ಚುನಾವಣೆಗೆ ಅಧಿಕಾರಿಗಳ ಮಧ್ಯೆ ಸಮನ್ವಯ ಇರಲಿ

| Published : May 07 2024, 01:05 AM IST

ಸಾರಾಂಶ

ಮತದಾರರು ಹಾಗೂ ಮತಗಟ್ಟೆ ಸಿಬ್ಬಂದಿಗೆ ಏನಾದರೂ ಆರೋಗ್ಯದಲ್ಲಿ ತೊಂದರೆಯಾದರೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಕಿಟ್‌ಗಳನ್ನು ನೀಡಬೇಕು

ಕೂಡ್ಲಿಗಿ: ಬಳ್ಳಾರಿ ಲೋಕಸಭೆ ಚುನಾವಣೆ ಹಿನ್ನೆಲೆ ಮೇ ೭ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು ತಿಳಿಸಿದರು.ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಕೂಡ್ಲಿಗಿ ತಾಲೂಕಿನಲ್ಲಿ ಮೇ ೬ ಮತ್ತು ೭ರಂದು ವಿದ್ಯುತ್ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಜೆಸ್ಕಾಂ ಎಇಇ ಪ್ರಕಾಶ್ ಪತ್ತೆನೂರು ಅವರಿಗೆ ಸೂಚಿಸಿದರು.

ಪ್ರತಿ ಮತಗಟ್ಟೆಗಳ ಬಳಿ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು. ಮತದಾರರು ಹಾಗೂ ಮತಗಟ್ಟೆ ಸಿಬ್ಬಂದಿಗೆ ಏನಾದರೂ ಆರೋಗ್ಯದಲ್ಲಿ ತೊಂದರೆಯಾದರೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಕಿಟ್‌ಗಳನ್ನು ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ. ಪ್ರದೀಪ್ ಕುಮಾರ್‌ಗೆ ಸೂಚಿಸಿದರು.

ಮತಕೇಂದ್ರಗಳಲ್ಲಿ ಟೇಬಲ್, ಕುರ್ಚಿಗಳು ಸೇರಿ ಅಗತ್ಯ ಸಲಕರಣೆಗಳನ್ನು ಒದಗಿಸಲು ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂಗೆ ಸೂಚಿಸಿದರು.

ತಾಪಂ ಇಒ ವೈ.ರವಿಕುಮಾರ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಕುಡಿವ ನೀರು, ನೆರಳು, ವಿಕಲಚೇತನರಿಗೆ ವೀಲ್‌ಚೇರ್ ಸೇರಿ ಎಲ್ಲ ಸೌಲಭ್ಯಗಳನ್ನು ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ಸೇರಿ ಸಿಬ್ಬಂದಿ ಅಚ್ಚುಕಟ್ಟಾಗಿ ಒದಗಿಸಬೇಕು. ಲೋಕಸಭೆ ಚುನಾವಣೆಯನ್ನು ಎಲ್ಲರೂ ಸೇರಿ ಮಾಡುವುದರಿಂದ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊಟ್ಟೂರು ತಹಸೀಲ್ದಾರ್ ಜಿ.ಕೆ.ಅಮರೇಶ್, ಜಿಲ್ಲಾ ತರಬೇತುದಾರ ಸೋಮಪ್ಪ ಬಡಿಗೇರ ಸೇರಿ ಸೆಕ್ಟರ್, ನೋಡಲ್ ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.