ಇಂದು ತಪ್ಪದೇ ಮತ ಹಾಕಿ

| Published : Apr 26 2024, 01:33 AM IST / Updated: Apr 26 2024, 06:18 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಮತ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಶುಕ್ರವಾರ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಚುನಾವಣಾ ಆಯೋಗವು ಸಜ್ಜಾಗಿದೆ.

 ಬೆಂಗಳೂರು ;  ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಮತ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಶುಕ್ರವಾರ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಚುನಾವಣಾ ಆಯೋಗವು ಸಜ್ಜಾಗಿದೆ.

ಒಟ್ಟು 14 ಲೋಕಸಭಾ ಕ್ಷೇತ್ರಗಳ 247 ಅಭ್ಯರ್ಥಿಗಳ ಭವಿಷ್ಯ ಶುಕ್ರವಾರ ತೀರ್ಮಾನವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ 30,602 ಮತಗಟ್ಟೆಗಳಲ್ಲಿ ನಡೆಯುವ ಮತದಾನದ ವೇಳೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಒಟ್ಟು 226 ಪುರುಷ ಹಾಗೂ 21 ಮಹಿಳಾ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿಯ ಶೋಭಾ ಕರಂದ್ಲಾಜೆ, ಡಾ.ಸಿ.ಎನ್‌.ಮಂಜುನಾಥ್‌, ವಿ.ಸೋಮಣ್ಣ, ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಡಿ.ಕೆ.ಸುರೇಶ್‌, ಜಯಪ್ರಕಾಶ್ ಶೆಟ್ಟಿ ಸೇರಿದಂತೆ ಹಲವು ಘಟಾನುಘಟಿಗಳು ಕಣದಲ್ಲಿದ್ದಾರೆ.

14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಿಗೂ ಚುನಾವಣಾ ಹಾಗೂ ಭದ್ರತಾ ಸಿಬ್ಬಂದಿ ಗುರುವಾರ ತೆರಳಿ, ಮತದಾನಕ್ಕೆ ಅಗತ್ಯ ಸಕಲ ಸಿದ್ಧತೆ ಕೈಗೊಂಡಿದ್ದಾರೆ.

ಚುನಾವಣಾ ಕಾರ್ಯದಲ್ಲಿ 1.40 ಲಕ್ಷ ಸಿಬ್ಬಂದಿ ತೊಡಗಿದ್ದು, ಇದರ ಜತೆಗೆ ಐದು ಸಾವಿರ ಸೂಕ್ಷ್ಮ ವೀಕ್ಷಕರು, 50 ಸಾವಿರ ಪೊಲೀಸ್‌ ಸಿಬ್ಬಂದಿ, 65 ಸಾವಿರ ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಇವಿಎಂ ಮತ್ತು ವಿವಿಪ್ಯಾಟ್‌ ಸೇರಿದಂತೆ ಅಗತ್ಯ ಸಾಮಗ್ರಿಗಳೊಂದಿಗೆ ಚುನಾವಣಾ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು. ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮಸ್ಟರಿಂಗ್‌ ಕೇಂದ್ರದಲ್ಲಿ ಮತಯಂತ್ರಗಳನ್ನು ವಿಂಗಡಿಸಿ ವಿತರಣೆ ಮಾಡಲಾಯಿತು.

14 ಕ್ಷೇತ್ರದಲ್ಲಿ 2.88 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ. ಇದರಲ್ಲಿ 1.44 ಕೋಟಿ ಪುರುಷರು, 1.43 ಕೋಟಿ ಮಹಿಳೆಯರು ಮತ್ತು 3,067 ಇತರೆ ಮತದಾರರಿದ್ದಾರೆ. ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 30,577 ಪ್ರಮುಖ ಮತಗಟ್ಟೆಗಳಾಗಿದ್ದು, 25 ಉಪ ಮತಗಟ್ಟೆಗಳಾಗಿವೆ.

