ಗುಳೇದಗುಡ್ಡ ತಾಲೂಕಿನಲ್ಲಿ ಎರಡು ಪಿಂಕ್ ಮತಗಟ್ಟೆಗಳು

| Published : May 07 2024, 01:04 AM IST

ಸಾರಾಂಶ

ಕನ್ನಡಪ್ರಭವಾರ್ತೆ ಗುಳೇದಗುಡ್ಡತಾಲೂಕಿನ ಖಾನಾಪೂರ ಎಸ್.ಪಿ. ಗ್ರಾಮದಲ್ಲಿ ಒಂದು ಮತ್ತು ಗುಳೇದಗುಡ್ಡ ಪಟ್ಟಣದಲ್ಲಿ ಒಂದು ಹೀಗೆ ಒಟ್ಟು ಎರಡು ಪಿಂಕ್ ಮತಗಟ್ಟೆಗಳನ್ನು ತಾಲೂಕಿನ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ತಾಲೂಕಿನ ಖಾನಾಪೂರ ಎಸ್.ಪಿ. ಗ್ರಾಮದಲ್ಲಿ ಒಂದು ಮತ್ತು ಗುಳೇದಗುಡ್ಡ ಪಟ್ಟಣದಲ್ಲಿ ಒಂದು ಹೀಗೆ ಒಟ್ಟು ಎರಡು ಪಿಂಕ್ ಮತಗಟ್ಟೆಗಳನ್ನು ತಾಲೂಕಿನ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ.

ಪಿಂಕ್ ಮತಗಟ್ಟೆ ಎಂದರೆ, ಮತಗಟ್ಟೆಗೆ ಮಹಿಳಾ ಮತದಾರರನ್ನು ಆಕರ್ಷಣೆ ಮಾಡುವ ದೃಷ್ಟಿಯಿಂದ ಪಿಂಕ್ ಬಣ್ಣವನ್ನು ಬಳಿದು ಗಮನ ಸೆಳೆಯಲಾಗುತ್ತದೆ. ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸುವುದು ಈ ಪಿಂಕ್ ಮತಗಟ್ಟೆಗಳ ಒಂದು ವಿಶೇಷ.ತಾಲೂಕಿನ ಖಾನಾಪುರ ಎಸ್.ಪಿ. ಗ್ರಾಮದ ಪಿಂಕ್ ಮತಗಟ್ಟೆ ಸಂಖ್ಯೆ 104 ಇದ್ದು ಈ ಮತಗಟ್ಟೆಯಲ್ಲಿ 400 ಪುರುಷ ಮತದಾರರಿದ್ದರೆ, 332 ಮಹಿಳಾ ಮತದಾರರಿದ್ದು ಒಟ್ಟು732 ಮತದಾರರು ಮತಚಲಾಯಿಸಲಿದ್ದಾರೆ. ಗುಳೇದಗುಡ್ಡ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಒಂದು ಪಿಂಕ್ ಮತಗಟ್ಟೆ (ಸಂಖ್ಯೆ 23) ಸ್ಥಾಪಿಸಲಾಗಿದ್ದು, ಈ ಮತಗಟ್ಟೆಯಲ್ಲಿ 249 ಪುರುಷ ಮತದಾರರಿದ್ದರೆ, 225 ಮಹಿಳಾ ಮತದಾರರಿದ್ದಾರೆ. ಒಟ್ಟು 474 ಮತದಾರರು ಮತ ಚಲಾಯಿಸಲಿದ್ದಾರೆ.

ಪಿಂಕ್ ಮತಗಟ್ಟೆಯಂತೆಯೇ ಗುಳೇದಗುಡ್ಡ ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ಯುವ ಮತಗಟ್ಟೆ (ಸಂಖ್ಯೆ 44) ಸ್ಥಾಪಿಸಲಾಗಿದ್ದು, ಈ ಮತಗಟ್ಟೆಯಲ್ಲಿ 471 ಪುರುಷ ಮತದಾರರಿದ್ದರೆ, 468 ಮಹಿಳಾ ಮತದಾರರಿದ್ದಾರೆ. ಒಟ್ಟು 939 ಮತದಾರರಿದ್ದಾರೆ. ಗುಳೇದಗುಡ್ಡ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 85 ಮತಗಟ್ಟೆ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 51 ಮತಗಟ್ಟೆಗಳನ್ನು ಹಾಗೂ ಗುಳೇದಗುಡ್ಡ ಪಟ್ಟಣದಲ್ಲಿ 31 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.