ಇಂದು ಮತದಾನ: ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ

| Published : May 07 2024, 01:01 AM IST

ಸಾರಾಂಶ

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದಾರೆ.18-19 ವರ್ಷದ 36,543 ಯುವ ಮತದಾರರಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಲೋಕಸಭೆ ಮೀಸಲು ಕ್ಷೇತ್ರದಲ್ಲಿ ಮೇ 7ರ ಮಂಗಳವಾರ ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆ.7ರಿಂದ ಸಂಜೆ 6ರ ವರೆಗೂ ಮತದಾನ ನಡೆಯಲಿದೆ. ಚುನಾವಣೆಗೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಸಿಬ್ಬಂದಿ ಚುನಾವಣೆಯ ಕರ್ತವ್ಯ ನನಿರ್ವಹಿಸಲು ತಮ್ಮ ತಮ್ಮ ಮತಗಟ್ಟೆಗಳತ್ತ ಸೋಮವಾರ ಹೆಜ್ಜೆ ಹಾಕಿದ್ದಾರೆ.

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದಾರೆ.18-19 ವರ್ಷದ 36,543 ಯುವ ಮತದಾರರಿದ್ದಾರೆ.

ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದ 85 ವರ್ಷ ಮೇಲ್ಪಟ್ಟ 1,149 ಜನ ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಈಗಾಗಲೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿದ್ದಾರೆ. ಕ್ಷೇತ್ರಾದ್ಯಂತ ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಿದ್ಧತೆಯಾಗಿದೆ, ಕೇಂದ್ರ ಪೊಲೀಸ್ ಪಡೆ, ಅರೆಸೇನಾಪಡೆ ಆಗಮಿಸಿದೆ.

11, 396 ಸಿಬ್ಬಂದಿ ನೇಮಕ: ಜಿಲ್ಲೆಯ ಚುನಾವಣೆಯ ಮತದಾನದ ದಿನವೇ 11, 396 ಸಿಬ್ಬಂದಿ ನೇಮಕಗೊಂಡಿದ್ದಾರೆ. ಪ್ರತಿ ಮತಗಟ್ಟೆಗೆ ಓರ್ವ ಪಿ.ಆರ್.ಓ, ಓರ್ವ ಎ.ಪಿ.ಆರ್.ಓ, ಇಬ್ಬರು ಪೊಲಿಂಗ್ ಆಫೀಸರ್ ಇರಲಿದ್ದಾರೆ. ಇದರ ಹೊರತಾಗಿ ಓರ್ವ ಗ್ರೂಪ್ ಡಿ. ಸಿಬ್ಬಂದಿ ಮತ್ತು ಓರ್ವ ಪೊಲೀಸ್ ಪೇದೆ ಇರಲಿದ್ದಾರೆ. 2378 ಮತಗಟ್ಟೆಗೆ ಶೇ.20 ರಷ್ಟು ಹೆಚ್ಚುವರಿ ಸಿಬ್ಬಂದಿ ಸೇರಿ ಪಿ ಆರ್ ಒ -2849,ಎಪಿಆರ್‍ಒ -2849, ಪೆÇಲಿಂಗ್ ಸ್ಟಾಫ್-5698 ಸೇರಿ ಒಟ್ಟು 11,396 ಚುನಾವಣಾ ಸಿಬ್ಬಂದಿಗಳನ್ನು ನಾಳಿನ ಮತದಾನಕ್ಕೆ ನಿಯೋಜಿಸಿದೆ. ಇದರಲ್ಲಿ ಮಹಿಳಾ ಸಖಿ ಮತಗಟ್ಟೆಗೆ 180 ಸಿಬ್ಬಂದಿ ಇದ್ದಾರೆ.

ಬಿಸಿಲು ತಾಪ, ಆ್ಯಂಬುಲೆನ್ಸ್‌: ಬಿಸಿಲಿನ ತಾಪ ಹೆಚ್ಚಿರುವ ಕಾರಣ ಪ್ರತಿ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾರರ ಆರೋಗ್ಯ ಕಾಳಜಿ ಗಮನ ವಹಿಸಲಾಗಿದೆ. ಮತಗಟ್ಟೆಯಲ್ಲಿ ಓ.ಆರ್.ಎಸ್., ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಕಿಟ್ , ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಸಿಬ್ಬಂದಿ ಇರಲಿದ್ದಾರೆ. ನೆರಳಿಗೆ ಶಾಮಿಯಾನ, ವೇಟಿಂಗ್ ರೂಂ, ತುರ್ತು ಸಂದರ್ಭದಲ್ಲಿ ಅರ್ಧ ಗಂಟೆಯಲ್ಲಿ ಅಂಬುಲೆನ್ಸ್ ದೊರೆಯುವಂತೆ ಜಿಲ್ಲೆಯಾದ್ಯಂತ 66 ಅಂಬುಲೆನ್ಸ್ ಗುರುತಿಸಿ, ವಾಹನ ಚಾಲಕರ ಮೊಬೈಲ್ ಸಂಖ್ಯೆ ಪಿ.ಆರ್.ಓ.ಗಳಿಗೆ ನೀಡಲಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಬಿಸಿಲ ತಾಪದವರಿಗೆ ಚಿಕಿತಸೆಗೆಂದೇ ಹಾಸಿಗೆ ಮೀಸಲಿಡಲಾಗಿದೆ.

ಬಸ್ ಸಂಚಾರದಲ್ಲಿ ವ್ಯತ್ಯಯ: ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಸಿಬ್ಬಂದಿಗಳನ್ನು ಕರೆದೊಯ್ಯಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 ರಿಂದ ಒಟ್ಟು 127 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಿದ್ದರಿಂದ 7ರಂದು ಬಸ್ ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಲಬುರಗಿ, ಕಮಲಾಪುರ, ಸೇಡಂ, ಮುಧೋಳ, ಚಿತ್ತಾಪುರ, ಕಾಳಗಿ, ಚಿಂಚೋಳಿ, ಶಹಾಬಾದ ಹಾಗೂ ಕಲಬುರಗಿ ನಗರ ಸಾರಿಗೆ (ಸುಪರ್ ಮಾರ್ಕೇಟ್) ಬಸ್ ನಿಲ್ದಾಣಗಳಿಂದ ವಿವಿಧಡೆ ತೆರಳುವ ದೈನಂದಿನ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಗುಲ್ಬರ್ಗ ವಿ.ವಿ.ಯಲ್ಲಿ ಮತ ಎಣಿಕೆ: ಲೋಕಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಿದೆ. ಈಗಾಗಲೆ ಪಿ.ಆರ್.ಓ, ಎ.ಪಿ.ಆರ್.ಓ. ಗಳಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಮತದಾನ ಮುಕ್ತಾಯದ ನಂತರ ಡಿ-ಮಸ್ಟರಿಂಗ್ ಸೆಂಟರ್ ಮೂಲಕ ಗುಲ್ಬರ್ಗ ವಿ.ವಿ.ಯ ವಿವಿಧ ವಿಭಾಗದಲ್ಲಿ ಸ್ಥಾಪಿಸಲಾದ ಸ್ಟ್ರಾಂಗ್ ರೂಂಗಳಿಗೆ ಸೂಕ್ತ ಭದ್ರತೆಯಲ್ಲಿ ಮತಯಂತ್ರ ತಂದು ಸೀಲ್ ಮಾಡಲಾಗುತ್ತದೆ. ಇಲ್ಲಿಯೇ ಜೂ.4ರಂದು ಮತ ಎಣಿಕೆ ನಡೆಯಲಿದೆ.