ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ) ನಗರದ ಸರ್. ಎಂ.ವಿಶ್ವೇಶ್ವರಯ್ಯ 7ನೇ ಹಂತದ ಬಡಾವಣೆ ರಚನೆಗಾಗಿ 2003ರಲ್ಲಿ ವ್ಯಕ್ತಿಯೊಬ್ಬರಿಂದ ವಶಪಡಿಸಿಕೊಂಡಿದ್ದ 15 ಗುಂಟೆ ಜಮೀನಿಗೆ ಪರಿಹಾರವಾಗಿ ₹1.80 ಕೋಟಿ ಬೆಲೆಯ (ಪ್ರಸ್ತುತ ಮಾರ್ಗಸೂಚಿ ದರ) ಅಭಿವೃದ್ಧಿಪಡಿಸಿದ ನಿವೇಶನ ನೀಡುವುದಾಗಿ ಭರವಸೆ ನೀಡಿದೆ.ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಗಿಡದಕೊನೇನಹಳ್ಳಿಯಲ್ಲಿ ತನಗೆ ಸೇರಿದ 15 ಗುಂಟೆ ಜಮೀನನ್ನು 2003ರಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಬಿಡಿಎ ಕ್ರಮ ಪ್ರಶ್ನಿಸಿ ನಗರದ ಮುದ್ದಯ್ಯನಪಾಳ್ಯದ ನಿವಾಸಿ ಮುದ್ದೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಬಿಡಿಎ ಆಯುಕ್ತ ಎನ್.ಜಯರಾಮ್ ಪ್ರಮಾಣ ಪತ್ರ ಸಲ್ಲಿಸಿ ಈ ಭರವಸೆ ನೀಡಿದ್ದಾರೆ.
ಅರ್ಜಿಯನ್ನು ಫೆ.13ರಂದು ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಭೂಮಿ ವಶಪಡಿಸಿಕೊಂಡು 21 ವರ್ಷವಾದರೂ ಪರಿಹಾರ ನೀಡದೇ ಇರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿ ಅರ್ಜಿದಾರರಿಗೆ ಯಾವಾಗ ಪರಿಹಾರ ನೀಡಲಾಗುತ್ತದೆ ಎನ್ನುವುದನ್ನು ನಿಖರವಾಗಿ ತಿಳಿಸುವಂತೆ ಬಿಡಿಎ ಆಯುಕ್ತರಿಗೆ ಸೂಚಿಸಿತ್ತು.ಗುರುವಾರ ವಿಚಾರಣೆಗೆ ಬಂದಾಗ ಬಿಡಿಎ ಆಯುಕ್ತರ ಪರ ವಕೀಲ ಬಿ.ವಚನ್ ಹಾಜರಾಗಿ ಅರ್ಜಿದಾರರಿಗೆ ಪರಿಹಾರವಾಗಿ ನೀಡುವ ನಿವೇಶನ ಮತ್ತು ಅದರ ಮಾರ್ಗಸೂಚಿ ದರ ಕುರಿತ ಮಾಹಿತಿಯನ್ನು ವಿವರಿಸಿ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು. ಈ ಪ್ರಮಾಣ ಪತ್ರ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಪ್ರಮಾಣ ಪತ್ರದ ವಿವರ:ಅರ್ಜಿದಾರರಿಂದ ವಶಪಡಿಸಿಕೊಂಡ ಜಮೀನಿಗೆ ಸರ್ಕಾರ 2018ರಲ್ಲಿ ಹೊರಡಿಸಿದ ಆದೇಶದನ್ವಯ 2003ರಲ್ಲಿ ಅರ್ಜಿದಾರರು ₹12.81 ಲಕ್ಷ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಸದ್ಯದ ಮಾರ್ಗಸೂಚಿ ಬೆಲೆಯ ಅನುಸಾರ ಅರ್ಜಿದಾರರು ಅಭಿವೃದ್ಧಿಪಡಿಸಿದ 4,492 ಚದರ ಅಡಿ ನಿವೇಶನವನ್ನು ಪಡೆಯಲು ಅರ್ಹರಾಗಿದ್ದಾರೆ. ಆದರೆ, ಅವರಿಗೆ ಹೆಚ್ಚುವರಿಯಾಗಿ 158 ಚದರ ಅಡಿ ಜಾಗ ಮಂಜೂರು ಮಾಡಲಾಗುತ್ತಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ..
ಅಲ್ಲದೆ, ಸರ್. ಎಂ. ವಿಶೇಶ್ವರಯ್ಯ ಬಡಾವಣೆಯ 7ನೇ ಬ್ಲಾಕ್ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ 1ನೇ ಬ್ಲಾಕ್‌ನಲ್ಲಿ ತಲಾ ಒಂದು ನಿವೇಶನ ಮಂಜೂರು ಮಾಡಲಾಗುವುದು. ಜೊತೆಗೆ ಹೆಚ್ಚುವರಿಯಾಗಿ ಮಂಜೂರು ಮಾಡುವ 158 ಚದರ ಅಡಿಗೆ ಅರ್ಜಿದಾರರೇ ₹5.48 ಲಕ್ಷ ಬಾಕಿ ಮೊತ್ತವನ್ನು ಬಿಡಿಎಗೆ ಪಾವತಿಸಬೇಕು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.