ಅನ್ನ ಬೇಡಿದ ಮೂಗ ಮಗುವನ್ನು ನಾಲೆಗೆ ಎಸೆದು ಕೊಂದ ತಾಯಿ!

| Published : May 06 2024, 12:38 AM IST

ಸಾರಾಂಶ

ಭಾನುವಾರ ಬೆಳಗ್ಗೆಯಿಂದ ಪೊಲೀಸರು, ಜೋಯಿಡಾ ಅಗ್ನಿಶಾಮಕ ಸಿಬ್ಬಂದಿ, ಉರಗತಜ್ಞ ರಜಾಕ್ ಷಾ ಮಗುವಿನ ಶೋಧ ಕಾರ್ಯ ನಡೆಸಿದಾಗ ಮನೆಯಿಂದ ಸುಮಾರು ದೂರದಲ್ಲಿ ಮಗುವಿನ ಶವ ಪತ್ತೆಯಾಗಿದೆ.

ದಾಂಡೇಲಿ: ಹಸಿವು ಹಸಿವು ಎಂದು ಅನ್ನ ಬೇಡಿದ 6 ವರ್ಷದ ಮಗನನ್ನು ಹೆತ್ತ ತಾಯಿಯೇ ನಾಲೆಗೆ ಎಸೆದು ಕೊಂದ ಹೃದಯವಿದ್ರಾವಕ ಘಟನೆ ತಾಲೂಕಿನ ಆಲೂರು ಗ್ರಾಪಂ ವ್ಯಾಪ್ತಿಯ ಹಾಲಮಡ್ಡಿಯಲ್ಲಿ ಶನಿವಾರ ತಡರಾತ್ರ ನಡೆದಿದೆ!

ತಾಯಿಯಿಂದ ನಾಲೆಗೆ ಎಸೆಯಲ್ಪಟ್ಟ ನತದೃಷ್ಟ ಬಾಲಕನನ್ನು ವಿನೋದ ಸಿಳೀನಿ (೬) ಎಂದು ಗುರುತಿಸಲಾಗಿದೆ.

ಹಾಲಮಡ್ಡಿಯ ಸಾವಿತ್ರಿ ಮತ್ತು ರವಿಕುಮಾರ ಸಿಳೀನಿ ದಂಪತಿಗೆ ಇಬ್ಬರು ಪುತ್ರರು. ಹಿರಿಯ ಪುತ್ರನಾದ ವಿನೋದ ಮಾತು ಬಾರದ ಮೂಗ. ಮೂರ್ಚೆ ರೋಗ ಕೂಡ ಇತ್ತು. ಅಲ್ಲದೇ ಆಗಾಗ ಹಸಿವು ಹಸಿವು ಎನ್ನುತ್ತಿದ್ದ. ಅತಿಯಾದ ಆಹಾರ ಸೇವಿಸುತ್ತಿದ್ದ. ಒಂದು ರೀತಿಯ ಹಸಿವಿನ ರೋಗ ಇತ್ತು.

ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಪತಿ. ಮನೆಯ ಖರ್ಚು ಮತ್ತು ಮಕ್ಕಳನ್ನು ಸಾಕುವ ವಿಷಯದಲ್ಲಿ ಪತಿ-ಪತ್ನಿಯ ಮಧ್ಯೆ ಆಗಾಗ ಜಗಳವಾಗುತ್ತಿತ್ತಂತೆ. ಈ ಮುಂಚೆ ಗಾಂಧಿ ನಗರದಲ್ಲಿ ವಾಸವಿದ್ದ ಅವರು ಕಳೆದ ಎರಡು ತಿಂಗಳಿಂದ ಹಾಲಮಡ್ಡಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶನಿವಾರ ರಾತ್ರಿ ಪುತ್ರ ವಿನೋದ ಅನ್ನಕ್ಕಾಗಿ ರಚ್ಚೆ ಹಿಡಿದಿದ್ದಾನೆ. ಅದೇ ಕಾಲಕ್ಕೆ ಕುಡಿದು ಬಂದ ಪತಿ ಜಗಳಕ್ಕೆ ನಿಂತಿದ್ದಾನೆ. ಸುಮಾರು ಹೊತ್ತು ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋಗಿದೆ. ಅದರಿಂದ ರೋಸಿಹೋದ ಸಾವಿತ್ರಿ ಅನ್ನಕ್ಕಾಗಿ ಅಂಗಲಾಚುತ್ತಿದ್ದ ಮೂಗ ಮಗುವನ್ನು ಎತ್ತಿಕೊಂಡು ಹೋಗಿ ಮನೆಯ ಮುಂದೆ ಹರಿಯುತ್ತಿದ್ದ ನಾಲೆಯಲ್ಲಿ ಎಸೆದಿದ್ದಾಳೆ.

ಸುಮಾರು ಹೊತ್ತಿನ ಬಳಿಕ ಆವೇಶ ಇಳಿದ ಬಳಿಕ ಮಗುವನ್ನು ನಾಲೆಗೆ ಎಸೆದ ಬಗ್ಗೆ ಪಶ್ಚಾತಾಪವಾಗಿ ರೋಧಿಸಲು ಆರಂಭಿಸಿದ್ದಾಳೆ. ಆಗ ನೆರೆಹೊರೆಯವರು ಬಂದು ಕೇಳಿದಾಗ ವಿಷಯ ತಿಳಿಸಿದ್ದಾಳೆ. ಅವರಲ್ಲಿ ಹಲವರು ಟಾರ್ಚ ಹಿಡಿದು ನಾಲೆಯ ಉದ್ದಕ್ಕೂ ಹುಡುಕಾಡಿದ್ದಾರೆ. ಎಲ್ಲೂ ಪತ್ತೆಯಾಗಿಲ್ಲ. ಬಳಿಕ ಗ್ರಾಮೀಣ ಠಾಣೆಯ ಪೊಲೀಸರಿಗೆ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆಯಿಂದ ಪೊಲೀಸರು, ಜೋಯಿಡಾ ಅಗ್ನಿಶಾಮಕ ಸಿಬ್ಬಂದಿ, ಉರಗತಜ್ಞ ರಜಾಕ್ ಷಾ ಮಗುವಿನ ಶೋಧ ಕಾರ್ಯ ನಡೆಸಿದಾಗ ಮನೆಯಿಂದ ಸುಮಾರು ದೂರದಲ್ಲಿ ಮಗುವಿನ ಶವ ಪತ್ತೆಯಾಗಿದೆ. ಆದರೆ, ಶವದ ಕೈ ಹಾಗೂ ಹೊಟ್ಟೆ ಭಾಗದಲ್ಲಿ ತೀವ್ರ ಗಾಯಗಳಾಗಿವೆ. ಇದು ಬಹುಶಃ ಮೊಸಳೆ ದಾಳಿಯಿಂದ ಆಗಿರಬಹುದು ಎಂದು ಶಂಕಿಸಲಾಗಿದೆ.

ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಮಗುವಿನ ತಾಯಿ, ತಂದೆಯ ವಿರುದ್ಧ ಹತ್ಯೆಯ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಭೀಮಣ್ಣ ಸೂರಿ, ದಾಂಡೇಲಿ ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐಗಳಾದ ಕೃಷ್ಣ ಅರಕೇರಿ, ಜಗದೀಶ್ ನಾಯ್ಕ, ಪೊಲೀಸ್ ಸಿಬ್ಬಂದಿ ಚಿನ್ಮಯಿ ಪತ್ತಾರ, ದಯಾನಂದ, ಮಂಜುನಾಥ, ಅಬ್ದುಲ್ ಪಟೇಲ್, ರವಿ ಚೌಹಾಣ್ ಇದ್ದರು.