ಪತ್ನಿ ಕೆಲಸಕ್ಕಿದ್ದ ಮನೆಯಲ್ಲೇ ₹1 ಕೋಟಿ ಚಿನ್ನ ಕದ್ದ

| Published : Oct 02 2024, 01:03 AM IST

ಸಾರಾಂಶ

ತನ್ನ ಪತ್ನಿ ಮನೆಗೆಲಸ ಮಾಡುತ್ತಿದ್ದ ಉದ್ಯಮಿ ಮನೆಗೆ ಕನ್ನ ಹಾಕಿ ನಗ-ನಾಣ್ಯ ದೋಚಿದ್ದ ಕೆಲಸದಾಳುವಿನ ಪತಿ ಹಾಗೂ ಆತನ ಇಬ್ಬರು ಸಹಚರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಪತ್ನಿ ಮನೆಗೆಲಸ ಮಾಡುತ್ತಿದ್ದ ಉದ್ಯಮಿ ಮನೆಗೆ ಕನ್ನ ಹಾಕಿ ನಗ-ನಾಣ್ಯ ದೋಚಿದ್ದ ಕೆಲಸದಾಳುವಿನ ಪತಿ ಹಾಗೂ ಆತನ ಇಬ್ಬರು ಸಹಚರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲುವತಿ ಗ್ರಾಮದ ಸನ್ಯಾಸಿ ಮಠ ನಂದೀಶ್, ಎಚ್.ಎಂ.ನಂದೀಶ್‌ ಹಾಗೂ ಪ್ರತಾಪ್ ಕುಮಾರ್ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹನುಮೇಗೌಡ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ 1.8 ಕೆ.ಜಿ ಚಿನ್ನಾಭರಣ ಹಾಗೂ 18000 ರು ಹಣ ಸೇರಿ 1.09 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಮಾರುತಿ ಬಡಾವಣೆಯ 3ನೇ ಮುಖ್ಯರಸ್ತೆಯಲ್ಲಿ ನೆಲೆಸಿರುವ ದೂರುದಾರರು ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗಿದ್ದಾಗ ಅವರ ಮನೆಯಲ್ಲಿ ಕಳ್ಳತವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಘಟನಾ ಸ್ಥಳದ ಸುಮುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಈ ಮಾಹಿತಿ ಆಧರಿಸಿ ಧರ್ಮಸ್ಥಳದಿಂದ ಮರಳುತ್ತಿದ್ದ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಮದುವೆ ಸಾಲ ತೀರಿಸಲು ಕಳ್ಳತನ: ಸನ್ಯಾಸಿ ನಂದೀಶ್ ಕ್ರಿಮಿನಲ್‌ ಹಿನ್ನಲೆಯುಳ್ಳವನಾಗಿದ್ದು, ಆತನ ಮೇಲೆ ಕೊಡಿಗೇಹಳ್ಳಿ ಠಾಣೆಯಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿದೆ. ಮಾರುತಿ ಬಡಾವಣೆ ಉದ್ಯಮಿ ಮನೆಯಲ್ಲಿ ನಂದೀಶ್ ಪತ್ನಿ ಕೆಲಸ ಮಾಡುತ್ತಿದ್ದಳು. ಆ ವೇಳೆ ಉದ್ಯಮಿ ಆರ್ಥಿಕ ಸ್ಥಿತಿಗತಿ ಬಗ್ಗೆ ಆತ ಮಾಹಿತಿ ತಿಳಿದುಕೊಂಡಿದ್ದ. ಇತ್ತೀಚಿಗೆ ಮದುವೆ ಸೇರಿ ಇತರೆ ಕೆಲಸಗಳಿಗೆ ಸ್ನೇಹಿತರಿಂದ ಸಾಲ ಪಡೆದು ನಂದೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಈ ಸಮಸ್ಯೆಯಿಂದ ಹೊರ ಬರಲು ಆತ ಅಡ್ಡದಾರಿ ತುಳಿದಿದ್ದ. ಕೆಲ ದಿನಗಳ ಹಿಂದೆ ಉದ್ಯಮಿ ಮನೆಯಲ್ಲಿ ಆತನ ಪತ್ನಿ ಕೆಲಸ ಬಿಟ್ಟಿದ್ದಳು. ಆದರೆ ಆ ಮನೆಯ ಇತರೆ ಕೆಲಸಗಾರರ ಜತೆ ಆಕೆಯ ಸಂಪರ್ಕ ಮುಂದುವರೆದಿತ್ತು. ಹೀಗಿರುವಾಗ ತಮ್ಮ ಕುಟುಂಬದ ಸಮೇತ ಮಂತ್ರಾಲಯಕ್ಕೆ ಮನೆ ಮಾಲಿಕರು ತೆರಳುವ ವಿಚಾರವನ್ನು ನಂದೀಶ್ ಪತ್ನಿಗೆ ಆ ಮನೆಯ ಕೆಲಸಗಾರರು ಹೇಳಿದ್ದರು. ಈ ವಿಷಯ ತಿಳಿದ ನಂದೀಶ್‌, ಉದ್ಯಮಿ ಮನೆಗೆ ಕನ್ನ ಹಾಕಲು ಸಂಚು ರೂಪಿಸಿದ್ದ. ಹಣದಾಸೆಗೆ ಆತನ ಕೃತ್ಯಕ್ಕೆ ಇನ್ನುಳಿದ ಮೂವರು ಸಾಥ್ ಕೊಟ್ಟಿದ್ದಾರೆ.

ಧರ್ಮಸ್ಥಳಕ್ಕೆ ತಪ್ಪು ಕಾಣಿಕೆ ಸಲ್ಲಿಸಿದ್ದ: ಅಂತೆಯೇ ಸೆ.23 ರಂದು ಉದ್ಯಮಿ ಮನೆ ಬೀಗ ಮುರಿದು ಚಿನ್ನಾಭರಣ ನಂದೀಶ್ ಗ್ಯಾಂಗ್ ಚಿನ್ನಾಭರಣ ದೋಚಿತ್ತು. ಈ ಕೃತ್ಯ ಎಸಗಿದ ಬಳಿಕ ತನ್ನ ಪತ್ನಿ ಜತೆ ಧರ್ಮಸ್ಥಳಕ್ಕೆ ನಂದೀಶ್ ತೆರಳಿದ್ದ. ಇತ್ತ ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿ ಮನೆಗೆ ಮರಳಿದ ಉದ್ಯಮಿ ಕುಟುಂಬಕ್ಕೆ ಕಳ್ಳತನ ವಿಚಾರ ತಿಳಿದು ಆತಂಕಗೊಂಡಿದ್ದರು. ಕೂಡಲೇ ಈ ಬಗ್ಗೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರಿಗೆ ಅವರು ದೂರು ನೀಡಿದ್ದರು.

ಈ ತನಿಖೆಗಿಳಿದ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ನಂದೀಶನ ಚಲನವನ ಪತ್ತೆಯಾಯಿತು. ಆಗ ಈತನನ್ನು ದೂರುದಾರರು ಗುರುತು ಪತ್ತೆ ಹಚ್ಚಿದ್ದರು. ಈ ಸುಳಿವು ಆಧರಿಸಿ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು, ಧರ್ಮಸ್ಥಳದಿಂದ ಮರಳುತ್ತಿದ್ದ ನಂದೀಶ್‌ನನ್ನು ಸಿರಾ ತಾಲೂಕಿನ ಹುಳಿಯಾರು ಬಳಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನ ವಿಚಾರಣೆ ಇನ್ನುಳಿದ ಆರೋಪಿಗಳು ಮಾಹಿತಿ ಸಿಕ್ಕಿತು ಎಂದು ಪೊಲೀಸರು ತಿಳಿಸಿದ್ದಾರೆ.