ಸಾರಾಂಶ
ಹೊಸಕೆರೆ ಬಳಿ ಬೋನಿಗೆ ಬಿದ್ದ ಚಿರತೆ ಜಯಪುರ
ಕನ್ನಡಪ್ರಭ ವಾರ್ತೆ ಜಯಪುರ
ಜಯಪುರ ಗ್ರಾಮದ ಹೊಸಕೆರೆಯ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಮಂಗಳವಾರ ರಾತ್ರಿ ಸುಮಾರು 7 ರಿಂದ 8 ವರ್ಷ ವಯಸ್ಸಿನ ಗಂಡು ಚಿರತೆಯೊಂದು ಸೆರೆಯಾಗಿದೆ.ಸೋಮವಾರ ಹೊಸಕೆರೆಯ ಸಮೀಪವಿರುವ ಹೊಲಗದ್ದೆಗಳಲ್ಲಿ ಭಾರಿ ಗಾತ್ರದ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಸ್ಥಳೀಯ ರೈತರು ಹುಲಿ ಹೆಜ್ಜೆ ಗುರುತು ಇರಬಹುದೆಂದು ಹೆದರಿ, ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದು ಪರಿಶೀಲಿಸಿದ ಅಧಿಕಾರಿಗಳು ಮಂಗಳವಾರ ಸಂಜೆ ಬೋನು ಇಟ್ಟು ಹೋಗಿದ್ದರು.
ಚಿರತೆಯು ದೊಡ್ಡದಾಗಿದ್ದು, ಇದರ ಹೆಜ್ಜೆ ಗುರುತುಗಳು ಹುಲಿಯ ಹೆಜ್ಜೆಯಂತೆ ಕಾಣುತ್ತವೆ. ವೈದ್ಯಕೀಯ ಪರೀಕ್ಷೆಯ ನಂತರ ಕಾಡಿಗೆ ಬಿಡಲಾಗುವುದು ಎಂದು ಎಸಿಎಫ್ ಲಕ್ಷ್ಮೀಕಾಂತ್ ತಿಳಿಸಿದರು.ಆರ್ ಎಫ್ ಓ ಸುರೇಂದ್ರ, ಡಿಆರ್ ಎಫ್ ಒ ಮೋಹನ್ ಕುಮಾರ್, ಬೀಟ್ ಫಾರೆಸ್ಟರ್ ರಾಜೇಗೌಡ ಇದ್ದರು.