ಸಾರಾಂಶ
ಬೆಂಗಳೂರು: ಬಿಜಿನೆಸ್ ವೀಸಾ ಪಡೆದು ಭಾರತಕ್ಕೆ ಬಂದು ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ವಿದೇಶಿ ಡ್ರಗ್ಸ್ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ನೈಜಿರಿಯಾ ಮೂಲದ ಹೇನ್ರಿ ಚುಕ್ವೇಮೇಕಾ(32) ಬಂಧಿತ ಪೆಡ್ಲರ್. ಆರೋಪಿಯಿಂದ ಬರೋಬ್ಬರಿ ನಾಲ್ಕು ಕೋಟಿ ರು. ಮೌಲ್ಯದ 4 ಕೆ.ಜಿ. ಎಂಡಿಎಂಎ ಕ್ರಿಸ್ಟೆಲ್ ಮಾದಕವಸ್ತು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಯೊಬ್ಬ ಮಾದಕವಸ್ತು ಮಾರಾಟದಲ್ಲಿ ತೊಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಿಜಿನೆಸ್ ವೀಸಾದಡಿ ಬಂದು ಡ್ರಗ್ಸ್ ಬಿಜಿನೆಸ್: ಆರೋಪಿ ಹೇನ್ರಿ 2022ರಲ್ಲಿ ಬಿಜಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದ. ಬಳಿಕ ಬೆಂಗಳೂರಿನ ಜಾಲಹಳ್ಳಿ ಸಪ್ತಗಿರಿ ಕಾಲೇಜು ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಮುಂಬೈ, ದೆಹಲಿ ಸೇರಿದಂತೆ ವಿದೇಶಗಳಲ್ಲಿರುವ ಪರಿಚಿತ ಡ್ರಗ್ಸ್ ಪೆಡ್ಲರ್‌ಗಳ ಮುಖಾಂತರ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟೆಲ್ ಮಾದಕವಸ್ತು ಖರೀದಿಸಿ, ಕೋರಿಯರ್ ಮುಖಾಂತರಕ್ಕೆ ನಗರಕ್ಕೆ ತರಿಸಿಕೊಳ್ಳುತ್ತಿದ್ದ. ಬಳಿಕ ಪರಿಚಿತ ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಗಿರಾಕಿಗಳಿಂದ 1 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌ಗೆ 8 ರಿಂದ 10 ಸಾವಿರ ರು. ಪಡೆಯುತ್ತಿದ್ದ.
ಆನ್‌ಲೈನ್ ವ್ಯವಹಾರ: ಆರೋಪಿಯು ವ್ಯಾಟ್ಸಾಪ್‌ನಲ್ಲಿ ಗಿರಾಕಿಗಳಿಗೆ ಮಾದಕವಸ್ತು ಬಗ್ಗೆ ಮಾಹಿತಿ ನೀಡುತ್ತಿದ್ದ. ಗಿರಾಕಿಗಳ ಬೇಡಿಕೆ ಆಧರಿಸಿ ನಿರ್ದಿಷ್ಟ ಸ್ಥಳದಲ್ಲಿ ಮಾದಕವಸ್ತು ಇರಿಸಿ, ಗಿರಾಕಿಗಳಿಗೆ ಮಾಹಿತಿ ನೀಡುತ್ತಿದ್ದ. ಬಳಿಕ ಗಿರಾಕಿಗಳಿಂದ ಆನ್‌ಲೈನ್ ಮೂಲಕ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.ಡ್ರಗ್ಸ್ ಸಂಗ್ರಹಿಸಲು ಪ್ರತ್ಯೇಕ ಮನೆ!: ಹೊರರಾಜ್ಯಗಳು ಹಾಗೂ ವಿದೇಶಗಳಿಂದ ಪರಿಚಿತ ಪೆಡ್ಲರ್‌ಗಳ ಮುಖಾಂತರ ಕೋರಿಯರ್ ಮುಖಾಂತರ ಮಾದಕವಸ್ತು ತರಿಸುತ್ತಿದ್ದ ಆರೋಪಿಯು ಹೇನ್ರಿ, ಈ ಮಾದಕವಸ್ತು ಸಂಗ್ರಹಿಸಲು ಮತ್ತೊಂದು ಮನೆ ಬಾಡಿಗೆಗೆ ಪಡೆದಿದ್ದ. ಕೋರಿಯರ್‌ಗೆ ಪಕ್ಕದ ಮನೆಯ ವಿಳಾಸ ನೀಡಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ಆತನ ಮನೆಯ ಮೇಲೆ ದಾಳಿ ಮಾಡಿದಾಗ ಬರೋಬ್ಬರು 4 ಕೋಟಿ ರು. ಮೌಲ್ಯದ ಮಾದಕವಸ್ತು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.