ಸಾಹಿತ್ಯ ಕ್ಷೇತ್ರದಲ್ಲೂ ಜಾತೀಯತೆ ಸರಿಯಲ್ಲ: ಶ್ರೀರಂಗ ಕಟ್ಟಿ

| Published : May 07 2024, 01:05 AM IST

ಸಾಹಿತ್ಯ ಕ್ಷೇತ್ರದಲ್ಲೂ ಜಾತೀಯತೆ ಸರಿಯಲ್ಲ: ಶ್ರೀರಂಗ ಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನಲ್ಲಿ ನಮ್ಮ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದರೂ ಅನ್ಯ ಭಾಷೆಗಳನ್ನು ಉದಾರತೆಯಿಂದ ಸ್ವೀಕರಿಸಿ, ಗೌರವಿಸುವುದನ್ನು ಕಾಣುತ್ತಿದ್ದೇವೆ ಎಂದು ಶ್ರೀರಂಗ ಕಟ್ಟಿ ತಿಳಿಸಿದರು.

ಯಲ್ಲಾಪುರ: ಸಾಹಿತ್ಯ ಕ್ಷೇತ್ರದಲ್ಲಿಯೂ ಪ್ರಸ್ತುತ ಸಮಾಜದಂತೆ ಜಾತೀಯತೆ ಮತ್ತು ರಾಜಕೀಯ ಅತಿಯಾಗುತ್ತಿರುವುದು ಕನ್ನಡದ ಅಸ್ಮಿತೆಗೆ ಧಕ್ಕೆ ತರುತ್ತಿದೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಕಸಾಪ ಆಯೋಜಿಸುವ ಸಮ್ಮೇಳನಗಳನ್ನು ವಿರೋಧಿಸಿ, ಪ್ರತ್ಯೇಕ ಸಮ್ಮೇಳನ ನಡೆಸುವ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ ಎಂದರೆ, ಇದನ್ನು ಈ ನೆಲಕ್ಕೆ ಮಾಡುತ್ತಿರುವ ದ್ರೋಹವೆಂದೇ ಭಾವಿಸಬೇಕಾಗುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಶ್ರೀರಂಗ ಕಟ್ಟಿ ತಿಳಿಸಿದರು.

ಮೇ ೫ರಂದು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಕಸಾಪ ಘಟಕವು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡಿನಲ್ಲಿ ನಮ್ಮ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದರೂ ಅನ್ಯ ಭಾಷೆಗಳನ್ನು ಉದಾರತೆಯಿಂದ ಸ್ವೀಕರಿಸಿ, ಗೌರವಿಸುವುದನ್ನು ಕಾಣುತ್ತಿದ್ದೇವೆ. ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಇರುವಂತಹ ಭಾಷಾಭಿಮಾನ ನಮ್ಮಲ್ಲಿಲ್ಲ. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಅಂತಹ ಸ್ಥಿತಿ ಬೇಕಾಗಿತ್ತೇನೋ ಅನಿಸುವಂತಾಗಿದೆ. ಆದರೂ, ನಾವು ಎಲ್ಲ ಭಾಷೆಯನ್ನು ಗೌರವ, ಪ್ರೀತಿಯಿಂದ ಸ್ವೀಕರಿಸುವ ವಿಶಾಲ ಹೃದಯ ಬೆಳೆಸಿಕೊಂಡಿದ್ದೇವೆ ಎಂದರು.

ಕಸಾಪ ತಾಲೂಕು ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಕನ್ನಡದ ನೆಲದಲ್ಲಿ ಭಾಷೆಯ ಗಟ್ಟಿತನ ಉಳಿಸಿಕೊಂಡು ನಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಅಗತ್ಯವಾದ ಕನ್ನಡದ ಕುರಿತಾದ ಹೊಸ ಹೊಸ ಚಿಂತನೆಗಳನ್ನು ಶಿಬಿರಗಳ ಮೂಲಕ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡದ ನಾಡಿನ ನಮಗೆ ಕನ್ನಡಕ್ಕಿಂತಲೂ ಆಂಗ್ಲಭಾಷೆಯೇ ಪ್ರಭಾವಶಾಲಿಯಾಗಿ ಕಾಣುತ್ತಿದೆ. ಇಂಗ್ಲಿಷ್ ಅಗತ್ಯವಿದ್ದರೂ ನಮ್ಮ ಮಾತೃಭಾಷೆಯನ್ನು ನಾವೆಂದೂ ನಿರ್ಲಕ್ಷಿಸದೇ ಸ್ವಾಭಿಮಾನ, ಹೆಮ್ಮೆಯಿಂದ ಪ್ರೀತಿಸುವ ಮೂಲಕ ಮುಂದಿನ ಜನಾಂಗಕ್ಕಾಗಿ ಸಂರಕ್ಷಿಸಬೇಕು ಎಂದರು.

ಕಸಾಪ ಕಾರ್ಯದರ್ಶಿ ಜಿ.ಎನ್. ಭಟ್ಟ ತಟ್ಟಿಗದ್ದೆ ಸ್ವಾಗತಿಸಿದರು. ಸಂಜೀವಕುಮಾರ ಹೊಸ್ಕೇರಿ ನಿರ್ವಹಿಸಿ, ವಂದಿಸಿದರು.