ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 100 ಸಿಕ್ಸರ್‌ಗಳ ಮೈಲುಗಲ್ಲು

| Published : May 06 2024, 12:32 AM IST / Updated: May 06 2024, 04:24 AM IST

ಸಾರಾಂಶ

ಈ ಬಾರಿ 100 ಸಿಕ್ಸರ್‌ ದಾಖಲಾದ 2ನೇ ಕ್ರೀಡಾಂಗಣ. ಶನಿವಾರ ಆರ್‌ಸಿಬಿ ಹಾಗೂ ಗುಜರಾತ್‌ ನಡುವಿನ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್‌ಗಳು ದಾಖಲಾಯಿತು.

ಬೆಂಗಳೂರು: ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಸಿಕೊಳ್ಳುವ ಚಿನ್ನಸ್ವಾಮಿ ಕ್ರೀಡಾಂಗಣ ಹೊಸ ಮೈಲುಗಲ್ಲು ಸಾಧಿಸಿದೆ.

 ಈ ಬಾರಿ ಐಪಿಎಲ್‌ನಲ್ಲಿ 100+ ಸಿಕ್ಸರ್‌ಗಳು ದಾಖಲಾದ 2ನೇ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಗಳಿಸಿದೆ.ಶನಿವಾರ ಆರ್‌ಸಿಬಿ ಹಾಗೂ ಗುಜರಾತ್‌ ನಡುವಿನ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್‌ಗಳು ದಾಖಲಾಯಿತು. ಇದರೊಂದಿಗೆ ಈ ಆವೃತ್ತಿಯಲ್ಲಿ ಚಿನ್ನಸ್ವಾಮಿಯಲ್ಲಿ ದಾಖಲಾದ ಸಿಕ್ಸರ್‌ಗಳ ಸಂಖ್ಯೆ 111ಕ್ಕೆ ಏರಿಕೆಯಾಯಿತು. 

ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ 139 ಸಿಕ್ಸರ್‌ಗಳು ಸಿಡಿದಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದದಲ್ಲಿ 92, ಮುಂಬೈನ ವಾಂಖೇಡೆಯಲ್ಲಿ 91, ಡೆಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ 89, ಚೆನ್ನೈನ ಚೆಪಾಕ್‌ನಲ್ಲಿ 78 ಸಿಕ್ಸರ್‌ಗಳು ದಾಖಲಾಗಿವೆ.ಇನ್ನು, ಒಟ್ಟಾರೆ ಐಪಿಎಲ್‌ ಇತಿಹಾಸದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1359 ಸಿಕ್ಸರ್‌ಗಳು ದಾಖಲಾಗಿವೆ. ಮುಂಬೈನ ವಾಂಖೇಡೆ ಕ್ರೀಡಾಂಗಣ(1572) ಮೊದಲ ಸ್ಥಾನದಲ್ಲಿವೆ. ಕೋಲ್ಕತಾ(1167) ಹಾಗೂ ಡೆಲ್ಲಿ(1088) 1000ಕ್ಕಿಂತ ಹೆಚ್ಚು ಸಿಕ್ಸರ್‌ಗಳು ಸಿಡಿದ ಮತ್ತೆರಡು ಕ್ರೀಡಾಂಗಣಗಳು.

ಪವರ್‌-ಪ್ಲೇನಲ್ಲಿ ಕನಿಷ್ಠ ಸ್ಕೋರ್‌: ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಆರ್‌ಸಿಬಿ, ಗುಜರಾತನ್ನು 147ಕ್ಕೆ ನಿಯಂತ್ರಿಸಿತು. ಗುಜರಾತ್‌ ಪವರ್-ಪ್ಲೇನಲ್ಲಿ ಗಳಿಸಿದ್ದು 3 ವಿಕೆಟ್‌ಗೆ 23 ರನ್‌. ಇದು ಈ ಐಪಿಎಲ್‌ನಲ್ಲೇ ಕನಿಷ್ಠ. ಒಟ್ಟಾರೆ ಐಪಿಎಲ್‌ನಲ್ಲಿ ಗುಜರಾತ್‌ನ ಕನಿಷ್ಠ ಮೊತ್ತವೂ ಹೌದು.