ಸನ್‌ರೈಸರ್ಸ್‌ಗೆ ಮುಂಬೈ ಟೆಸ್ಟ್‌: ಗೆದ್ದರೆ ಪ್ಲೇ-ಆಫ್‌ಗೆ ಹತ್ತಿರ

| Published : May 06 2024, 12:31 AM IST / Updated: May 06 2024, 04:25 AM IST

ಸಾರಾಂಶ

ಆಡಿರುವ 11 ಪಂದ್ಯಗಳಲ್ಲಿ ಕೇವಲ 3 ಗೆದ್ದಿರುವ ಮುಂಬೈಗೆ ಇದು ಪ್ರತಿಷ್ಠೆಯ ಪಂದ್ಯ. ತಂಡ 8 ಪಂದ್ಯಗಳಲ್ಲಿ ಸೋತು ಪ್ಲೇ-ಆಫ್‌ನಿಂದ ಹೊರಬಿದ್ದಿದೆ.

ಮುಂಬೈ: 2020ರ ಬಳಿಕ ಮೊದಲ ಬಾರಿ ಪ್ಲೇ-ಆಫ್‌ಗೇರುವ ನಿರೀಕ್ಷೆಯಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಮಹತ್ವದ ಪಂದ್ಯದಲ್ಲಿ ಸೋಮವಾರ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಾಡಲಿದೆ. ಸನ್‌ರೈಸರ್ಸ್‌ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಜಯಭೇರಿ ಬಾರಿಸಿದ್ದು, ಮತ್ತೊಂದು ಗೆಲುವು ತಂಡವನ್ನು ಪ್ಲೇ-ಆಫ್‌ನ ಸನಿಹಕ್ಕೆ ತಂದು ನಿಲ್ಲಿಸಲಿದೆ. ಆದರೆ 11ರಲ್ಲಿ 8 ಪಂದ್ಯ ಸೋತಿರುವ ಮುಂಬೈನ ಪ್ಲೇ-ಆಫ್‌ ಬಾಗಿಲು ಬಂದ್‌ ಆಗಿದ್ದು, ಅಧಿಕೃತಗೊಳ್ಳುವುದು ಮಾತ್ರ ಬಾಕಿಯಿದೆ. ಹೀಗಾಗಿ ತಂಡ ಪ್ರತಿಷ್ಠೆಗಾಗಿ ಆಡಬೇಕಿದೆ.

ಸನ್‌ರೈಸರ್ಸ್‌ ಆಕ್ರಮಣಕಾರಿ ಆಟದ ಮೂಲಕವೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತರೂ ತಂಡ ಬಲಿಷ್ಠವಾಗಿಯೇ ತೋರುತ್ತಿದ್ದು, ಮುಂಬೈ ವಿರುದ್ಧ ಈ ಬಾರಿ ಸತತ 2ನೇ ಜಯದ ಕಾತರದಲ್ಲಿದೆ.ಅತ್ತ ಮುಂಬೈ ಒಂದಿಬ್ಬರ ವೈಯಕ್ತಿಕ ಆಟ ಹೊರತುಪಡಿಸಿ ಎಲ್ಲಾ ವಿಭಾಗದಲ್ಲೂ ವಿಫಲವಾಗಿದೆ. ಸುಧಾರಿತ ಪ್ರದರ್ಶನ ನೀಡಿ ಅಂಕಪಟ್ಟಿಯ ಕೊನೆ ಸ್ಥಾನದಿಂದ ಮೇಲೇರುವುದು ತಂಡದ ಮುಂದಿರುವ ಗುರಿ.

ಒಟ್ಟು ಮುಖಾಮುಖಿ: 22ಹೈದ್ರಾಬಾದ್‌: 10ಮುಂಬೈ: 12

ಸಂಭವನೀಯರ ಪಟ್ಟಿ

ಹೈದ್ರಾಬಾದ್‌: ಅಭಿಷೇಕ್‌, ಹೆಡ್‌, ಅನ್ಮೋಲ್‌, ಕ್ಲಾಸೆನ್‌, ನಿತೀಶ್‌, ಸಮದ್‌, ಶಾಬಾಜ್‌, ಯಾನ್ಸೆನ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ನಟರಾಜನ್‌.ಮುಂಬೈ: ಇಶಾನ್‌, ರೋಹಿತ್‌, ಸೂರ್ಯಕುಮಾರ್‌, ತಿಲಕ್‌, ನೇಹಲ್‌, ಹಾರ್ದಿಕ್‌(ನಾಯಕ), ಡೇವಿಡ್‌, ಕೋಟ್ಜೀ, ಚಾವ್ಲಾ, ಬೂಮ್ರಾ, ತುಷಾರ.

ಪಂದ್ಯ: ಸಂಜೆ 7.30ಕ್ಕೆ