ಐದು ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶಿಗರು ಸೇರಿ 10 ಪೆಡ್ಲರ್ಸ್ ಸೆರೆ : ₹88.22 ಲಕ್ಷದ ಡ್ರಗ್ಸ್‌ ಜಪ್ತಿ

| N/A | Published : Mar 01 2025, 02:02 AM IST / Updated: Mar 01 2025, 05:21 AM IST

drugs

ಸಾರಾಂಶ

ನಗರ ಪೊಲೀಸರು ಐದು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಿದೇಶಿ ಡ್ರಗ್ಸ್‌ ಪೆಡ್ಲರ್‌ಗಳು ಸೇರಿ 10 ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹88.22 ಲಕ್ಷದ ಮೌಲ್ಯದ 787 ಗ್ರಾಂ ಎಂಡಿಎಂಎ, 22 ಕೆ.ಜಿ. ಗಾಂಜಾ, ಮೂರು ದ್ವಿಚಕ್ರ ವಾಹನ ಹಾಗೂ ಐದು ಮೊಬೈಲ್‌ ಜಪ್ತಿ ಮಾಡಿದ್ದಾರೆ.

  ಬೆಂಗಳೂರು : ನಗರ ಪೊಲೀಸರು ಐದು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಿದೇಶಿ ಡ್ರಗ್ಸ್‌ ಪೆಡ್ಲರ್‌ಗಳು ಸೇರಿ 10 ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹88.22 ಲಕ್ಷದ ಮೌಲ್ಯದ 787 ಗ್ರಾಂ ಎಂಡಿಎಂಎ, 22 ಕೆ.ಜಿ. ಗಾಂಜಾ, ಮೂರು ದ್ವಿಚಕ್ರ ವಾಹನ ಹಾಗೂ ಐದು ಮೊಬೈಲ್‌ ಜಪ್ತಿ ಮಾಡಿದ್ದಾರೆ.

ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂವರು ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹77 ಲಕ್ಷ ಮೌಲ್ಯದ 743 ಗ್ರಾಂ ಎಂಡಿಎಂಎ, 1 ಕೆ.ಜಿ. 231 ಗ್ರಾಂ ಗಾಂಜಾ, 4 ಮೊಬೈಲ್‌ ಫೋನ್‌ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಕೆಎಂಎಫ್‌ ಕಾಂಪೌಂಡ್‌ ಬಳಿ ಅಪರಿಚಿತರು ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಇಬ್ಬರು ನೀಡಿದ ಮಾಹಿತಿ ಮೇರೆಗೆ ಮತ್ತೋರ್ವ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.

ಹೊರರಾಜ್ಯದ ಪೆಡ್ಲರ್‌ ಬಂಧನ:

ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹2 ಲಕ್ಷ ಮೌಲ್ಯದ 5 ಕೆ.ಜಿ. 210 ಗ್ರಾಂ ಗಾಂಜಾ, 1 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಸಿಂಗಯ್ಯನಪಾಳ್ಯದ ರೈಲ್ವೆ ಟ್ರಾಕ್‌ ಬಳಿ ಅಪರಿಚಿತ ವ್ಯಕ್ತಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಕಾಟನ್‌ಪೇಟೆ ವ್ಯಾಪ್ತಿಯ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹60 ಸಾವಿರ ಮೌಲ್ಯದ 30 ಗ್ರಾಂ ಎಂಡಿಎಂಎ ಜಪ್ತಿ ಮಾಡಿದ್ದಾರೆ. ಕಾಟನ್‌ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣ

ಬಳಿ ಗಾಂಜಾ ಮಾರಾಟಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹7 ಲಕ್ಷ ಮೌಲ್ಯದ 14 ಕೆ.ಜಿ. 20 ಗ್ರಾಂ ಗಾಂಜಾ ಹಾಗೂ ಎರಡು ಬೈಕ್‌ ಜಪ್ತಿ ಮಾಡಲಾಗಿದೆ.

ಕಲಾಸಿಪಾಳ್ಯ ಎಫ್ ಸ್ಟ್ರೀಟ್‌ನ ಟಿಪ್ಪು ಆರ್ಮರಿ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹1.62 ಲಕ್ಷ ಮೌಲ್ಯದ 9 ಗ್ರಾಂ ಎಂಡಿಎಂಎ, 1 ಕೆ.ಜಿ. 551 ಗ್ರಾಂ ಗಾಂಜಾ ಹಾಗೂ 1 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.