ಸಾರಾಂಶ
ಬೆಂಗಳೂರು : ತಮ್ಮ ಠಾಣೆಗಳಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು ಜನರಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಮೂವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಪ್ರತ್ಯೇಕವಾಗಿ ಒಂದು ಲಕ್ಷ ರುಪಾಯಿ ದಂಡ ವಿಧಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ) ಆದೇಶಿಸಿದೆ.
ಸಿಸಿಬಿ ಇನ್‌ಸ್ಪೆಕ್ಟರ್ ಜಿ.ಟಿ.ಶ್ರೀನಿವಾಸ್, ಚಂದ್ರಾಲೇಔಟ್ ಠಾಣೆ ಇನ್‌ಸ್ಪೆಕ್ಟರ್ ಭರತ್ ಹಾಗೂ ರಾಮನಗರ ಜಿಲ್ಲೆ ಬಿಡದಿ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ. ಈ ದಂಡವನ್ನು ಸರ್ಕಾರ ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ಕೊಡಬೇಕು. ಬಳಿಕ ವಿಚಾರಣೆ ನಡೆಸಿ ಇನ್‌ಸ್ಪೆಕ್ಟರ್‌ಗಳಿಂದ ವಸೂಲಿ ಮಾಡುವಂತೆ ಸರ್ಕಾರಕ್ಕೆ ಆಯೋಗ ಹೇಳಿದೆ.
ಎರಡು ವರ್ಷಗಳ ಹಿಂದೆ ಅಪರಾಧ ಪ್ರಕರಣದ ನೆಪದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಶಂಕರ ಗಣೇಶ್ ಎಂಬುವರನ್ನು ಅಕ್ರಮ ಬಂಧನದಲ್ಲಿಟ್ಟು ಕಿರುಕುಳ ನೀಡಿದ್ದ ಆರೋಪ ಆಗಿನ ಮಾಗಡಿ ಠಾಣೆ ಪಿಐ ಆಗಿದ್ದ ಶ್ರೀನಿವಾಸ್ ಮೇಲೆ ಬಂದಿದೆ. ಅದೇ ರೀತಿ ಭೂ ವಿವಾದದ ಸಂಬಂಧ ಬಸವರಾಜು ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಚಂದ್ರಾಲೇಔಟ್ ಠಾಣೆ ಪಿಐ ಭರತ್ ವಿರುದ್ಧ ಆಯೋಗದಲ್ಲಿ ಪ್ರಕರಣ ದಾಖಲಾಗಿತ್ತು.
ಎರಡು ವರ್ಷಗಳ ಹಿಂದೆ ಅಪರಾಧ ಪ್ರಕರಣ ಕುರಿತು ಎಫ್‌ಐಆರ್ ದಾಖಲಿಸದೆ ಸುಮಿತ್ ಎಂಬಾತನನ್ನು ಅಕ್ರಮದಲ್ಲಿ ಠಾಣೆಯಲ್ಲಿಟ್ಟು ಹಿಂಸೆ ನೀಡಿದ್ದ ಆಪಾದನೆಗೆ ಆಗಿನ ಬ್ಯಾಟರಾಯನಪುರ ಠಾಣೆ ಪಿಐ ಶಂಕರ್ ನಾಯಕ್ ಮೇಲೆ ಬಂದಿತ್ತು. ಈ ಮೂರು ಪ್ರಕರಣಗಳ ವಿಚಾರಣೆ ನಡೆಸಿದ ಆಯೋಗ, ಸಾಂದರ್ಭಿಕ ಪುರಾವೆಗಳನ್ನು ಪರಿಶೀಲಿಸಿದಾಗ ಆಪಾದಿತ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಕರ್ತವ್ಯವೆಸಗಿರುವುದು ರುಜುವಾತಾಗಿದೆ. ಈ ಹಿನ್ನೆಲೆಯಲ್ಲಿ ಇವರಿಗೆ ದಂಡ ವಿಧಿಸಿ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ.