ಸಾರಾಂಶ
ಬೆಂಗಳೂರು : ಇನ್‌ಸ್ಟಾಗ್ರಾಂ ಗೆಳೆಯನ ಮಾತು ನಂಬಿ ಷೇರು ಮಾರುಕಟ್ಟೆಯಲ್ಲಿ ₹1.21 ಕೋಟಿ ಹೂಡಿಕೆ ಮಾಡಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಕೈಸುಟ್ಟುಕೊಂಡಿರುವ ಘಟನೆ ನಡೆದಿದೆ.
ಶಿವಾಜಿನಗರ ಸಮೀಪದ ಲಾಂಗ್ ಪೋರ್ಟ್ ಟೌನ್ ನಿವಾಸಿ ಶಬೀರ್ ಮೋಸ ಹೋಗಿದ್ದು, ಸಂತ್ರಸ್ತನ ದೂರಿನ ಮೇರೆಗೆ ಆತನ ಇನ್‌ಸ್ಟಾಗ್ರಾಂ ಗೆಳೆಯನ ವಿರುದ್ಧ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಆತನಿಗೆ ಅಪರಿಚಿತನ ಪರಿಚಯವಾಗಿದೆ. ಆಗ ಟ್ರೇಡಿಂಗ್ ವ್ಯವಹಾರದ ಬಗ್ಗೆ ಸಲಹೆ ನೀಡಿದ ಆತ, ನಾನು ಹೇಳಿದಂತೆ ಹೂಡಿಕೆ ಮಾಡಿದರೆ ಕೋಟಿ ಕೋಟಿ ಹಣ ಸಂಪಾದಿಸಬಹುದು ಎಂದಿದ್ದಾನೆ. ಈತನ ನಾಜೂಕಿನ ಮಾತು ನಂಬಿದ ಬಳಿಕ ಶಬೀರ್‌ನನ್ನು ತನ್ನ ವಂಚನೆ ಜಾಲದ ವಾಟ್ಸ್ ಗ್ರೂಪ್‌ಗೆ ಆರೋಪಿ ಸೇರಿಸಿದ್ದಾನೆ.
ಆ ಗ್ರೂಪ್‌ನಲ್ಲಿ ಷೇರು ವ್ಯವಹಾರದ ಚರ್ಚೆ ನಡೆದು ಸಲಹೆ ಕೊಟ್ಟಿದ್ದಾನೆ. ಆಗ ಆರೋಪಿ ಮಾತಿನಂತೆ ಮೊದಲು ಅಲ್ಪಾ ಪ್ರಮಾಣದ ಹಣ ಹೂಡಿಕೆ ಮಾಡಿದಾಗ ₹1.07 ಲಕ್ಷ ಲಾಭ ಬಂದಿದೆ. ಇದರಿಂದ ಉತ್ತೇಜಿತನಾದ ಸಂತ್ರಸ್ತ, ಕೊನೆಗೆ ಹಂತ ಹಂತವಾಗಿ ₹1.21 ಕೋಟಿ ಹೂಡಿಕೆ ಮಾಡಿ ಶಬೀರ್ ಹಣ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಚಿತ್ರ ಮಂದಿರದಲ್ಲಿ ಅಶ್ಲೀಲ ವಿಡಿಯೋ
ಚಿತ್ರೀಕರಣಕ್ಕೆ ಯತ್ನಿಸಿದ ಅಪ್ರಾಪ್ತರು
ಬೆಂಗಳೂರು : ನಗರದ ಪ್ರತಿಷ್ಠಿತ ಚಿತ್ರಮಂದಿರವೊಂದರ ಮಹಿಳೆಯರ ಶೌಚಾಲಯದ ಕಿಟಕಿಯಲ್ಲಿ ಮೊಬೈಲ್ ಇಟ್ಟು ಅಶ್ಲೀಲ ವಿಡಿಯೋ ಚಿತ್ರೀಕರಿಸುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರು ಕಲಾಸಿಪಾಳ್ಯ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಈ ಇಬ್ಬರು ಅಪ್ರಾಪ್ತ ಬಾಲಕರು ಜಯನಗರದ ಸಮೀಪ ನಿವಾಸಿಗಳಾಗಿದ್ದು, ಓದದೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಇತ್ತೀಚಿಗೆ ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾದ ಪ್ರದರ್ಶನವಾಗುತ್ತಿದ್ದ ಊರ್ವಶಿ ಚಿತ್ರಮಂದಿರದಲ್ಲಿ ಈ ಬಾಲಕರು ದುಷ್ಕೃತ್ಯ ಎಸಗಿದ್ದಾರೆ.
ಚಿತ್ರಮಂದಿರಕ್ಕೆ ಭೀಮಾ ಸಿನಿಮಾ ನೋಡಲು ಸೆಕೆಂಡ್ ಶೋಗೆ ಆ.10ರಂದು ದೂರುದಾರೆ ಮಹಿಳೆ ಹೋಗಿದ್ದರು. ಆಗ ರಾತ್ರಿ 11.30ರ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದಾಗ ಕಿಟಕಿ ಬಳಿ ಮೊಬೈಲ್ ಕಂಡು ಆಕೆ ಜೋರಾಗಿ ಕಿರುಚಿದ್ದಾರೆ. ತಕ್ಷಣವೇ ಕಿಟಕಿಯಲ್ಲಿಟ್ಟಿದ್ದ ಮೊಬೈಲ್ ತೆಗೆದುಕೊಂಡು ಅಪ್ರಾಪ್ತರು ಪರಾರಿಯಾಗಿದ್ದರು. ಈ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಚಿತ್ರಮಂದಿರದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆಗಿಳಿದಿದ್ದಾರೆ. ಆಗ ಕೊನೆಗೆ ಅಪ್ರಾಪ್ತರು ಸಿಕ್ಕಿಬಿದ್ದಿದ್ದಾರೆ. ಬಳಿಕ ಅಪ್ರಾಪ್ತರಿಗೆ ಎಚ್ಚರಿಕೆ ಕೊಟ್ಟು ಠಾಣಾ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.