ಕಿಂಗ್ಸ್‌ ಅಧಿಪತ್ಯಕ್ಕೆ ಕೊನೆಗೂ ಚೆನ್ನೈ ಬ್ರೇಕ್‌!

| Published : May 06 2024, 12:34 AM IST / Updated: May 06 2024, 04:22 AM IST

ಸಾರಾಂಶ

ಸತತ 5 ಸೋಲಿನ ಬಳಿಕ ಪಂಜಾಬ್‌ ವಿರುದ್ಧ ಗೆದ್ದ ಸಿಎಸ್‌ಕೆ. 11ರಲ್ಲಿ 6ನೇ ಗೆಲುವು. ಪ್ಲೇ-ಆಫ್‌ಗೆ ಇನ್ನಷ್ಟು ಹತ್ತಿರ. ಪಂಜಾಬ್‌ಗೆ 7ನೇ ಸೋಲು. ನಾಕೌಟ್‌ ಕನಸು ಬಹುತೇಕ ಭಗ್ನ. ಚೆನ್ನೈ 9 ವಿಕೆಟ್‌ಗೆ 167. ಪಂಜಾಬ್ 9 ವಿಕೆಟ್‌ಗೆ 139 ರನ್‌. ಜಡೇಜಾ ಆಲ್ರೌಂಡ್‌ ಶೋಗೆ ಒಲಿದ ಗೆಲುವು.

ಧರ್ಮಶಾಲಾ: ಪಂಜಾಬ್‌ ಕಿಂಗ್ಸ್‌ ಸತತ 5 ಸೋಲುಗಳ ಸರಪಳಿಯನ್ನು ಕಳಚಲು 6 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಗೂ ಯಶಸ್ವಿಯಾಗಿದೆ. ಬ್ಯಾಟಿಂಗ್‌ನಲ್ಲಿ ಅಸ್ಥಿರ ಆಟ ಮುಂದುವರಿಸಿದರೂ ಬೌಲಿಂಗ್‌ನಲ್ಲಿ ಮೊನಚು ದಾಳಿ ಮೂಲಕ ಪಂಜಾಬನ್ನು ಹಿಮ್ಮೆಟ್ಟಿಸಿದ ಚೆನ್ನೈ, 24 ರನ್‌ ಗೆಲುವು ಸಾಧಿಸಿದೆ. 

ಇದರೊಂದಿಗೆ 11ರಲ್ಲಿ 6ನೇ ಜಯಭೇರಿ ಬಾರಿಸಿದ ಚೆನ್ನೈ ಪ್ಲೇ-ಆಫ್‌ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪಂಜಾಬ್‌ 11ರಲ್ಲಿ 7ನೇ ಸೋಲು ಕಂಡು ನಾಕೌಟ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

ಟೂರ್ನಿಯಲ್ಲಿ 10ನೇ ಬಾರಿ ಋತುರಾಜ್‌ ಗಾಯಕ್ವಾಡ್‌ ಟಾಸ್‌ ಸೋತಿದ್ದರಿಂದ ಚೆನ್ನೈ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು. 

