ಮಳೆಗಾಗಿ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು

| Published : May 07 2024, 01:05 AM IST

ಮಳೆಗಾಗಿ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಭೀಕರ ಬರಗಾಲ ಆವರಿಸಿರುವುದರಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಮಳೆಗಾಲ ಆರಂಭವಾದರೂ ಮಳೆ ಬರುತ್ತಿಲ್ಲ

ಕನ್ನಡಪ್ರಭ ವಾರ್ತೆ ತಿಪಟೂರು

ಭೀಕರ ಬರಗಾಲ ಆವರಿಸಿರುವುದರಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಮಳೆಗಾಲ ಆರಂಭವಾದರೂ ಮಳೆ ಬರುತ್ತಿಲ್ಲ ಎಂದು ತಾಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಗ್ರಾಮಸ್ಥರು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ವರುಣ ದೇವನಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ನಿರೀಕ್ಷಿತ ಮಳೆಯಾಗದೆ ಕೆರೆ, ಜಲಮೂಲಗಳು ಬತ್ತಿ ಹೋಗುತ್ತಿವೆ. ಜನ-ಜಾನುವಾರುಗಳು ಸೇರಿದಂತೆ ಜೀವ ಸಂಕುಲವು ಹನಿ ನೀರಿಗಾಗಿ ಪರದಾಡುವಂತಾಗಿದೆ. ಮಳೆಗಾಲ ಪ್ರಾರಂಭವಾಗಿ ಭರಣಿ, ಅಶ್ವಿನಿ ಮಳೆಗಳು ಮುಗಿಯುತ್ತಾ ಬಂದಿದ್ದರೂ ವರುಣನ ಕೃಪೆ ಆರಂಭವಾಗಿಲ್ಲ. ಈ ವೇಳೆಗಾಗಲೇ ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಬೇಕಿತ್ತು. ಆದರೆ ಮಳೆರಾಯನ ಕೃಪೆಯಾಗದ ಕಾರಣ ಎಲ್ಲಿ ಮಳೆ ಬರುವುದಿಲ್ಲವೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.

ಸುಡು ಬಿಸಿಲಿಗೆ ಜನ-ಜಾನುವಾರುಗಳು ಹೈರಾಣಾಗಿದ್ದು, ಮಳೆ ಬಂದರೆ ಸಾಕಪ್ಪ ಎಂದು ರೈತರು ಮಳೆಗಾಗಿ ಆಗಸದತ್ತ ಮುಖಮಾಡಿದ್ದಾರೆ. ಪೂರ್ವಜರು ಮಳೆ ಬಾರದಿದ್ದರೆ ಕತ್ತೆ, ಕಪ್ಪೆ, ಮತ್ತು ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸುವ ಮೂಲಕ ವರುಣನಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿದ್ದರು. ಈ ವಾಡಿಕೆಯಂತೆ ಇಲ್ಲಿನ ಆಲ್ಬೂರು ಗ್ರಾಮದಲ್ಲಿ ಶ್ರೀ ಕೆಂಪಮ್ಮದೇವಿ ದೇವಸ್ಥಾನದಲ್ಲಿ ಕತ್ತೆಗಳಿಗೆ ಮದುವೆ ಮಾಡಿಸಿ ನವ ವಧು-ವರರಂತೆ ಕತ್ತೆಗಳನ್ನು ಶೃಂಗಾರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಮಳೆರಾಯನನ್ನು ಭಕ್ತಿಯಿಂದ ಪ್ರಾರ್ಥಿಸಲಾಯಿತು. ಕತ್ತೆಗಳಿಗೆ ಮದುವೆ ಮಾಡಿದರೆ ಒಂದೆರಡು ದಿನಗಳಲ್ಲಿ ಮಳೆ ಬರುತ್ತದೆ ಎಂಬುದು ಹಿರಿಯರ ನಂಬಿಕೆಯಾಗಿದ್ದು, ಗ್ರಾಮಸ್ಥರೂ ಸಹ ಕತ್ತೆಗಳ ಮದುವೆ ಮಾಡಿದ್ದಾರೆಂದು ರೈತ ಸಂಘದ ಮುಖಂಡ ಆಲ್ಬೂರು ಗಂಗಾಧರ್ ತಿಳಿಸಿದ್ದಾರೆ.ಗ್ರಾಪಂ ಮಾಜಿ ಅಧ್ಯಕ್ಷ ಎ.ಬಿ. ಕೃಷ್ಣೇಗೌಡ, ಗ್ರಾಮಸ್ಥರಾದ ಸೋಮಶೇಖರ್, ಗಿರೀಶ್‌ಗೌಡ, ಕೆ. ಗಂಗಾಧರ್, ಕಂಚಿರಾಯಪ್ಪ, ರಮೇಶ್, ಸಂತೋಷ್, ಹೇಮಂತ್, ಪ್ರಸನ್ನಕುಮಾರ್, ಗಂಗಾಧರಯ್ಯ ಮತ್ತಿತರರಿದ್ದರು.