 6ರಂದು ಕಾರ್ಯ ಜರುಗಲಿದ್ದು, ಸಿಬ್ಬಂದಿ ತಮಗೆ ನಿಯೋಜಿಸಿದ ವಿಧಾನಸಭಾ ಕ್ಷೇತ್ರದ ಸ್ಥಳಕ್ಕೆ ಹೋಗಿ ಅಲ್ಲಿಂದ ವಾಹನಗಳ ಮೂಲಕ ಸೋಮವಾರ ಸಂಜೆಹೊತ್ತಿಗೆ ಮತಗಟ್ಟೆಗೆ ತೆರಳಲಿದ್ದಾರೆ. ಮತದಾನಕ್ಕೆ ಕಾಯ್ದಿರಿಸಿದ ವಿದ್ಯುನ್ಮಾನ ಮತಯಂತ್ರಗಳನ್ನು ಒಳಗೊಂಡಂತೆ ಒಟ್ಟು 2,429 ಸಿ.ಯು.ಗಳು, 4,602 ಬಿ.ಯು.ಗಳು ಹಾಗೂ 2,559 ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದ್ದು, ಅವುಗಳ ಜೊತೆಗೆ ಆರೋಗ್ಯ ಕಿಟ್‌ಗಳನ್ನು ಸಹ ಕೊಟ್ಟು ಕಳುಹಿಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿಗಳು, ಅಭ್ಯರ್ಥಿಗಳು ಮತಗಟ್ಟೆಯ 200 ಮೀಟರ್‌ ಪ್ರದೇಶ ವ್ಯಾಪ್ತಿಯ ಹೊರಗಡೆ ನಿಯಮಾನುಸಾರ ಅನುಮತಿ ಪಡೆದು, ತಮ್ಮ ಎಲೆಕ್ಷನ್ ಬೂತ್‌ಗಳನ್ನು ಸ್ಥಾಪಿಸಬಹುದು. ಇದಕ್ಕೆ ಪೂರ್ವಾನುಮತಿ ಕಡ್ಡಾಯ. ಬೂತ್‍ಗಳಲ್ಲಿ ಒಂದು ಮೇಜು ಮತ್ತು ಎರಡು ಕುರ್ಚಿಗಳನ್ನು ಮಾತ್ರ ಒದಗಿಸಬೇಕು. ಪಕ್ಷದ ಚಿಹ್ನೆಗಳು, ಛಾಯಾಚಿತ್ರಗಳೊಂದಿಗೆ ಬ್ಯಾನರ್ ಅಳವಡಿಸಲು ಅನುಮತಿಸಲಾಗಿದೆ ಎಂದರು.

ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮತದಾನ ದಿನದಂದು ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಯ ಭಾವಚಿತ್ರ ಹಾಗೂ ಚಿಹ್ನೆ, ಘೋಷಣೆ ಒಳಗೊಂಡ ವೋಟರ್ ಸ್ಲಿಪ್‌ಗಳನ್ನು ಮತದಾರರಿಗೆ ವಿತರಣೆ, ಬಳಕೆ ನಿಷೇಧಿಸಲಾಗಿದೆ. ಮತಗಟ್ಟೆಯೊಳಗೆ ಪ್ರವೇಶ ಮಾಡುವಾಗ ಮತದಾರರು ಹಾಗೂ ಇತರರು, ರಾಜಕಿಯ ಪಕ್ಷ ಅಥವಾ ಅಭ್ಯರ್ಥಿಯ ಭಾವಚಿತ್ರ, ಚಿಹ್ನೆ ಮತ್ತು ಸ್ಲೋಗನ್ ಹೊಂದಿರುವ ಕ್ಯಾಪ್, ಟವಲ್, ಸ್ಕಾರ್ಪ್, ಟೀ ಶರ್ಟ್ ಸೇರಿದಂತೆ ಇಂತಹ ಬಟ್ಟೆಗಳನ್ನು ಧರಿಸಿ, ಮತಗಟ್ಟೆಯ ನಿರ್ಭಂದಿತ ಪ್ರದೇಶದಲ್ಲಿ ಬರಬಾರದು ಮತ್ತು ಯಾವುದೇ ರೀತಿಯ ರಾಜಕೀಯ ಸಂಕೇತಗಳಿಲ್ಲದ ಯಾವುದೇ ಬಣ್ಣದ ಬಟ್ಟೆ ಧರಿಸಿ ಬರಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಸ್ವಿಪ್ ಮುಖ್ಯಸ್ಥರಾದ ಸ್ವರೂಪ ಟಿ.ಕೆ. ಮಾಹಿತಿ ನೀಡಿದರು. 18 ಲಕ್ಷ ಮತದಾರರು

ಮತಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಮತಕ್ಷೇತ್ರಗಳು ಸೇರಿ 9,17,963 ಪುರುಷ, 9,13,949 ಮಹಿಳಾ, 100 ತೃತೀಯಲಿಂಗಿಗಳು ಸೇರಿ ಒಟ್ಟು 18,31,975 ಮತದಾರರಿದ್ದಾರೆ. ಈ ಪೈಕಿ ಮತದಾರ ಪಟ್ಟಿಗೆ 47,204 ಹೊಸದಾಗಿ ನೋಂದಾಯಿತ ಯುವ ಮತದಾರರು, ವಿಕಲಚೇತನರಾದ 25,787 ಹಾಗೂ 18,626 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಸೇರ್ಪಡೆ ಆಗಿದ್ದಾರೆ.ಸ್ವಯಂ ಸೇವಕರ ನೇಮಕ

ಧಾರವಾಡ ಜಿಲ್ಲೆಯ ಪ್ರತಿ ಮತಗಟ್ಟೆಗೂ ಒಬ್ಬರಂತೆ 1901 ಸ್ವಯಂ ಸೇವಕರನ್ನು ಗುರುತಿಸಲಾಗಿದ್ದು, ಮತದಾನದ ದಿನ ವಿಶೇಷಚೇತನರಿಗೆ ಹಾಗೂ ವಯೋವೃದ್ಧರಿಗೆ ಮತದಾನ ಮಾಡಲು ಮತಗಟ್ಟೆ ಒಳಗೆ ಹೋಗಲು ಅಗತ್ಯವಿದ್ದಲ್ಲಿ ಸಹಾಯ ಮಾಡಲು ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಮತಗಟ್ಟೆಗಳಿಗೆ ವೀಲ್ ಚೇರ್ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯವಿದ್ದಲ್ಲಿ ಪ್ಯಾನ್ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನದ ವಿವರ

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,159 ಜನ 12ಡಿ ಅರ್ಜಿಯನ್ನು ಎವಿಇಎಸ್ ಮತದಾರರು ತುಂಬಿಕೊಟ್ಟಿದ್ದರು. 604 ಜನ ಅಂಚೆ ಮೂಲಕ ಮತದಾನ ಮಾಡಿದ್ದಾರೆ. ಚುನಾವಣಾ ಕರ್ತವ್ಯ ನಿರತ ಅನ್ಯ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತದಾನ ಸೌಲಭ್ಯವನ್ನು ನೀಡಲಾಗಿದ್ದು 2,544 ಅಂಚೆ ಮತದಾನಗಳನ್ನು ವಿನಿಮಯ ಮಾಡಲಾಗಿದ್ದು, 1,921 ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಮತದಾನ ಮಾಡಿದ್ದಾರೆ. ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗೆ ಇಡಿಸಿಯನ್ನು ಅನುಮೋದಿಸಲಾಗಿದೆ. 7,863 ಆರ್‌ಒಗಳಿಗೆ ಇಡಿಸಿ ಅನ್ನು ಅನುಮೋದಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಬಂದೋಬಸ್ತ್‌ಗೆ 6 ಸಾವಿರ ಪೊಲೀಸಲು

ಸುಸೂತ್ರವಾಗಿ ಮತದಾನ ಆಗಲು ಪೊಲೀಸ್‌ ಬಂದೋಬಸ್ತ್‌ ಸಹ ಅಗತ್ಯ. ಎಚ್ಚರಿಕೆ ಕ್ರಮವಾಗಿ ಜಿಲ್ಲಾ ಗ್ರಾಮೀಣ ಪ್ರದೇಶದಲ್ಲಿ ಅಪರಾಧಿ ಚಟುವಟಿಕೆಯಲ್ಲಿ ತೊಡಗಬಹುದಾದ 12 ಜನರನ್ನು ಗಡಿಪಾರು ಮಾಡಲಾಗಿದೆ. ಮತದಾನ ದಿನ ಸಿವಿಲ್‌ ಪೊಲೀಸರು, ರಾಜ್ಯ ಆರ್ಮ ಪೊಲೀಸರು, ಕೆಎಸ್‌ಆರ್‌ಪಿ, ಗೃಹರಕ್ಷಕ ಸೇರಿ ಒಟ್ಟು 2200 ಪೊಲೀಸರು ಭದ್ರತೆ ಒದಗಿಸಲಿದ್ದಾರೆ. ಅದೇ ರೀತಿ ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ 21 ಜನರನ್ನು ಗಡಿಪಾರು ಮಾಡಿದ್ದು 1700 ರೌಡಿಶೀಟರ್‌ ಗುರುತಿಸಿ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಅವಳಿ ನಗರ ವ್ಯಾಪ್ತಿಯಲ್ಲಿ ಮತದಾನ ದಿನ ಒಟ್ಟು 4000 ಪೊಲೀಸ ಸಿಬ್ಬಂದಿ ನೇಮಿಸಲಾಗಿದೆ.