ಪಂಜಾಬ್‌ನ ದಾಳಿಗೆ ತತ್ತರಿಸಿದ ಚೆನ್ನೈ ಕಲೆಹಾಕಿದ್ದು 9 ವಿಕೆಟ್‌ಗೆ 167 ರನ್‌. ಆದರೆ ಪಂಜಾಬ್‌ ಬ್ಯಾಟರ್‌ಗಳನ್ನು ಚೆನ್ನೈ ಬೌಲರ್‌ಗಳು ಕಟ್ಟಿಹಾಕಿದರು. 9 ವಿಕೆಟ್‌ಗೆ 139 ರನ್‌ ಗಳಿಸಲಷ್ಟೇ ಶಕ್ತವಾಯಿತು. 2ನೇ ಓವರಲ್ಲೇ ಅಪಾಯಕಾರಿ ಬೇರ್‌ಸ್ಟೋವ್(07) ಹಾಗೂ ರೋಸೌ(00) ವಿಕೆಟ್‌ ಕಬಳಿಸಿದ ತುಷಾರ್‌ ದೇಶಪಾಂಡೆ ಚೆನ್ನೈಗೆ ಆರಂಭಿಕ ಮುನ್ನಡೆ ಒದಗಿಸಿದರು. ಈ ಆಘಾತದಿಂದ ತಂಡ ಚೇತರಿಸಿಕೊಳ್ಳಲಿಲ್ಲ. ಪ್ರಭ್‌ಸಿಮ್ರನ್‌(30), ಶಶಾಂಕ್‌ ಸಿಂಗ್‌(27) ಒಂದಷ್ಟು ಸಮಯ ಕ್ರೀಸ್‌ನಲ್ಲಿ ಉಳಿದರೂ ತಂಡವನ್ನು ಗೆಲ್ಲಿಸುವಷ್ಟು ರನ್‌ ಹರಿದುಬರಲಿಲ್ಲ. ಹರ್‌ಪ್ರೀತ್‌(17), ಹರ್ಷಲ್‌(12), ರಾಹುಲ್‌ ಚಹರ್‌(16), ರಬಾಡ(11) ಸೋಲಿನ ಅಂತರ ತಗ್ಗಿಸಿದರು. ಜಡೇಜಾ 4, ಸಿಮರ್‌ಜೀತ್‌, ತುಷಾರ್ ತಲಾ 2 ವಿಕೆಟ್‌ ಕಿತ್ತರು.

ಜಡೇಜಾ ಮಿಂಚು: ಚೆನ್ನೈ ಬ್ಯಾಟರ್‌ಗಳು ಈ ಪಂದ್ಯದಲ್ಲೂ ಕೈಕೊಟ್ಟರು. ಋತುರಾಜ್ ಗಾಯಕ್ವಾಡ್‌ 32, ಡ್ಯಾರಿಲ್‌ ಮಿಚೆಲ್‌ 30 ರನ್‌ ಸಿಡಿಸಿದರೆ, ಕೊನೆವರೆಗೂ ಕ್ರೀಸ್‌ನಲ್ಲಿ ನೆಲೆಯೂರಿದ ಜಡೇಜಾ 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ 43 ರನ್‌ ಚಚ್ಚಿ ತಂಡವನ್ನು 170ರ ಸನಿಹಕ್ಕೆ ತಂದರು. ರಾಹುಲ್‌ ಚಹರ್‌ ಹಾಗೂ ಹರ್ಷಲ್‌ ತಲಾ 3 ವಿಕೆಟ್‌ ಕಿತ್ತರು.ಸ್ಕೋರ್‌: ಚೆನ್ನೈ 20 ಓವರಲ್ಲಿ 167/9 (ಜಡೇಜಾ 43, ಋತುರಾಜ್‌ 32, ಚಹರ್‌ 3-23, ಹರ್ಷಲ್‌ 2-24), ಪಂಜಾಬ್‌ 20 ಓವರಲ್ಲಿ 139/9 (ಪ್ರಭ್‌ಸಿಮ್ರನ್‌ 30, ಶಶಾಂಕ್‌ 27, ಜಡೇಜಾ 3-20) ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ.

ಧೋನಿ 150 ಕ್ಯಾಚ್‌: ಐಪಿಎಲ್‌ನಲ್ಲಿ ದಾಖಲೆ

ಧೋನಿ ಐಪಿಎಲ್‌ನಲ್ಲಿ 150 ಕ್ಯಾಚ್‌ ಪಡೆದರು. ಅವರು ಈ ಸಾಧನೆ ಮಾಡಿದ ಮೊದಲಿಗ. ದಿನೇಶ್ ಕಾರ್ತಿಕ್‌ 146 ಕ್ಯಾಚ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಎ ಬಿಡಿ ವಿಲಿಯರ್ಸ್‌(118), ವಿರಾಟ್‌ ಕೊಹ್ಲಿ(113), ಸುರೇಶ್‌ ರೈನಾ(109) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

16ನೇ ಬಾರಿ: ಜಡೇಜಾ ಐಪಿಎಲ್‌ನಲ್ಲಿ ಚೆನ್ನೈ ಪರ 16ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ಧೋನಿ(15 ಬಾರಿ)ಯನ್ನು ಹಿಂದಿಕ್ಕಿದರು.