ಯೋಗ ಸಮೃದ್ದ ಬದುಕಿನ ಸಾಧನ:ಪಲ್ಲೇದ

| Published : May 06 2024, 12:36 AM IST

ಸಾರಾಂಶ

ಸಂಸ್ಕಾರ ನೀತಿ ನಿಯಮ ಮರೆತಿರುವುದರಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ

ಗದಗ: ಯೋಗ ಇಂದಿನ ಸಮೃದ್ಧ ಬದುಕಿನ ಸಾಧನವಾಗಿ ಆರೋಗ್ಯ ಭಾಗ್ಯ ಕರುಣಿಸುವ ಶಕ್ತಿ ಯೋಗದಲ್ಲಿದೆ. ನಮ್ಮ ಮನಸ್ಸಿನ ಆಶಾ ಬದುಕನ್ನು ನಿಯಂತ್ರಿಸಲು ಯೋಗ ಒಂದು ಅತ್ಯುತ್ತಮ ಸಾಧನವಾಗಿದೆ ಎಂದು ಬಸವ ಯೋಗ ಮಂದಿರದ ಪ್ರಾ.ಕೆ.ಎಸ್. ಪಲ್ಲೇದ ಹೇಳಿದರು.

ಬೆಟಗೇರಿಯ ಹೆಲ್ತ್‌ಕ್ಯಾಂಪ್‌ನಲ್ಲಿರುವ ಕಿತ್ತೂರ ಚೆನ್ನಮ್ಮಗಾರ್ಡನ್‌ನಲ್ಲಿ ಶಿವ ಶರಣಮ್ಮನವರ ಧ್ಯಾನಯೋಗಾಶ್ರಮ ಜಲ್ಲಿಗೇರಿ, ನವರಸ ಕಲಾ ಸಂಘ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ಚೇತಕ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ನಯನತಾರ ಕಲಾ ಸಂಘ ಹಾಗೂ ಗಣೇಶ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಯೋಗ ಶಿಬಿರ, ಸಿರಿಧಾನ್ಯ ಕಾರ್ಯಾಗಾರ ಹಾಗೂ ಮತದಾನ ಜಾಗೃತ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ ಮಹೇಶ್ವರಸ್ವಾಮಿ ಹೊಸಳ್ಳಿಮಠ ಆಶೀರ್ವಚನ ನೀಡಿ, ನಮ್ಮ ಜೀವನ ಶೈಲಿ ಇಂದಿನ ಒತ್ತಡ ಬದುಕಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಸಂಸ್ಕಾರ ನೀತಿ ನಿಯಮ ಮರೆತಿರುವುದರಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ. ನಮ್ಮ ಬದುಕಿಗೆ ಶಿಸ್ತು ಸಂಯಮ ಸದೃಢ ಮನಸ್ಸನ್ನು ರೂಪಿಸಿಕೊಳ್ಳಬೇಕಾದರೆ ಯೋಗ ಮತ್ತು ನಮ್ಮ ನಿತ್ಯ ಬದುಕಿನ ಆಹಾರ ಅಮೂಲ್ಯವಾದದ್ದು ಎಂದರು.

ಸಿರಿಧಾನ್ಯ ಘಟಕದ ಮಾಲತೇಶ ನೆಗಳೂರ ಮಾತನಾಡಿ, ನಮ್ಮ ಆಹಾರ ಧಾನ್ಯಗಳೆಲ್ಲ ಫಾಲಿಶ್ ವ್ಯವಸ್ಥೆ ಒಳಗೊಂಡು ಸತ್ವ ಕಳೆದುಕೊಳ್ಳುತ್ತಿವೆ ಮತ್ತು ಅತಿಯಾದ ಸೌಲಭ್ಯದಿಂದ ಸಮಯದ ಅಭಾವದ ಕಾರಣ ಆಹಾರ ಪದ್ಧತಿ, ಸಂಸ್ಕೃತಿ, ಆಚರಣೆ ಕಳೆದುಕೊಳ್ಳುವದರ ಜತೆಗೆ ನಮ್ಮ ಮಾನಸಿಕ ದೈಹಿಕ ಸಾಮರ್ಥ್ಯ ಕುಗ್ಗಿಸಿಕೊಂಡು ಅನೇಕ ರೋಗಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ ಆದ್ದರಿಂದ ಇಂದಿನ ದಿನಗಳಲ್ಲಿ ಸಿರಿ ಧಾನ್ಯಗಳ ಸೇವನೆ ಅನಿವಾರ್ಯವಾಗಿದೆ ಎಂದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ಲಿಂಗರಾಜ ಬಗಲಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಚಂದ್ರು ನಾವಿ, ಮಹಾಂತೇಶ ಬೇಕರಿ, ಸುನಿತಾ ಕುಬೇರಸಿಂಗ್ ದೊಡ್ಡಮನಿ, ನಾಗರತ್ನ ಬಡಿಗಣ್ಣವರ, ಶೋಭಾ, ರಾಜು ಧೂಳ ಸೇರಿದಂತೆ ಇತರರು ಇದ್ದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ, ವಂದಿಸಿದರು.