30,602 ಮತಗಟ್ಟೆಗಳ ಪೈಕಿ 19,701 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲಾ ಮತಗಟ್ಟೆಗಳಲ್ಲಿಯೂ ವೆಬ್‌ ಕಾಸ್ಟಿಂಗ್‌ ನಡೆಯಲಿದೆ. 1370 ಮತಗಟ್ಟೆಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಇನ್ನುಳಿದ ಮತಗಟ್ಟೆಗಳಲ್ಲಿ ಸಶಸ್ತ್ರ ಮೀಸಲು ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅತಿಹೆಚ್ಚು 2911 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಡಿಮೆ ಮತಗಟ್ಟೆಗಳಿದ್ದು, 1842 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅತ್ಯಧಿಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಡಿಮೆ ಒಂಭತ್ತು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಎಡಗೈ ತೋರು ಬೆರಳಿಗೆ ಶಾಯಿ

ಈ ಬಾರಿಯ ಚುನಾವಣೆಯಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಗುರುತಿನ ಶಾಯಿ ಹಾಕಲಾಗುತ್ತದೆ.

 ಈ ದಾಖಲೆ ತೋರಿಸಿ ಮತ ಚಲಾಯಿಸಿ

ಮತದಾರರು ಮತ ಚಲಾಯಿಸಲು ಮತದಾನ ಕೇಂದ್ರಗಳಿಗೆ ಮತದಾರರ ಗುರುತಿನ ಚೀಟಿ ಕೊಂಡೊಯ್ಯಬೇಕು. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಮತಪಟ್ಟಿಯಲ್ಲಿ ಹೆಸರಿದ್ದರೆ ಪರ್ಯಾಯ ದಾಖಲೆಗಳನ್ನು ಕೊಂಡೊಯ್ದು ಮತಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಆಧಾರ್‌ ಕಾರ್ಡ್‌, ನರೇಗಾ ಕಾರ್ಡ್‌, ಬ್ಯಾಂಕ್‌/ಅಂಚೆ ಕಚೇರಿ ನೀಡಿದ ಭಾವಚಿತ್ರ ಇರುವ ಪಾಸ್‌ಬುಕ್‌, ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌, ಚಾಲನಾ ಪರವಾನಗಿ, ಪಾನ್‌ಕಾರ್ಡ್‌, ಪಾಸ್‌ಪೋರ್ಟ್‌, ಭಾವಚಿತ್ರ ಇರುವ ಪಿಂಚಣಿಯ ದಾಖಲೆ, ಕೇಂದ್ರ/ರಾಜ್ಯ/ ಸಾರ್ವಜನಿಕ ಸಂಸ್ಥೆಗಳು ನೀಡಿದ ಭಾವಚಿತ್ರ ಇರುವ ಸೇವಾ ಗುರುತಿನ ಚೀಟಿಗಳು, ಸಂಸದರು, ಶಾಸಕರಿಗೆ ನೀಡಲಾದ ಗುರುತಿನ ಚೀಟಿಗಳು, ವಿಶಿಷ್ಟ ಅಂಗವೈಕಲ್ಯ ಕಾರ್ಡ್‌ಗಳ ಪೈಕಿ ಒಂದನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.

-------------

14 ಕ್ಷೇತ್ರದಲ್ಲಿ 560 ಸಖಿ ಮತಗಟ್ಟೆಮೊದಲ ಹಂತದಲ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 936 ವಿಶೇಷ ಮತಗಟ್ಟೆಗಳಾಗಿವೆ. ಮಹಿಳೆಯರು ಮತದಾನದಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಸಖಿ ಮತಗಟ್ಟೆಗಳಂತೆ ಒಟ್ಟು 560 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಂಗವಿಕಲ ಸಿಬ್ಬಂದಿಯಿಂದ ಕಾರ್ಯನಿರ್ವಹಿಸುವ ಮತಗಟ್ಟೆ 112 ಇವೆ. 264 ಮತಗಟ್ಟೆಗಳು ಮಾದರಿ ಮತಗಟ್ಟೆಗಳಾಗಿವೆ. ಇವುಗಳಲ್ಲಿ ಯುವ ಸಿಬ್ಬಂದಿಯುಳ್ಳ112 ಮತಗಟ್ಟೆ, ಧ್ಯೇಯ ಅಧಾರಿತ ಮತಗಟ್ಟೆ 112 ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಬಿಂಬಿಸುವ 32 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಚಾಮರಾಜನಗರ -9, ಮೈಸೂರು-9, ದಕ್ಷಿಣ ಕನ್ನಡ-5, ಉಡುಪಿ -1, ಹಾಸನ -1, ಕೊಡಗು -5, ಚಿಕ್ಕಮಗಳೂರು -2 ಮತಗಟ್ಟೆಗಳು ಸಾಂಸ್ಕತಿಕ ಹಿನ್ನೆಲೆ ಬಿಂಬಿಸುವ ಮತಗಟ್ಟೆಗಳಾಗಿವೆ.