ಮುರುಘಾಶ್ರೀ ಮತ್ತೊಂದು ಸಂಕಷ್ಟ ಪರಿಸ್ಥಿತಿ ಎದುರಿಸ್ತಾರಾ ?

| Published : May 07 2024, 01:03 AM IST

ಮುರುಘಾಶ್ರೀ ಮತ್ತೊಂದು ಸಂಕಷ್ಟ ಪರಿಸ್ಥಿತಿ ಎದುರಿಸ್ತಾರಾ ?
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಡಿಸಿಗೆ ಬಸವಪುತ್ಥಳಿ ನಿರ್ಮಾಣ ಅನುದಾನ ಬಳಕೆ ವರದಿ ಸಲ್ಲಿಕೆ

ಕನ್ನಢಪ್ರಭ ವಾರ್ತೆ ಚಿತ್ರದುರ್ಗ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದ ಶಿವಮೂರ್ತಿ ಮುರುಘಾಶರಣರು ಸರ್ಕಾರಿ ಅನುದಾನ ದುರ್ಬಳಕೆಯಂತಹ ಮತ್ತೊಂದು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಾರಾ? ಎಂಬ ಪ್ರಶ್ನೆ ಎದುರಾಗಿದೆ.

ಬಸವ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರುಪಯೋಗವಾಗಿದೆ ಎಂಬ ಆರೋಪದ ಮೇರೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದ ತಂಡ ಮಂಗಳವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಪರಿಶೀಲನಾ ವರದಿ ಸಲ್ಲಿಸಲಿದ್ದು, ವರದಿಯಲ್ಲಿ ಹಣ ದುರುಪಯೋಗವಾಗಿರುವ ಅಂಶಗಳು ನಮೂದಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗೊಂದು ವೇಳೆ ಸರ್ಕಾರಿ ಅನುದಾನ ದುರುಪಯೋಗವಾಗಿದ್ದಲ್ಲಿ ಮುರುಘಾಶರಣರ ಮೇಲೆ ಗಂಭೀರವಾದ ಮತ್ತೊಂದೆರೆಡು ಪ್ರಕರಣಗಳು ದಾಖಲಾಗಲಿವೆ.

ಮುರುಘಾಮಠದ ವತಿಯಿಂದ ನಿರ್ಮಿಸಲಾಗುತ್ತಿರುವ 323 ಅಡಿ ಎತ್ತರದ ಬಸವ ಪುತ್ಥಳಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ 35 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಇದಲ್ಲದೇ ಖಾಸಗಿವಲಯದಿಂದಲೂ ದೇಣಿಗೆ ಹರಿದು ಬಂದಿದೆ. ಅನುದಾನ ಬಿಡುಗಡೆಗೂ ಅಲ್ಲಿ ಆಗಿರುವ ಕಾಮಗಾರಿಗೆ ತಾಳೆಯಾಗದ ಕಾರಣ ಮಾಜಿ ಸಚಿವ ಎಚ್.ಏಕಾಂತಯ್ಯ ಹಿಂದಿನ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ದೂರು ನೀಡಿ ವಾಸ್ತವಾಂಶದ ವರದಿ ನೀಡುವಂತೆ ಮನವಿ ಮಾಡಿದ್ದರ ಮೇರೆಗೆ ಬಿ.ಟಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚಿಸಲಾಗಿತ್ತು.

ಆರಂಭದಲ್ಲಿ ನೂರು ಅಡಿ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ಅನುದಾನ ಕೋರಿ ಸಲ್ಲಿಸಲಾದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಿ ಬಸವ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಪುತ್ಥಳಿ ಎತ್ತರವನ್ನು ನೂರರಿಂದ 323 ಅಡಿಗೆ ಎತ್ತರಿಸಲಾಗಿತ್ತು. 323 ಅಡಿ ಎತ್ತರದ ಪುತ್ಥಳಿಗೆ ಕನಿಷ್ಟವೆಂದರೂ 1500 ಕೋಟಿಗೂ ಹೆಚ್ಚು ಮೊತ್ತ ಬೇಕಾಗಿತ್ತು. ಇಷ್ಟೊದು ದುಬಾರಿ ಪುತ್ಥಳಿ ನಿರ್ಮಾಣಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ನೈಜ ಪ್ರಸ್ತಾಪಗಳು ಕಂಡಿರಲಿಲ್ಲ. ಸರ್ಕಾರ ಕೂಡ ಪರಿಶೀಲಿಸುವ ಉಸಾಬರಿಗೆ ಹೋಗದೆ ಅನುದಾನ ಬಿಡುಗಡೆ ಮಾಡಿದ್ದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿತ್ತು.

ರಾಜ್ಯ ಸರ್ಕಾರ ಪುತ್ಥಳಿ ನಿರ್ಮಾಣಕ್ಕೆ ಒಂದಿಷ್ಟು ಅನುದಾನ ಒದಗಿಸಬಹುದೇ ವಿನಹ ಪೂರ್ಣ ಪ್ರಮಾಣದ ಜವಾಬ್ದಾರಿ ಹೊರುವುದಿಲ್ಲ. ಬಿ.ಟಿ.ಕುಮಾರಸ್ವಾಮಿ ನೇತೃತ್ವದ ಪರಿಶೀಲನಾ ಸಮಿತಿ ಪ್ರತಿ ಹಂತದಲ್ಲಿಯೂ ಲೋಪಗಳ ಹೆಕ್ಕಿ ತೆಗೆದಿದೆ ಎನ್ನಲಾಗಿದೆ. ಪುತ್ಥಳಿ ನಿರ್ಮಾಣ ಸಾಗಿರುವ ನಿಧಾನಗತಿ ಗಮನಿಸಿದರೆ ಅದು ಪೂರ್ಣಗೊಳ್ಳುವುದು ಅಸಾಧ್ಯ. ಸರ್ಕಾರ ಬಿಡುಗಡೆ ಮಾಡಿದ ಅನುದಾನ ಅಪವ್ಯಯದ ಹಾದಿ ತುಳಿದಿದೆ ಎಂಬ ಸಂಗತಿಯ ಸಮಿತಿ ಪ್ರಧಾನವಾಗಿ ತನ್ನ ವರದಿಯಲ್ಲಿ ಬಿಂಬಿಸಿದೆ ಎಂದು ತಿಳಿದು ಬಂದಿದೆ.

ಸರ್ಕಾರಿ ಅನುದಾನ ದುರುಪಯೋಗ ಇಲ್ಲವೇ ಅಪವ್ಯಯ ಕ್ರಿಮಿನಲ್ ಸ್ವರೂಪದ ಅಪರಾಧವಾಗಿದೆ. ಮುರುಘಾಶ್ರೀ ಪೀಠಾಧ್ಯಕ್ಷರಾಗಿರುವಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಖರ್ಚು ವೆಚ್ಚಗಳಿಗೆ ಅವರೇ ಜವಾಬ್ದಾರರಾಗುತ್ತಾರೆ. ಹಾಗಾಗಿ ಮಂಗಳವಾರ ಸಲ್ಲಿಕೆಯಾಗುವ ವರದಿ ಅತ್ಯಂತ ಮಹತ್ವ ಪಡೆದಿದೆ.