ಸಾಗರ: ೨೫ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಹೆಚ್ಚಿನ ನಿಗಾ

| Published : May 07 2024, 01:05 AM IST

ಸಾಗರ: ೨೫ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಹೆಚ್ಚಿನ ನಿಗಾ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಮತಗಟ್ಟೆಗೆ ನಾಲ್ಕು ಜನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ೧೨೦೦ಕ್ಕಿಂತ ಹೆಚ್ಚು ಮತ ಹೊಂದಿರುವ ಮತಗಟ್ಟೆಗಳಿಗೆ ಐದು ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಎಲ್ಲಾ ಪೋಲಿಂಗ್ ಬೂತ್‌ಗಳಿಗೆ ಆರಕ್ಷಕರ ನೇಮಿಸಲಾಗಿದ್ದು ಅವಶ್ಯಕತೆ ಇರುವ ಕಡೆಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗಳ ನಿಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಸಾಗರ

ಕ್ಷೇತ್ರ ವ್ಯಾಪ್ತಿಯ ಒಟ್ಟು ೨೭೧ ಮತಗಟ್ಟೆಯಲ್ಲಿ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾರರು ನಿರ್ಭೀತಿಯಿಂದ ಬಂದು ಮತ ಚಲಾವಣೆ ಮಾಡುವಂತೆ ಉಪವಿಭಾಗಾಧಿಕಾರಿ ಯತೀಶ್ ಆರ್. ಮನವಿ ಮಾಡಿದ್ದಾರೆ.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಮತಗಟ್ಟೆ ಸಿಬ್ಬಂದಿಗಳಿಗೆ ಇವಿಎಂ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಮಹಿಳಾ ಮತದಾನ ಹೆಚ್ಚಿಸಲು ೪ ಸಖಿ ಬೂತ್, ಯುವಜನ ಬೂತ್, ಸಾಂಪ್ರದಾಯಿಕ ಬೂತ್‌ಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಪ್ರತಿ ಮತಗಟ್ಟೆಗೆ ನಾಲ್ಕು ಜನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ೧೨೦೦ಕ್ಕಿಂತ ಹೆಚ್ಚು ಮತ ಹೊಂದಿರುವ ಮತಗಟ್ಟೆಗಳಿಗೆ ಐದು ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಎಲ್ಲಾ ಪೋಲಿಂಗ್ ಬೂತ್‌ಗಳಿಗೆ ಆರಕ್ಷಕರ ನೇಮಿಸಲಾಗಿದ್ದು ಅವಶ್ಯಕತೆ ಇರುವ ಕಡೆಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗಳ ನಿಯೋಜಿಸಲಾಗಿದೆ ಎಂದರು.ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ:

ತಾಲೂಕಿನ ೨೫ ಮತಗಟ್ಟೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಲ್ಲಿ ಕಳೆದ ಬಾರಿ ಒಂದೇ ಪಕ್ಷದ ಪರವಾಗಿ ಹೆಚ್ಚು ಮತ ಚಲಾವಣೆ ಆಗಿರುವ ಹಿನ್ನೆಲೆಯಲ್ಲಿ ವಿಶೇಷ ಕಣ್ಗಾವಲು ಇರಿಸಲಾಗಿದೆ. ತಾಲೂಕಿನಲ್ಲಿ ೪೯ ಮತಗಟ್ಟೆ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದು ಸುಮಾರು ೨೫ ಬ್ಲೂ ಸ್ಟಾರ್ ಸಿಬ್ಬಂದಿ ನಿಯೋಜಿಸಲಾಗಿದೆ. ಇದರ ಜೊತೆಗೆ ನೆಟ್‌ವರ್ಕ್ ಕೊರತೆ ಇರುವ ಮತಗಟ್ಟೆಗಳ ಮಾಹಿತಿ ನೀಡಲು ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅವರು ವೈಫೈ ಮೂಲಕ ಮಾಹಿತಿ ನೀಡಲಿದ್ದಾರೆ ಎಂದರು.

೧,೨೦೦ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳು ಚುನಾವಣೆ ಯಶಸ್ಸಿಗಾಗಿ ತಮ್ಮದೇ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ೫೪೨ ವೃದ್ಧರು ಮತ್ತು ಅಂಗವಿಕಲರ ಮತದಾನವಿದ್ದು ಈ ಪೈಕಿ ಶೇ.೯೮ ಮತದಾನ ನಡೆದಿದೆ. ಪ್ರತಿ ಮತಗಟ್ಟೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮೆಡಿಕಲ್ ಕಿಟ್‌ನೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು ತುರ್ತು ಚಿಕಿತ್ಸೆಗೆ ನೆರವಾಗಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸೈಯದ್ ಕಲಿಮುಲ್ಲಾ, ಸುರೇಶ್ ಸಹಾನೆ, ಡಾ. ಕೆ.ಪ್ರಭಾಕರ್ ರಾವ್, ಡಾ. ಶಿವಾನಂದ್ ಭಟ್, ತುಕಾರಾಮ್ ಇನ್ನಿತರರು ಹಾಜರಿದ್ದರು.